ವಿಜಯ್‌ ಮಲಗಿಹಾಳ

ಬೆಂಗಳೂರು [ನ.03]:  ಹಿಂದಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಮೊದಲ ನೂರು ದಿನಗಳನ್ನು ಪೂರೈಸಿದೆ.

ಆದರೆ, ಹಿಂದೆಂದೂ ಕೇಳರಿಯದಂಥ ಪ್ರವಾಹ, ಅತಿವೃಷ್ಟಿಯ ಕಾರಣ ಹಾಗೂ ಹಿಂದಿನ ಕುಮಾರಸ್ವಾಮಿ ಸರ್ಕಾರ ಜಾರಿಗೆ ತಂದ ರೈತರ ಸಾಲಮನ್ನಾ ಯೋಜನೆಯಿಂದಾಗಿ ಹೆಚ್ಚಿನ ಪ್ರಮಾಣದ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ ಎಂಬುದನ್ನು ಸ್ವತಃ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಮೊದಲ ನೂರು ದಿನ ಮುಗಿದಿದೆ. ಮುಂದಿನ ನೂರು ದಿನಗಳ ಕಾಲ ಕಾದು ನೋಡಿ. ಆಗ ಇತರ ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತವೆ ಎಂದಿದ್ದಾರೆ. ಅಲ್ಲದೆ, ತಾವು ರಾಜಕೀಯ ನಿವೃತ್ತಿ ಪಡೆಯುವ ಮಾತೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ಸಂದರ್ಶನ ನೀಡಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು.

ಸಂದರ್ಶನದ ಪ್ರಮುಖ ಭಾಗ ಹೀಗಿದೆ:

* ಹಿಂದೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದಕ್ಕೂ ಮತ್ತು ಈಗ 2019ರಲ್ಲಿ ಮುಖ್ಯಮಂತ್ರಿ ಆಗಿರುವುದಕ್ಕೂ ನಿಮ್ಮ ಪ್ರಕಾರ ಏನು ವ್ಯತ್ಯಾಸವಿದೆ?

ಪ್ರವಾಹ ಸಮಸ್ಯೆ ಮತ್ತು ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ರೈತರ ಸಾಲಮನ್ನಾ ಯೋಜನೆ ಕಳೆದ ಬಿಜೆಪಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾದ ವೇಳೆ ಇರಲಿಲ್ಲ. ಅಷ್ಟನ್ನು ಬಿಟ್ಟರೆ ಪ್ರಮುಖ ವ್ಯತ್ಯಾಸವೇನೂ ಇಲ್ಲ. ಆದರೆ, ಈ ಎರಡಕ್ಕೆ ಹಣ ಹೊಂದಿಸುವುದರ ಜೊತೆಗೆ ಇತರ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುವಂತೆ ಮಾಡುವುದು ಸವಾಲಾಗಿಯೇ ಪರಿಣಮಿಸಿದೆ. ಇದನ್ನು ಸಮರ್ಥವಾಗಿ ಎದುರಿಸುತ್ತೇನೆ.

* ನಿಮ್ಮ ಸರ್ಕಾರದ ನೂರು ದಿನಗಳ ಸಾಧನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೊನ್ನೆ ಅಂಕ ನೀಡಿದ್ದಾರೆ?

ಟೀಕೆ ಮಾಡಬೇಕು ಎಂದು ಟೀಕಿಸಿದರೆ ಏನೂ ಮಾಡುವುದಕ್ಕಾಗುವುದಿಲ್ಲ. ನಾವೇನು ಅಂಕ ಕೊಡಿ ಎಂದು ಕೇಳಿದ್ದೆವಾ? ಅಂಕ ಕೊಡಬೇಕಾದವರು ಈ ರಾಜ್ಯದ ಜನರು. ಅವರು ತೀರ್ಮಾನಿಸಲಿ. ನಾನು ಬೇರೆ ಬೇರೆ ಕಾರಣಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ. ನಾನು ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳಿಕೊಳ್ಳುವುದಿಲ್ಲ. ಪ್ರವಾಹ ಮತ್ತು ಸಾಲಮನ್ನಾ ಯೋಜನೆಗಳಿಂದಾಗಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕೆಲಸ ಮಾಡಲು ಆಗಿಲ್ಲ.

* ಸತತವಾಗಿ ಅಧಿಕಾರಿಗಳ ವರ್ಗಾವಣೆ ಮಾಡಿದ್ದೇ ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಸಾಧನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರಲ್ಲ?

ಸರ್ಕಾರ ಹೊಸದಾಗಿ ಬಂದ ಬಳಿಕ ಶಾಸಕರು ಮತ್ತು ಸಂಸದರು ನಂಬಿಕಸ್ಥ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳುವುದು ಸಾಮಾನ್ಯ. ಅದರಂತೆ ವರ್ಗಾವಣೆ ಮಾಡಲಾಗಿದ್ದು, ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ನನ್ನ ಬಗ್ಗೆ ಹೇಳುವ ಮೊದಲು ಸಿದ್ದರಾಮಯ್ಯ ತಮ್ಮ ಸಾಧನೆ ಏನು ಎಂಬುದನ್ನು ಹೇಳಲಿ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ, ಪ್ರತಿಪಕ್ಷದ ನಾಯಕನಾಗಿ ಏನು ಮಾಡಿದ್ದಾರೆ? ಅವರ ಯೋಗ್ಯತೆಗೆ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕೇವಲ ಒಂದು ಸ್ಥಾನ ಮಾತ್ರ ಗೆಲ್ಲುವಂತಾಯಿತು. ಮಾತೆತ್ತಿದ್ದರೆ ಅನ್ನಭಾಗ್ಯ ಯೋಜನೆ ಹೇಳುತ್ತಾರೆ. ಅದು ಯಾರಪ್ಪನ ಯೋಜನೆ? ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆ. ಅದನ್ನು ತಮ್ಮದು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

* ನಿಮ್ಮ ಈ ಮುಖ್ಯಮಂತ್ರಿ ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿ ಪಡೆಯುವಿರಾ?

ನನ್ನ ಜೀವನದಲ್ಲಿ ನಿವೃತ್ತಿ ಎಂಬುದೇ ಇಲ್ಲ. ನನಗೆ ಈ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಾಲ್ಕನೇ ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಕಳೆದ ನೂರು ದಿನದಲ್ಲಿ ನಾನು ವಿಶ್ರಾಂತಿ ಪಡೆದುಕೊಂಡಿಲ್ಲ. ಹಿಂದೆ ಮುಖ್ಯಮಂತ್ರಿಯಾದಾಗಲೂ ವಿಶ್ರಾಂತಿ ಪಡೆದಿಲ್ಲ. ಬೆಳಗ್ಗೆ ಏಳು ಗಂಟೆಗೆ ಕೆಲಸ ಶುರು ಮಾಡಿದರೆ ರಾತ್ರಿ 11 ಗಂಟೆ ಆಗುವುದೇ ಗೊತ್ತಾಗುವುದಿಲ್ಲ. ಬದುಕಿರುವವರೆಗೂ ಈ ಪಕ್ಷ ಕಟ್ಟಿ, ಸಂಘಟನೆ ಬಲಪಡಿಸುವುದರ ಜೊತೆಗೆ ಪಕ್ಷ ಅಧಿಕಾರದಲ್ಲಿರುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಮುಂದೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ನಂತರದ ವಿಚಾರ. ಆದರೆ, ಮುಂದಿನ ಅವಧಿಯಲ್ಲೂ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಗುರಿ. ಅದಕ್ಕಾಗಿ ಕೈಕಾಲು ಗಟ್ಟಿಇರುವವರೆಗೂ ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ.

* ನಿಮ್ಮ ಸರ್ಕಾರ ಶೀಘ್ರ ಪತನಗೊಳ್ಳಲಿದೆ, ಮಧ್ಯಂತರ ಚುನಾವಣೆ ಎದುರಾಗಲಿದೆ ಎಂಬ ಮಾತು ಪ್ರತಿಪಕ್ಷದ ಮುಖಂಡರು ಆಗಾಗ ಹೇಳುತ್ತಲೇ ಇರುತ್ತಾರೆ?

ಯಾರದ್ದೋ ಮಾತು ಕೇಳಿ ನಿಮ್ಮಂಥವರು ಬರೆಯುತ್ತೀರಿ. ಸರ್ಕಾರ ಉಳಿಯೋದು ಬಿಡೋದು ಜನರ ಕೈಯಲ್ಲಿದೆ. ಉಪಚುನಾವಣೆ ನಂತರ ಗೊತ್ತಾಗುತ್ತದೆ. ಡಿ.9ರಂದು ಉಪಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಈ ಬಗ್ಗೆ ಮಾತನಾಡಬೇಕು.

* ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್‌ ಸಂಚು ನಡೆಸುತ್ತಿದೆ ಎಂದು ನಿಮ್ಮ ಆಪ್ತರೂ ಆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಪಾದನೆ ಮಾಡಿದ್ದಾರೆ?

ಯತ್ನಾಳ ಅವರು ಈ ರೀತಿ ಮಾಡುವುದನ್ನು ಬಿಡಬೇಕು. ಈ ರೀತಿ ಮಾತನಾಡುವುದರಿಂದ ಅವರು ನನಗೇನೂ ಉಪಕಾರ ಮಾಡಿದಂತೆ ಆಗುವುದಿಲ್ಲ. ಉಪಯೋಗವೂ ಆಗುವುದಿಲ್ಲ. ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಾತನಾಡುವುದು ಒಳ್ಳೆಯದು.

* ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಆಗಾಗ ಮಾತು ಕೇಳಿಬರುತ್ತದೆ. ಆದರೆ, ಅದು ವಾಸ್ತವ ರೂಪಕ್ಕೆ ಇಳಿದಿಲ್ಲ? ಬೆಂಗಳೂರಿನ ರಸ್ತೆಗಳ ಗುಣಮಟ್ಟಪಾತಾಳಕ್ಕಿಳಿದಿದೆಯಲ್ಲ?

ಇನ್ನು ಐದಾರು ತಿಂಗಳು ಕಾದು ನೋಡಿ. ಬೆಂಗಳೂರಿನ ಸಮಗ್ರ ಬದಲಾವಣೆ ನಿಮಗೆ ಕಾಣುತ್ತದೆ. ಮುಂದಿನ ನೂರು ದಿನಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳು ಚಾಲನೆ ಪಡೆಯಲಿವೆ. ನಗರದ ರಸ್ತೆಗಳ ಅಭಿವೃದ್ಧಿಗೆ ತಕ್ಷಣ ಸುಮಾರು ಐದಾರು ಸಾವಿರ ಕೋಟಿ ರು. ಬೇಕಾಗುತ್ತದೆ. ಇದನ್ನು ನೇರವಾಗಿ ನಾವೇ ಮಾಡಬೇಕಾ ಅಥವಾ ಹೇಗೆ ಮಾಡಬೇಕು ಎಂಬುದರ ಚರ್ಚೆ ನಡೆದಿದೆ.

* ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರೋಪಾಯ ಕೈಗೊಳ್ಳಲು ಮತ್ತು ಸಾಲಮನ್ನಾ ಯೋಜನೆಗೆ ಹಣ ಹೊಂದಿಸಲು ಬೇರೆ ಇಲಾಖೆಗಳ ಅನುದಾನ ಕಡಿತಗೊಳಿಸುತ್ತಿದ್ದೀರಂತೆ?

ಅದೆಲ್ಲ ಸುಳ್ಳು. ಯಾವ ಇಲಾಖೆಯ ಅನುದಾನವನ್ನೂ ಕಡಿತಗೊಳಿಸಿಲ್ಲ. ಯಾವ ಇಲಾಖೆಯನ್ನೂ ನಿರ್ಲಕ್ಷಿಸಿಲ್ಲ. ಈ ತಿಂಗಳ 5ರಂದು (ಮಂಗಳವಾರ) ಸರ್ಕಾರದ ನೂರು ದಿನಗಳ ಸಾಧನೆಯ ವರದಿಯಲ್ಲಿ ಎಲ್ಲವೂ ನಿಮಗೆ ಗೊತ್ತಾಗಲಿದೆ. ಏನನ್ನೂ ಮುಚ್ಚಿಡುವುದಿಲ್ಲ.

* ನೀವು ಮೂರೂವರೆ ವರ್ಷ ಅಧಿಕಾರಾವಧಿ ಪೂರೈಸುವ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟುಅನುಮಾನ ವ್ಯಕ್ತವಾಗುತ್ತಿದೆ?

ನಾನು ನನ್ನ ಮೂರೂವರೆ ವರ್ಷ ಅಧಿಕಾರ ಪೂರೈಸುತ್ತೇನೆ. ಇದರಲ್ಲಿ ಯಾವ ಅನುಮಾನವೂ ಬೇಡ. ಹಿಂದೆ ಕೂಡ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮೂರ್ನಾಲ್ಕು ಸ್ಥಾನ ಕಡಿಮೆ ಇತ್ತು. ಬೇರೆ ಶಾಸಕರ ಸಹಕಾರದಿಂದ ಆಡಳಿತ ನಡೆಸಲು ಸಾಧ್ಯ ಆಯಿತು. 17 ಶಾಸಕರು ರಾಜೀನಾಮೆ ಸಲ್ಲಿಸಿದ ಕಾರಣ ಸ್ವಾಭಾವಿಕವಾಗಿ ಹೆಚ್ಚು ಸ್ಥಾನಗೊಳಿಸಿರುವ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಎಲ್ಲಾ ಸಮುದಾಯವರೂ ಬಿಜೆಪಿಯೊಂದಿಗೆ ಇದ್ದಾರೆ. ಕೇಂದ್ರ ನಾಯಕತ್ವಕ್ಕೆ ಈ ಸರ್ಕಾರದ ಮೇಲೆ ವಿಶ್ವಾಸ ಇದೆ.

* ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳ ಅನುದಾನ ಕಡಿತಗೊಳಿಸುತ್ತಿದ್ದೀರಿ. ಹಣಕಾಸಿನ ಪರಿಸ್ಥಿತಿ ಹದಗೆಟ್ಟು ಹೋಗಿದೆ ಎಂಬ ಕೂಗು ಕೇಳಿಬಂದಿದೆ?

ನಮ್ಮ ಶಾಸಕರು ಪ್ರತಿದಿನ ಪತ್ರ ತಂದು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ 10 ಕೋಟಿ ರು. ಕೊಡಿ, 50 ಕೋಟಿ ರು. ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಹೊಸ ಬಜೆಟ್‌ ಮಂಡನೆವರೆಗೆ ಕಾಯಿರಿ ಎಂದು ಸಮಾಧಾನ ಮಾಡುತ್ತಿದ್ದೇನೆ. ನಾನು ಯಾವತ್ತೂ ಪಕ್ಷಭೇದ ಮಾಡಿಲ್ಲ. ಹಿಂದೆ ಯಾರು ದೊಡ್ಡ ಪ್ರಮಾಣದ ಅನುದಾನ ಪಡೆದುಕೊಂಡಿದ್ದರೋ ಅದನ್ನು ತೆಗೆದು ಎಲ್ಲರಿಗೂ ಸಮಾನಾಗಿ ಹಂಚಿದ್ದೇನೆ ಅಷ್ಟೆ. ಅದಕ್ಕೇ ಕೂಗು ಹಾಕುತ್ತಿದ್ದಾರೆ.

* ನಿಮಗೆ ಇಷ್ಟಇಲ್ಲದಿದ್ದರೂ ಪಕ್ಷದ ಹೈಕಮಾಂಡ್‌ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದೆಯಲ್ಲ?

ದೂರದೃಷ್ಟಿಇಟ್ಟುಕೊಂಡು ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಪಕ್ಷದ ವರಿಷ್ಠರ ಕ್ರಮವನ್ನು ಸ್ವಾಗತಿಸಿದ್ದೇನೆ. ಮೂವರು ಉಪಮುಖ್ಯಮಂತ್ರಿಗಳಿಂದ ಉತ್ತಮ ಬೆಂಬಲ ಸಿಗುತ್ತಿದೆ. ನನ್ನ ಕೆಲಸದಲ್ಲಿ ನೆರವಾಗುತ್ತಿದ್ದಾರೆ.

* ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದು ಸವಾಲಾಗಿ ಪರಿಣಮಿಸಿದಂತಿದೆ?

ಮುಖ್ಯಮಂತ್ರಿಯಾಗಿ ಹಣಕಾಸಿನ ಇತಿಮಿತಿಯಲ್ಲಿ ರಾಜ್ಯ ಜನಕ್ಕೆ ಸೇವೆ ಮಾಡಿರುವ ಬಗ್ಗೆ ತೃಪ್ತಿ ಇದೆ. ಇದು ಕಡಿಮೆ ಸಾಧನೆಯೇನಲ್ಲ. ಅತಿವೃಷ್ಟಿಯಾದ ಕೂಡಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಕ್ತವಾಗಿ ಸ್ಪಂದಿಸಿದೆ. ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಅವರು ಬಂದು ಪರಿಶೀಲನೆ ನಡೆಸಿದ್ದರು. ಕೇಂದ್ರ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ದೇಶದ ಇತಿಹಾಸದಲ್ಲಿ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ತಲಾ ಐದು ಲಕ್ಷ ರು. ಪರಿಹಾರ ಘೋಷಿಸಿ, ಈಗಾಗಲೇ ಮುಂಗಡವಾಗಿ ಒಂದೊಂದು ಲಕ್ಷ ಹಣವನ್ನು ನೀಡಲಾಗಿದೆ. ನಿರಾಶ್ರಿತರಿಗೆ ತಲಾ ಹತ್ತು ಸಾವಿರ ನೀಡಲಾಗಿದೆ. ಬೆಳೆ ಹಾನಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವುದಲ್ಲದೆ, ಹತ್ತು ಸಾವಿರ ರು.ಗಳನ್ನು ಹೆಚ್ಚುವರಪಿಯಾಗಿ ಸೇರಿಸಿ ಕೊಡುವುದಾಗಿ ಘೋಷಿಸಿದ್ದೇನೆ. ದೇಶದ ಯಾವುದೇ ರಾಜ್ಯಗಳಲ್ಲೂ ಈ ರೀತಿ ಮಾಡಿಲ್ಲ.

* ನೆರೆ ಸಂತ್ರಸ್ತರಿಗಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ?

ಸಿದ್ದರಾಮಯ್ಯ ಕೇವಲ ಪ್ರಚಾರಕ್ಕಾಗಿ ಪಾದಯಾತ್ರೆ ನಡೆಸುತ್ತಾರೆ. ನೆರೆ ಸಂತ್ರಸ್ತರ ಯಾವ ಪ್ರದೇಶಕ್ಕೆ ತೆರಳಿ ಸರಿಯಾಗಿ ಪರಿಶೀಲನೆ ನಡೆಸಿದ್ದಾರೆ. ಕೆಲವೊಂದು ಗ್ರಾಮಕ್ಕೆ ಭೇಟಿ ಕೊಟ್ಟು, ಭೇಟಿಯ ನಾಟಕವಾಡಿದ್ದಾರೆ.

* ನೀವು ದ್ವೇಷದ ರಾಜಕಾರಣ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ?

ನಾನು ದ್ವೇಷದ ರಾಜಕೀಯ ಮಾಡುತ್ತಿಲ್ಲ. ಶಿವಕುಮಾರ್‌ ನನ್ನ ಆತ್ಮೀಯ ಸ್ನೇಹಿತ. ಜಿಲ್ಲಾ ಕೇಂದ್ರಗಳಿಗೆ ಮೊದಲು ವೈದ್ಯ ಕಾಲೇಜು ಕೊಡಬೇಕಲ್ಲವೆ? ತಾಲೂಕು ಕೇಂದ್ರಗಳಿಗೆ ಕೊಡಲು ಸಾಧ್ಯವೇ. ನಾವು ಮಾಡುತ್ತಿರುವ ಒಳ್ಳೆ ಕೆಲಸಗಳು ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಇಷ್ಟವಾಗಿದೆ. ಹೀಗಾಗಿ ಅವರು ಒಳ್ಳೆಯ ಮಾತನ್ನಾಡುತ್ತಿದ್ದಾರೆ.

* ಆಡಳಿತದಲ್ಲಿ ನಿಮ್ಮ ಕುಟುಂಬದ ಸದಸ್ಯರು ಮೂಗುತೂರಿಸುವುದು ಆರಂಭವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ?

ನೋಡಿ, ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಹಾಗೂ ಈಗ ಮುಖ್ಯಮಂತ್ರಿಯಾದ ಮೇಲೂ ನನ್ನ ಕುಟುಂಬದ ಸದಸ್ಯರು ಆಡಳಿತದ ವಿಷಯಗಳಲ್ಲಿ ಮೂಗು ತೂರಿಸಿಲ್ಲ. ಆದರೂ ಇದರ ಬಗ್ಗೆ ಆಗಾಗ ಟೀಕೆ ಟಿಪ್ಪಣೆ ಕೇಳಿಬರುತ್ತದೆ. ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಅಪರೂಪಕ್ಕೆ ಬಂದು ನನ್ನ ಆರೋಗ್ಯ ವಿಚಾರಿಸಿ ಹೋಗುತ್ತಾರೆ ಅಷ್ಟೆ.

* ಪುತ್ರ ವಿಜಯೇಂದ್ರನಿಗೆ ಕಡಿವಾಣ ಹಾಕುವ ಪ್ರಯತ್ನ ನಿಮ್ಮ ಪಕ್ಷದಿಂದಲೇ ಆರಂಭವಾಗಿದೆಯಂತೆ?

ಅದು ಸುಳ್ಳು. ವಿಜಯೇಂದ್ರನಿಗೆ ಕಡಿವಾಣ ಹಾಕುತ್ತಿದ್ದಾರೆ ಎಂಬ ಪ್ರಶ್ನೆಯೇ ಉದ್ಭವ ಆಗುವುದಿಲ್ಲ. ವಿಜಯೇಂದ್ರ ಯುವಕ. ಆತನಿಗೆ ರಾಜ್ಯದಲ್ಲಿ ಪಕ್ಷ ಕಟ್ಟಬೇಕು ಎಂಬ ಕಳಕಳಿ ಇದೆ. ಪಕ್ಷ ಕೊಟ್ಟಜವಾಬ್ದಾರಿಯನ್ನು ನಿಭಾಯಿಸಲಿದ್ದಾನೆ.

* ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೂರ್ನಾಲ್ಕು ದಿನಗಳಲ್ಲೇ ಟಿಪ್ಪು ಜಯಂತಿ ರದ್ದುಪಡಿಸಿದಿರಿ. ಇದೀಗ ನೂರನೇ ದಿನದ ವೇಳೆ ಶಾಲಾ ಪಠ್ಯದಿಂದ ಟಿಪ್ಪು ಕುರಿತ ಪಠ್ಯ ಕೈಬಿಡುವ ಪ್ರಸ್ತಾಪ ಬೇಕಿತ್ತಾ?

ಟಿಪ್ಪು ಜಯಂತಿ ರದ್ದು ಮಾಡಿರುವುದನ್ನು ಮತ್ತೆ ವಾಪಸ್‌ ಪಡೆಯುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಅದನ್ನು ನಾನು ಸ್ಪಷ್ಟಪಡಿಸಿದ್ದೇನೆ. ಆದರೆ, ಟಿಪ್ಪು ಕುರಿತ ವಿಷಯವನ್ನು ಪಠ್ಯದಿಂದ ತೆಗೆಯುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಚರ್ಚೆ ನಡೆಯುತ್ತಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಪಠ್ಯ ಪುಸ್ತಕ ಸಮಿತಿ ಸಭೆ ಸೇರಿ ಆ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಇತಿಹಾಸದಲ್ಲಿ ಟಿಪ್ಪುವಿನ ವಿಚಾರ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಟಿಪ್ಪುವಿನ ಮತ್ತೊಂದು ಮುಖವನ್ನು ನೋಡಬೇಕಲ್ಲವೇ? ಟಿಪ್ಪುವಿನ ಕೃತ್ಯದಿಂದಾಗಿ ಮೇಲುಕೋಟೆಯಲ್ಲಿ ಅಯ್ಯಂಗಾರ್‌ ಸಮುದಾಯ ದೀಪಾವಳಿ ಆಚರಣೆ ಮಾಡುತ್ತಿಲ್ಲ ಎಂಬುದನ್ನೂ ಗಮನಿಸಬೇಕು.

* ನಿಮ್ಮ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನಡುವೆ, ನಿಮ್ಮ ಮತ್ತು ಪಕ್ಷ ರಾಷ್ಟ್ರೀಯ ನಾಯಕ ಬಿ.ಎಲ್‌.ಸಂತೋಷ್‌ ನಡುವೆ ಹೊಂದಾಣಿಕೆ ಕೊರತೆ ಇದೆಯಂತೆ?

ಹಾಗೇನೂ ಇಲ್ಲ. ನಮ್ಮ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಕೊರತೆ ಅಥವಾ ಭಿನ್ನಾಭಿಪ್ರಾಯ ಎನ್ನುವುದು ಇಲ್ಲ. ಈ ಬಗ್ಗೆ ಸುಮ್ಮನೆ ಅಲ್ಲೊಂದು, ಇಲ್ಲೊಂದು ಸುದ್ದಿಯಾಗುತ್ತಿದೆ ಅಷ್ಟೇ. ಸಂತೋಷ್‌ ಅವರೊಂದಿಗೆ ಇತ್ತೀಚೆಗಷ್ಟೇ ಸುದೀರ್ಘ ಮಾತುಕತೆ ನಡೆಸಿದೆ. ಸರ್ಕಾರದ ಆಡಳಿತದ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ. ಅವರ ಸಲಹೆಗಳನ್ನು ಪಡೆದಿದ್ದೇನೆ.

* ಸಂಘ ಪರಿವಾರದೊಂದಿಗೂ ನಿಮಗಿದ್ದ ಮೊದಲಿನ ನಂಟು ಈಗ ಕಡಿಮೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ?

ಸಾಧ್ಯವೇ ಇಲ್ಲ. ಬದುಕಿನ ಕೊನೆಯ ಉಸಿರು ಇರುವ ತನಕ ಸಂಘ ಪರಿವಾರದ ಜತೆ ಸಂಬಂಧ ಮುಂದುವರೆಯುತ್ತದೆ. ನನಗೂ ಮತ್ತು ಸಂಘ ಪರಿವಾರದ ನಡುವೆ ನಂಟು ಕಡಿಮೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಕ್ಲಿಷ್ಟಕರ ಸಮಸ್ಯೆ ಬಂದಾಗಲೂ ನಾನು ಸಂಘ ಪರಿವಾರದ ಮುಖಂಡರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತೇನೆ. ಅದು ನಿರಂತರ.

* ಕೇಂದ್ರ ಸರ್ಕಾರದ ನೀತಿಯಿಂದಾಗಿ ಹಾಲು ಉತ್ಪಾದಕರಿಗೆ ತೊಂದರೆಯಾಗುವ ಅಪಾಯ ಬಂದೊದಗಿದೆಯಲ್ಲವೇ?

ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಹಾಲು ಉತ್ಪಾದಕರಿಗೆ ತೊಂದರೆಯಾಗುವಂತೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಗುಜರಾತ್‌ನಲ್ಲೂ ದೊಡ್ಡ ಪ್ರಮಾಣದಲ್ಲಿ ರೈತರು ಹಾಲು ಉತ್ಪಾದನೆಯಿಂದ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದ ಸಂಸದರೊಟ್ಟಿಗೆ ಸಂಬಂಧಪಟ್ಟಸಚಿವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗುವುದು. ಹಾಲು ಉತ್ಪಾದಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ.

ನಾನು ರಾಜಕೀಯ ನಿವೃತ್ತಿ ಪಡೆಯುವ ಮಾತೇ ಇಲ್ಲ

ನನ್ನ ಜೀವನದಲ್ಲಿ ನಿವೃತ್ತಿ ಎಂಬುದೇ ಇಲ್ಲ. ನನಗೆ ಈ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನಾಲ್ಕನೇ ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಕಳೆದ ನೂರು ದಿನದಲ್ಲಿ ನಾನು ವಿಶ್ರಾಂತಿ ಪಡೆದುಕೊಂಡಿಲ್ಲ. ಹಿಂದೆ ಮುಖ್ಯಮಂತ್ರಿಯಾದಾಗಲೂ ವಿಶ್ರಾಂತಿ ಪಡೆದಿಲ್ಲ. ಬೆಳಗ್ಗೆ ಏಳು ಗಂಟೆಗೆ ಕೆಲಸ ಶುರು ಮಾಡಿದರೆ ರಾತ್ರಿ 11 ಗಂಟೆ ಆಗುವುದೇ ಗೊತ್ತಾಗುವುದಿಲ್ಲ. ಬದುಕಿರುವವರೆಗೂ ಈ ಪಕ್ಷ ಕಟ್ಟಿ, ಸಂಘಟನೆ ಬಲಪಡಿಸುವುದರ ಜೊತೆಗೆ ಪಕ್ಷ ಅಧಿಕಾರದಲ್ಲಿರುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಮುಂದೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ನಂತರದ ವಿಚಾರ. ಆದರೆ, ಮುಂದಿನ ಅವಧಿಯಲ್ಲೂ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಗುರಿ. ಅದಕ್ಕಾಗಿ ಕೈಕಾಲು ಗಟ್ಟಿಇರುವವರೆಗೂ ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ