ಮಹಿಳೆಯರ ರಾಜಕೀಯ ಮತ್ತು ಆರ್ಥಿಕ ಸಬಲೀಕರಣವು ಪ್ರಜಾಪ್ರಭುತ್ವದ ಯಶಸ್ಸಿಗೆ ಅತ್ಯಗತ್ಯ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಹಿಳಾ ಮೀಸಲಾತಿ, ಗ್ಯಾರಂಟಿ ಯೋಜನೆಗಳು ಮತ್ತು ಸಮಾಜದಲ್ಲಿ ಮಹಿಳೆಯರ ಪಾತ್ರದ ಕುರಿತು ಅವರು ಕಾಮನ್‌ವೆಲ್ತ್ ಸಮ್ಮೇಳನದಲ್ಲಿ ವಿವರಿಸಿದ್ದಾರೆ.

ಬೆಂಗಳೂರು (ನ.18): ಮಹಿಳೆಯರ ಸಾಮಾಜಿಕ, ಅರ್ಥಿಕ ಪರಿಸ್ಥಿತಿ ಸುಧಾರಿಸುವ ಜತೆಗೆ ರಾಜಕೀಯ ಸಬಲೀಕರಣವೂ ಆಗಬೇಕು. ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿಯಂತೆ, ನಿರೀಕ್ಷಿತ ಎತ್ತರಕ್ಕೇರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರ ಸುದೀರ್ಘ ಹೋರಾಟದ ಫಲ

ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿರುವ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರ ಸುದೀರ್ಘ ಹೋರಾಟದ ಫಲವಾಗಿದೆ. ನಮ್ಮ ನಾಯಕಿ ಸೋನಿಯಾ ಗಾಂಧಿಯವರು ಮಹಿಳಾ ಮೀಸಲಾತಿ ಜಾರಿಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ ಲೋಕಸಭೆಯಲ್ಲಿ ನಮಗೆ ಬೆಂಬಲ ದೊರೆಯಲಿಲ್ಲ. ಬರುವ ಡಿಸೆಂಬರ್‌ನಲ್ಲಿ ಜಾರಿ ಆಗುವ ವಿಶ್ವಾಸವಿದೆ ಎಂದರು.

ಮಹಿಳೆಯರು ರಾಜಕಾರಣ ಪ್ರವೇಶಿಸಲು ಸಾಮಾಜಿಕವಾಗಿ, ಕೌಟುಂಬಿಕವಾಗಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪಂಚಾಯಿತಿ ಮಟ್ಟದಲ್ಲಿ ಅಧಿಕಾರದಲ್ಲಿದ್ದಾರೆ. ಅವರು ಸುಶಿಕ್ಷಿತರಾಗಿದ್ದು, ವ್ಯವಸ್ಥೆಯ ಬಗ್ಗೆ ಅರಿವು ಹೊಂದಿದ್ದಾರೆ. ರಸ್ತೆ, ಸೇತುವೆ, ಬಾವಿ, ಶಾಲೆ ಅಭಿವೃದ್ಧಿ, ಮತ್ತಿತರ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ ಎಂದು ಶ್ಲಾಘಿಸಿದರು.

ಮಹಿಳಾ ಮೀಸಲಾತಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಮಹಿಳೆಯರ ಬೆಂಬಲವಿಲ್ಲದೆ ಪುರುಷರು ಯಶಸ್ವಿಯಾಗಲು ಸಾಧ್ಯವಿಲ್ಲ. ಇದು ನಮ್ಮ ಪ್ರಗತಿ ಪರ ಸಮಾಜದ ತಳಪಾಯವೂ ಹೌದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು..

ಐದರಲ್ಲಿ ನಾಲ್ಕು ಗ್ಯಾರಂಟಿ ಮಹಿಳೆಯರಿಗೆ: ಸಿಎಂ ಡಿಕೆ

ನಮ್ಮ ರಾಜ್ಯದಲ್ಲಿ ಶೇ.42ರಷ್ಟು ವೈದ್ಯರು ಮಹಿಳೆಯರು, ಶೇ.80ರಷ್ಟು ಅರೆ ವೈದ್ಯಕೀಯ ಸಿಬ್ಬಂದಿ ಮಹಿಳೆಯರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶೇ.40ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಪಕ್ಷ ಗ್ಯಾರಂಟಿ ಯೋಜನೆ ಜಾರಿ ತಂದಿದ್ದು, ಐದರಲ್ಲಿ ನಾಲ್ಕು ಗ್ಯಾರಂಟಿಗಳು ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳಾಗಿವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಮೈಸೂರು ಸಿಲ್ಕ್‌ ಖರೀದಿಸಿ:

ಮಹಿಳಾ ಪ್ರತಿನಿಧಿಗಳು ಮೈಸೂರು, ಹಂಪಿಗೆ ಭೇಟಿ ನೀಡಿ. ಕೆಎಸ್‌ಐಸಿ ಮೈಸೂರು ಸಿಲ್ಕ್‌ ವಿಶ್ವ ಪ್ರಸಿದ್ಧಿ. ಅಲ್ಲಿನ ಕೈಗಾರಿಕೆಗೆ ಭೇಟಿ ನೀಡಿ ಸೀರೆ ಖರೀದಿಸಿ. ವಿಧಾನಸೌಧದ ಪ್ರವೇಶದ್ವಾರದಲ್ಲಿ ಮಹಿಳೆಯರಿಗೆ ನಮ್ಮ ರಾಜ್ಯ ನೀಡಿರುವ ಪ್ರಾಮುಖ್ಯತೆಯನ್ನು ತೋರಿಸುವ ಅನುಭವ ಮಂಟಪ ಚಿತ್ರವಿದೆ. ಇದನ್ನು ನೀವು ತಪ್ಪದೇ ವೀಕ್ಷಿಸಿ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬೆಂಗಳೂರು ಟೆಕ್ ಸಮ್ಮಿಟ್‌ಗೆ ಆಹ್ವಾನ:

ಬೆಂಗಳೂರು ಪ್ರತಿಭೆಗಳ ನಗರವೂ ಹೌದು. ಬಿಐಇಸಿಯಲ್ಲಿ ಟೆಕ್‌ ಸಮ್ಮಿಟ್‌ ನಡೆಯುತ್ತಿದ್ದು, ಕಾಮನ್‌ವೆಲ್ತ್‌ ಸಮ್ಮೇಳನ ಮುಗಿದ ಬಳಿಕ ಮೈಸೂರು ಪ್ರವಾಸ ಹೊರಟಿದ್ದೀರಿ. ಹೋಗುತ್ತಾ ಟೆಕ್‌ ಸಮ್ಮಿಟ್‌ಗೆ ಭೇಟಿ ನೀಡಿ. ಸಿಲಿಕಾನ್‌ ಸಿಟಿಯಲ್ಲಿರುವ ವಿಫುಲ ಅವಕಾಶಗಳನ್ನು ಕಣ್ತುಂಬಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದರು.