ಬೆಂಗಳೂರು (ಮಾ.24):  ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇನ್ನೇನು ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ಪೊಲೀಸರ ಬಳಿ ಹಾಜರಾಗಿ ಸ್ಪಷ್ಟವಾದ ಹೇಳಿಕೆ ನೀಡುತ್ತಿಲ್ಲ. ಹೀಗಿದ್ದರೂ, ಬಜೆಟ್‌ ಅಧಿವೇಶನದಲ್ಲಿ ಧರಣಿ ನಡೆಸುತ್ತಾ ಕಾಂಗ್ರೆಸ್‌ ಕಾಲಹರಣ ಮಾಡುತ್ತಿದೆ. ಕಾಂಗ್ರೆಸ್‌ನವರಿಗೆ ಚರ್ಚೆ ಮಾಡಲು ಬೇರೆ ವಿಷಯ ಸಿಗದಿದ್ದಕ್ಕೆ ಈ ರೀತಿ ಧರಣಿ ನಡೆಸುವುದು ಎಷ್ಟುಸರಿ? ಸದನದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್‌ ನಾಯಕರು ಸಿದ್ಧರಿಲ್ಲ. ಕುಂಟುನೆಪ ಹೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ...

ಪ್ರತಿಪಕ್ಷ ಕಾಂಗ್ರೆಸ್‌ ಸುಗಮ ಕಲಾಪಕ್ಕೆ ಸರ್ಕಾರದ ಜತೆ ಕೈ ಜೋಡಿಸಬೇಕು. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಸದನದಲ್ಲಿ ಚರ್ಚೆ ಮಾಡಿ, ಸರ್ಕಾರ ಉತ್ತರ ನೀಡಲು ಸಿದ್ಧವಿದೆ. ಇನ್ನೂ ಬಜೆಟ್‌ ಮೇಲಿನ ಚರ್ಚೆ ನಡೆಯಬೇಕು. ಪ್ರತಿಯೊಬ್ಬರೂ ಬಜೆಟ್‌ ವಿಷಯದ ಬಗ್ಗೆ ಮಾತನಾಡಬೇಕಿದೆ. ಸರ್ಕಾರ ಉತ್ತರ ಕೊಟ್ಟಿಲ್ಲ. ದಯವಿಟ್ಟು, ಸದನದ ಕಲಾಪಕ್ಕೆ ಅಡ್ಡಿ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.