ಬೆಂಗಳೂರು(ನ.15):  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಗಳು ನಿಗದಿಯಾಗಿರುವುದರ ಹತ್ತಿರದ ಸಮಯದಲ್ಲೇ ಕೆಎಎಸ್‌ ಪರೀಕ್ಷೆಗಳನ್ನು ನಿಗದಿ ಮಾಡಿರುವ ಲೋಪ ಸರಿಪಡಿಸಲು ಅವಕಾಶವಿದ್ದರೂ ಪರೀಕ್ಷೆ ಮುಂದೂಡದೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಮುಂದಾಗಿದೆ.

ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳಿಗೆ ಕೇವಲ ಎರಡು ದಿನಗಳ ಅಂತರ ಮಾತ್ರವಿದೆ. ಯುಪಿಎಸ್‌ಸಿ ಪರೀಕ್ಷೆ ನಿಗದಿ ದಿನಾಂಕ ಗೊತ್ತಿದ್ದರೂ ಎರಡೇ ದಿನದಲ್ಲಿ ಕೆಪಿಎಸ್‌ಸಿ ಪರೀಕ್ಷೆಗಳನ್ನು ನಿಗದಿ ಮಾಡಿ ಅಭ್ಯರ್ಥಿಗಳಿಗೆ ಸಿದ್ಧತೆ ಅವಕಾಶ ಇಲ್ಲದಂತೆ ಮಾಡಿದೆ. ಅಲ್ಲದೆ, ಕೆಪಿಎಸ್‌ಸಿ ಅಭ್ಯರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಮುಂದೂಡಲು ಅವಕಾಶವಿದ್ದರೂ ತನ್ನ ಮೊಂಡುತನ ಪ್ರದರ್ಶನ ಪ್ರದರ್ಶನ ಮಾಡುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಮಧ್ಯಪ್ರವೇಶ ಮಾಡಿ ಕೆಪಿಎಸ್‌ಸಿಗೆ ಪರೀಕ್ಷೆ ಮುಂದೂಡುವಂತೆ ತಾಕೀತು ಮಾಡಬೇಕು. ಅಭ್ಯರ್ಥಿಗಳ ಭವಿಷ್ಯ ಹಾಗೂ ಜೀವನದ ಜೊತೆ ಚೆಲ್ಲಾಟ ನಡೆಸದಂತೆ ಕನಿಷ್ಠ ಒಂದು ತಿಂಗಳ ಕಾಲ ಪರೀಕ್ಷೆಗಳನ್ನು ಮುಂದೂಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಗಳು 2021ರ ಜನವರಿ 8 ರಿಂದ 10ರವರೆಗೆ ಹಾಗೂ 16, 17 ರಂದು ನಿಗದಿಯಾಗಿವೆ. ಕೇಂದ್ರ ಲೋಕಸೇವಾ ಆಯೋಗವು ಮೊದಲೇ ಪರೀಕ್ಷಾ ದಿನಾಂಕಗಳನ್ನು ನಿಗದಿ ಮಾಡಿದ್ದರೂ, ಕರ್ನಾಟಕ ಲೋಕಸೇವಾ ಆಯೋಗವು 2020ರ ಡಿಸೆಂಬರ್‌ 21ರಿಂದ 24 ಮತ್ತು ಜನವರಿ 2 ರಿಂದ 5ರವರೆಗೆ ನಿಗದಿ ಮಾಡಿದೆ. ಎರಡೂ ಪರೀಕ್ಷೆಗಳಿಗೂ ಅಂತರ ಕಡಿಮೆ ಇರುವುದರಿಂದ ಎರಡೂ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಲಿದೆ. ಎರಡೂ ಪರೀಕ್ಷೆ ತೆಗೆದುಕೊಂಡ ಲಕ್ಷಾಂತರ ಅಭ್ಯರ್ಥಿಗಳಿಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತಿದೆ. ಕೆಪಿಎಸ್‌ಸಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕು ಎಂದು ಅಭ್ಯರ್ಥಿಗಳು ಆಗ್ರಹ ಮಾಡಿದ್ದಾರೆ.

ಮುಖ್ಯಮಂತ್ರಿಗಳೇ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿ; KPSC ಟೈಂ ಟೇಬಲ್ ಬದಲಿಸಿ

ಸಮರ್ಥನೆ:

ಇನ್ನು ಕೆಪಿಎಸ್‌ಸಿ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ವೇಳಾಪಟ್ಟಿ ಪ್ರಕಟಿಸಿದ್ದೇವೆ. ಪ್ರತಿ ಬಾರಿಯೂ ಫಲಿತಾಂಶ ತಡವಾಗುತ್ತಿದೆ ಎಂಬ ಟೀಕೆಗಳು ಅಭ್ಯರ್ಥಿಗಳಿಂದ ವ್ಯಕ್ತವಾಗುತ್ತಿತ್ತು. ಹೀಗಾಗಿ ಈ ಬಾರಿ ಫಲಿತಾಂಶ ಸಕಾಲದಲ್ಲಿ ನೀಡಲು ಈ ರೀತಿ ಮಾಡಿದ್ದೇವೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಅಭ್ಯರ್ಥಿಗಳನ್ನು ಮತ್ತಷ್ಟುಕೆರಳಿಸಿದೆ.

ಏನಿದು ವಿವಾದ?

ಕರ್ನಾಟಕ ಲೋಕಸೇವಾ ಆಯೋಗವು ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ‘ಎ’ ವೃಂದದ ಸಹಾಯಕ ನಿಯಂತ್ರಕರ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಡಿಸೆಂಬರ್‌ 21ರಿಂದ 24ರವರೆಗೆ ನಿಗದಿಪಡಿಸಿದೆ. ಗೆಜೆಟೆಡ್‌ ಪ್ರೊಬೇಷನರ್‌ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಜನವರಿ 2 ರಿಂದ 5ರವರೆಗೆ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಿ ಇತ್ತೀಚೆಗೆ ಫಲಿತಾಂಶ ಪ್ರಕಟಿಸಲಾಗಿತ್ತು. ಇನ್ನು ಯುಪಿಎಸ್‌ಸಿ ಪರೀಕ್ಷೆಗಳ ವೇಳಾಪಟ್ಟಿಇದಕ್ಕೂ ಮೊದಲೇ ಪ್ರಕಟವಾಗಿತ್ತು. ಹಾಗಿದ್ದರೂ ಕೆಪಿಎಸ್ಸಿ ಪರೀಕ್ಷೆಯನ್ನು ಇದೇ ಅವಧಿಯಲ್ಲಿ ನಿಗದಿಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಒಟ್ಟಿಗೆ ಬಂದಿದೆ KPSC, UPSC ಪರೀಕ್ಷಾ ದಿನಾಂಕ: ತಯಾರಿ ನಡೆಸಲು ಅಭ್ಯರ್ಥಿಗಳಿಗೆ ಸಮಸ್ಯೆ

ವಿದ್ಯಾರ್ಥಿಗಳಿಗೆ ತೊಂದರೆ ನೀಡಬೇಕು ಎಂಬುದು ನಮ್ಮ ಉದ್ದೇಶವಲ್ಲ. ಯುಪಿಎಸ್‌ಸಿ ಪರೀಕ್ಷಾ ದಿನಾಂಕಗಳನ್ನು ಗಮನಿಸಿ ಗೆಜೆಟೆಡ್‌ ಪ್ರೊಬೆಷನರಿ ಪರೀಕ್ಷಾ ದಿನಾಂಕವನ್ನು ನಿಗದಿ ಮಾಡಿದ್ದೇವೆ. ಇದರಿಂದ ಯಾವುದೇ ಅಭ್ಯರ್ಥಿಗಳಿಗೆ ತೊಂದರೆ ಆಗುವುದಿಲ್ಲ. ಪ್ರತಿ ಬಾರಿಯೂ ಫಲಿತಾಂಶ ವಿಳಂಬವಾಗುವ ಆರೋಪ ಕೇಳಿ ಬರುತ್ತಿದೆ. ಈ ಬಾರಿ ಫಲಿತಾಂಶ ಶೀಘ್ರವಾಗಿ ನೀಡಲು ಸಕಾಲದಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ತಿಳಿಸಿದ್ದಾರೆ. 

ಕೆಎಎಸ್‌ ಪರೀಕ್ಷೆ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ: ಸಿಎಂ ಭರವಸೆ

ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಕೇಂದ್ರ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹಾಗೂ ಕರ್ನಾಟಕ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುತ್ತಿರುವ ಪರೀಕ್ಷೆಗಳ ಮಧ್ಯ ಹೆಚ್ಚಿನ ದಿನಗಳ ಅಂತರ ಇಲ್ಲದೇ ಇರುವುದು ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶೀಘ್ರದಲ್ಲೇ ಚರ್ಚಿಸಿ ಪರಿಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಎರಡೂ ಆಯೋಗಗಳು ನಡೆಸುತ್ತಿರುವ ಪರೀಕ್ಷೆಗಳು ಒಂದೆರಡು ದಿನಗಳ ಅಂತರದಲ್ಲಿ ನಡೆಯುತ್ತಿರುವುದು ಈಗಾಗಲೇ ತಮ್ಮ ಗಮನಕ್ಕೆ ಬಂದಿದೆ, ಅಭ್ಯರ್ಥಿಗಳ ಆತಂಕಗೊಂಡಿದ್ದಾರೆ, ಹೀಗಾಗಿ ಶೀಘ್ರದಲ್ಲಿ ಚರ್ಚಿಸಿ ಸಮಸ್ಯೆ ನಿವಾರಿಸಲಾಗುವುದು ಎಂದರು.