ಬೆಂಗಳೂರು (ಅ.18):  ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ತವರು ಕ್ಷೇತ್ರದಿಂದ ಕಳೆದ ಆರು ತಿಂಗಳಿನಿಂದ ದೂರವಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾನುವಾರದಿಂದ ಮೂರು ದಿನಗಳ ಶಿಕಾರಿಪುರ ಪ್ರವಾಸ ಕೈಗೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ 12 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಶಿಕಾರಿಪುರಕ್ಕೆ ತೆರಳಲಿದ್ದಾರೆ. ಭಾನುವಾರ ವಿಶ್ರಾಂತಿ ಪಡೆದು ಸೋಮವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕಸಬಾ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ, ಉಡುತಡಿ ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳದ ಅಭಿವೃದ್ಧಿ ಕಾಮಗಾರಿ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಂಗಳವಾರ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

'ಬಿಜೆಪಿ ಸೇರಲು ಸಜ್ಜಾದ ಕಾಂಗ್ರೆಸ್‌ನ ಐವರು ಶಾಸಕರು : ಸಿಎಂ BSYರಿಂದ ಬ್ರೇಕ್ ' ...

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತವರು ಕ್ಷೇತ್ರದಿಂದ ದೂರ ಉಳಿದಿದ್ದರು. ಅಲ್ಲದೇ, ಲಾಕ್‌ಡೌನ್‌ ನಿಯಮಾವಳಿ ಸಡಿಲಗೊಂಡ ನಂತರ ಮುಖ್ಯಮಂತ್ರಿಗಳು ಕೊರೋನಾ ಸೋಂಕಿತರಾಗಿದ್ದರಿಂದ ವಿಶ್ರಾಂತಿಯಲ್ಲಿದ್ದರು. ಲಾಕ್‌ಡೌನ್‌ ಜಾರಿ ಮತ್ತು ಸಡಿಲಗೊಂಡ ಬಳಿಕ ಇದೇ ಮೊದಲ ಬಾರಿಗೆ ತವರು ಕ್ಷೇತ್ರದ ಪ್ರವಾಸ ಕೈಗೊಂಡಿದ್ದಾರೆ.