ಬೆಂಗಳೂರು(ಫೆ.06): ಕೋವಿಡ್‌ ಆರ್ಥಿಕ ಸಂಕಷ್ಟದ ನಡುವೆಯೂ ತಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ದೇವರು ಮೆಚ್ಚುವಂತೆ ಕೆಲಸ ಮಾಡಿದ್ದೇನೆ. ಈಗ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದು, ಆಡಳಿತ ಮತ್ತು ಪ್ರತಿಪಕ್ಷ ಎನ್ನದೆ ಎಲ್ಲ ಶಾಸಕರ ಕ್ಷೇತ್ರಗಳ ಯೋಜನೆಗಳಿಗೂ ಅನುದಾನ ನೀಡುತ್ತೇನೆ. ಇನ್ನೆರಡು ತಿಂಗಳಲ್ಲಿ ಬಜೆಟ್‌ ಘೋಷಣೆಗಳ ಪೈಕಿ ಶೇ.85ರಷ್ಟು ಪ್ರಗತಿ ಸಾಧಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅವರು ನೀಡಿದ ಈ ಉತ್ತರಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ನಮ್ಮ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ ಎಂದು ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಯವರು ಅಧಿಕಾರಕ್ಕೆ ಬಂದ ಆರಂಭದಲ್ಲೇ 126 ತಾಲೂಕುಗಳಲ್ಲಿ ಬರಗಾಲ ಇತ್ತು. ಈ ಪರಿಸ್ಥಿತಿಯನ್ನು ನಿಭಾಯಿಸುವ ಕಾಲಕ್ಕೆ ಬೆಳಗಾವಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇತಿಹಾಸದಲ್ಲಿ ಕಂಡರಿಯದ ಭೀಕರ ಪ್ರವಾಹ ಎದುರಾಯಿತು. ನೆರೆಯಿಂದ ಬೀದಿ ಪಾಲಾದ ಜನರಿಗೆ ಎಲ್ಲ ರೀತಿಯ ರಕ್ಷಣೆಗೆ 1465 ಪುನರ್ವಸತಿ ಕೇಂದ್ರ ಆರಂಭಿಸಿ. 4.91 ಲಕ್ಷ ಜನರಿಗೆ ಆಶ್ರಯ ನೀಡಲಾಯಿತು. 2.7 ಲಕ್ಷ ಕುಟುಂಬಕ್ಕೆ ತಲಾ 10 ಸಾವಿರ ರು. ಪರಿಹಾರ, ನೆರೆ ಜಿಲ್ಲೆಗಳಿಗೆ 914 ಕೋಟಿ ರು. ಹಣ ಬಿಡುಗಡೆ ಮಾಡಲಾಯಿತು. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದಲೂ ರೈತರಿಗೆ 4 ಸಾವಿರ ರು. ನೆರವು ನೀಡಲಾಗುತ್ತಿದೆ.

ಬಿಎಸ್‌ವೈ + 20+ ಯತ್ನಾಳ್... ಉತ್ತರಾಯಣದಲ್ಲಿ ಆರಂಭವಂತೆ, ಯುಗಾದಿಗೆ ಅಂತ್ಯವಂತೆ

ಮೊದಲ ಕಂತಲ್ಲಿ 44.67 ಲಕ್ಷ ಕುಟುಂಬಗಳಿಗೆ 893.49 ಕೋಟಿ ರು. ಜಮೆ ಮಾಡಲಾಗಿದೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭತ್ತ ಬೆಳೆಯಲು ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್‌ಗೆ 7500 ರು. ಕರಾವಳಿ ಪ್ಯಾಕೇಜ್‌ ಘೋಷಿಸಿ 5,169 ಬೆಳೆಗಾರರಿಗೆ 2.25 ಕೋಟಿ ರು. ನೀಡಿದ್ದೇವೆ. ರೈತ ಮತ್ತು ನೇಕಾರರಿಗೆ ಸಾಲಮನ್ನಾ ಯೋಜನೆ 63.28 ಕೋಟಿ ರು. ನೀಡಿದ್ದು, ಇದರಿಂದ 16501 ಜನರಿಗೆ ಅನುಕೂಲ ಆಗಿದೆ ಎಂದರು.

ಕೋವಿಡ್‌ ಪರಿಸ್ಥಿತಿಯ ನಿಭಾಯಿಸಲು ಮಾಸ್ಕ್‌, ವೆಂಟಿಲೇಟರ್‌, ಔಷಧಿ, ಟೆಸ್ಟ್‌ ಕಿಟ್‌ ಇತರೆ ಉಪಕರಣಗಳ ಖರಿದಿ ಹಾಗೂ ತಜ್ಞ ವೈದ್ಯರ ನೇಮಕಕ್ಕಾಗಿ 2236 ಕೋಟಿ ರು. ಹೆಚ್ಚವರಿ ಅನುದಾನ ಒದಗಿಸಲಾಗಿದೆ. ಲಾಕ್‌ಡೌನ್‌ನಿಂದ ಸಂಕಷ್ಟದವರಿಗೆ 2096 ಕೋಟಿ ರು. ಪ್ಯಾಕೇಜ್‌ ಕೊಟ್ಟಿದ್ದೇವೆ. ಒಟ್ಟಾರೆ ದೇವರು ಮೆಚ್ಚುವ ರೀತಿ ಕೆಲಸ ಮಾಡಿದ್ದೇನೆ ಎಂದು ಸಂಪೂರ್ಣ ಅಂಕಿ ಅಂಶಗಳ ಸಮೇತ ವಿವರಿಸಿದರು.

ಇಂಧನ, ಕೈಗಾರಿಕೆ, ವಸತಿ ಸೇರಿದಂತೆ ಬಹುತೇಕ ಕ್ಷೇತ್ರದಲ್ಲಿ ನಮ್ಮ ಸಾಧನೆ ಉತ್ತಮವಾಗಿದೆ. ಇಂಧನ ಕ್ಷೇತ್ರದಲ್ಲಿ ಹೆಚ್ಚುವರಿ ವಿದ್ಯುತ್‌ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವ ಸ್ಥಿತಿಯಲ್ಲಿದ್ದೇವೆ. ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ದೇಶದ ನಂ.2 ರಾಜ್ಯವಾಗಿ ಹೊರಹೊಮ್ಮಿದೆ. ಸುಮಾರು 25 ಸಾವಿರ ಹಳ್ಳಿ ರಸ್ತೆ, ಜಿಲ್ಲಾ ಮುಖ್ಯರಸ್ತೆ ಮೇಲ್ದರ್ಜೆಗೇರಿಸಿದೆ. ಹಾಲಿನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದರು.

ಬೆಳ್ಳಂಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಡಿಕೆಶಿ: ಕಾರಣ ?

ಈ ವೇಳೆ, ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನೀವು ಬಜೆಟ್‌ನಲ್ಲಿ ನೀಡಿದ್ದ 223 ಭರವಸೆಗಳಲ್ಲಿ 130ಕ್ಕೆ ಮಾತ್ರ ಆದೇಶ ಮಾುಡಿದ್ದೀರಿ. ರೈತರನ್ನು ಇಸ್ರೇಲ್‌, ಚೀನಾಗೆ ಕಳಿಸುವುದು, ನೀರಾವರಿಗೆ 1.5 ಲಕ್ಷ ಕೋಟಿ ರು. ಒದಗಿಸುವುದು ಸೇರಿದಂತೆ 49 ಭರವಸೆ ಕೈಬಿಟ್ಟಿದ್ದೀರಿ, 43ಕ್ಕೆ ಆದೇಶವೇ ಆಗಿಲ್ಲ ಎಂದರು.

ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಬಜೆಟ್‌ನಲ್ಲಿ ನೀಡಿರುವ ಎಲ್ಲ ಭರವಸೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮಾರ್ಚ್‌ ಕಳೆಯುವುದರ ಒಳಗೆ ಶೇ.85ರಷ್ಟು ಸಾಧನೆ ಮಾಡುತ್ತೇವೆ. ಆಡಳಿತ ಮತ್ತು ಪ್ರತಿಪಕ್ಷಗಳ ಯಾವುದೇ ಸದಸ್ಯರು ಆತಂಕಪಡಬೇಕಿಲ್ಲ. ಆಯಾ ಕ್ಷೇತ್ರಗಳಿಗೆ ಘೋಷಣೆಯಾಗಿರುವ ಎಲ್ಲ ಅಭಿವೃದ್ಧಿ ಯೋಜನೆಗಳಿಗೂ ಸೂಕ್ತ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು. ಉತ್ತರ ಸಮಾಧಾನ ತಂದಿಲ್ಲ ಎಂದ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.