ಬೆಳಗಾವಿ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಯನ್ನು ಕೀಳಾಗಿ ನಡೆಸಿಕೊಂಡಿಲ್ಲ. ಒಂದು ಕ್ಷಣದ ಘಟನೆಯನ್ನು ತಪ್ಪಾಗಿ ಅರ್ಥೈಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ದಾವಣಗೆರೆ (ಏ.30): ಬೆಳಗಾವಿ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಯನ್ನು ಕೀಳಾಗಿ ನಡೆಸಿಕೊಂಡಿಲ್ಲ. ಒಂದು ಕ್ಷಣದ ಘಟನೆಯನ್ನು ತಪ್ಪಾಗಿ ಅರ್ಥೈಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಬಿಜೆಪಿಯ ಕೆಲ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿ, ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ಅವ್ಯವಸ್ಥೆ, ಗೊಂದಲ ಆಗಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಯತ್ತ ಕೈ ಮಾಡಿ ತೋರಿಸಿದರೆ ಹೊರತು, ಬೇರೆ ಉದ್ದೇಶವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಪಹಲ್ಗಾಂ ಉಗ್ರ ದಾಳಿ: ಮಗುವಿನ ಹಠದಿಂದ ಪಾರಾದ ಕುಟುಂಬ! ಅಂದು ಆಗಿದ್ದೇನು?
ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿಲುವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಯಾರನ್ನೂ ಓಲೈಕೆ ಮಾಡುವ ಪ್ರಶ್ನೆಯೇ ಇಲ್ಲ. ಉಪ ಲೋಕಾಯುಕ್ತರು ಏಷ್ಯಾದ ಎರಡನೇ ಅತಿ ದೊಡ್ಡಕೆರೆ ಸೂಳೆಕೆರೆ ಭೇಟಿ ನೀಡಿದ್ದ ವೇಳೆ ಕೆರೆ ಒತ್ತುವರಿ ಬಗ್ಗೆ ಕ್ರಮಕ್ಕೆ ಸೂಚಿಸಿದ್ದಾರೆ. ನನ್ನ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಸೂಳೆಕೆರೆ ಮಾತ್ರವೇ ಒತ್ತುವರಿಯಾಗಿಲ್ಲ, ಸಾಕಷ್ಟು ಕೆರೆಗಳು ಒತ್ತುವರಿಯಾಗಿವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಜೊತೆಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದರು.
ಕೆರೆಗಳು ರೈತರ ಜೀವನಾಡಿಯಾಗಿವೆ. ಪಶು-ಪಕ್ಷಿಗಳಿಗೆ ಕುಡಿಯಲು ನೀರು, ಪರಿಸರಕ್ಕೆ, ಅಂತರ್ಜಲ ಹೆಚ್ಚಳಕ್ಕೂ ಅತ್ಯವಶ್ಯಕವಾಗಿದೆ. ಮಳೆ ಇಲ್ಲ, ನೀರು ಇಲ್ಲವೆಂದರೆ ನೀರಿಗಾಗಿಯೇ ಯುದ್ಧ ಮಾಡಬೇಕಾದ ಸಂದರ್ಭವೂ ಬರಬಹುದು. ಕೆರೆಗಳನ್ನು ಸಂರಕ್ಷಣೆ ಮಾಡಬೇಕೆಂದರೆ ಒತ್ತುವರಿ ತೆರವಿಗೆ ರೈತರು ಸಹ ಸಹಕಾರ ನೀಡಬೇಕು. ಅಧಿಕಾರಿಗಳು ಗ್ರಾಮೀಣ ಪ್ರದೇಶಗಳ ಜೀವನಾಡಿಯಾದ ಕೆರೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಮೀಕ್ಷೆಯಲ್ಲಿ ಮಾದಿಗ ಅಂತಲೇ ಬರೆಸಿ
ರಾಜ್ಯದ 16 ಜಿಲ್ಲೆಗಳಲ್ಲಿ ಮಾದಿಗ ಸಮುದಾಯವು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಮತ್ತಿತರೇ ಹೆಸರುಗಳನ್ನು ಬರೆಸಲಾಗಿದೆ. ಹಾಗಾಗಿ, ಒಳಮೀಸಲಾತಿ ಜಾರಿಗೆ ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೇ 5ರಿಂದ 101 ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಸಮೀಕ್ಷೆಗೆ ಪ್ರತಿ ಮನೆ ಮನೆಗೆ ಭೇಟಿ ನೀಡುವಾಗ ಮಾದಿಗ ಸಮುದಾಯದವರು ಉಪ ಜಾತಿ ಕಾಲಂನಲ್ಲಿ ಮಾದಿಗ ಅಂತಲೇ ಬರೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯ ಕೈ ತಪ್ಪುತ್ತವೆ.- ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ


