* 20 ಜಿಲ್ಲೆಗಳ ಡೀಸಿಗಳಿಗೆ ಬಿಎಸ್‌ವೈ ಸೂಚನೆ* ಮಳೆ ಹೆಚ್ಚಿರುವ ಜಿಲ್ಲೆಗಳ ಜೊತೆ ಸಿಎಂ ಆನ್‌ಲೈನ್‌ ಸಭೆ* 20 ಜಿಲ್ಲೆಗಳ 1710 ಗ್ರಾಮಗಳು ಪ್ರವಾಹ ಪೀಡಿತ 

ಬೆಂಗಳೂರು(ಜೂ.20):  ರಾಜ್ಯದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಕರಾವಳಿ, ಉತ್ತರ ಒಳನಾಡಿನ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಸಂಭಾವ್ಯ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಈಗಿನಿಂದಲೇ ಆಯಾ ಜಿಲ್ಲಾಡಳಿತಗಳು ಸಜ್ಜಾಗಬೇಕು. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ 1000 ಕೋಟಿ ರು. ಅನುದಾನವನ್ನು ವಿಪತ್ತು ನಿರ್ವಹಣೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಪ್ರವಾಹ ಎದುರಾಗಬಹುದಾದ ಪ್ರದೇಶಗಳ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಪ್ರವಾಹ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಕೃಷ್ಣ ಕಣಿವೆಯಲ್ಲಿ ಭಾರೀ ಮಳೆ: ಪ್ರವಾಹ ತಡೆಯಲು ಶಾಶ್ವತ ಕ್ರಮಕ್ಕೆ ಮುಂದಾದ ಸರ್ಕಾರ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿರುವ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021ರಲ್ಲಿ 20 ಜಿಲ್ಲೆಗಳಲ್ಲಿ ಸುಮಾರು 1710 ಗ್ರಾಮಗಳನ್ನು ಪ್ರವಾಹ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದೆ. ಆ ಗ್ರಾಮಗಳ ಜನರ ಮನವೊಲಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ. ಜನ- ಜಾನುವಾರು ರಕ್ಷಣೆಗೆ ಆದ್ಯತೆ ನೀಡಿ. ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಸ್ಥಳಾಂತರ ಪ್ರದೇಶದಲ್ಲಿ ಅಗತ್ಯ ಎಲ್ಲ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಿ. ಇದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದ ವಿಪತ್ತು ನಿರ್ವಹಣೆ ಕ್ರಿಯಾ ಯೋಜನೆ ಅಭಿವೃದ್ಧಿಪಡಿಸಿದ್ದು ಅನುಷ್ಠಾನಗೊಳಿಸಲು ತರಬೇತಿ ನೀಡಲಾಗಿದೆ. ಕೋವಿಡ್‌ ಸೋಂಕು ತಡೆಗೂ ಗಮನ ಹರಿಸಿ. ಒಟ್ಟಿನಲ್ಲಿ ಪ್ರವಾಹ ಬಂದಾಗ ಕಾರ್ಯೋನ್ಮುಖರಾಗದೆ ಈಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ಕಾರ್ಯಪಡೆ, ಕಾರ್ಯಾಚರಣೆ ತಂಡ ಹಾಗೂ ವಾಟ್ಸ್‌ ಅಪ್‌ ತಂಡಗಳ ರಚನೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ 4 ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡಗಳನ್ನು ರಾಯಚೂರು, ಕೊಡಗು, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ರಾಜ್ಯದಿಂದ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡ ರಾಜ್ಯ ವಿಪತ್ತು ಸ್ಪಂದನಾ ತಂಡ ಬಲಪಡಿಸಿ, ತುರ್ತು ಪರಿಹಾರಕ್ಕೆ ಬೇಕಾದ ಸಾಮಗ್ರಿಗಳೊಂದಿಗೆ ಸನ್ನದ್ಧಗೊಳಿಸಲಾಗಿದೆ. ಇವೆಲ್ಲವನ್ನೂ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಭೀಕರ ಪ್ರವಾಹ: ನೋಡ ನೋಡ್ತಿದ್ದಂತೆ ಕೊಚ್ಚಿ ಹೋದ ಹಸು..!

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್‌ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್‌.ಅಶೋಕ್‌, ಶಿವರಾಮ್‌ ಹೆಬ್ಬಾರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌, ಐಜಿಪಿ ಪ್ರವೀಣ್‌ ಸೂದ್‌ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಳೆ ಅನಾಹುತದ ಬಗ್ಗೆ 20 ಜಿಲ್ಲೆಗಳ ಡಿಸಿ, ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಇಂದಿನ ಪರಿಸ್ಥಿತಿ ಮೇಲೆ ಅವಲಂಬಿತರಾಗಿರದೇ ಹೆಚ್ಚು ಎಚ್ಚರಿಕೆ ವಹಿಸಬೇಕು. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರ ಮಾಡುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.