ಕೊರೋನಾ ಸೋಂಕು ಪತ್ತೆಗೆ ಮನೆ ಸಮೀಕ್ಷೆ: ಸಿಎಂ ಬಿಎಸ್‌ವೈ ಸೂಚನೆ

ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಾಗಿದ್ದರೂ ಕಳೆದ 15 ದಿನಗಳಿಂದ ಸಾವಿನ ದರ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಸೋಂಕು ನಿಯಂತ್ರಿಸಲು ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

CM BS Yediyurappa Instructs officials to Conduct House survey for Corona Find out

ಬೆಂಗಳೂರು(ಸೆ.11): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ಶತಾಯಗತಾಯ ಸೋಂಕು ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ನಡೆಸಬೇಕು. ಹೆಚ್ಚೆಚ್ಚು ಪರೀಕ್ಷೆ ನಡೆಸಿ ಸೋಂಕು ಹರಡುವಿಕೆ ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕೊರೋನಾ ಹರಡುವಿಕೆ ಹಾಗೂ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಾಗಿದ್ದರೂ ಕಳೆದ 15 ದಿನಗಳಿಂದ ಸಾವಿನ ದರ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಸೋಂಕು ನಿಯಂತ್ರಿಸಲು ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಸೋಂಕು ಹೆಚ್ಚು ಹರಡುತ್ತಿರುವ ಪ್ರದೇಶಗಳನ್ನು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಬೂತ್‌ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಿ ಮನೆ-ಮನೆ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

6 ದೇಶಗಳಲ್ಲಿ ಕೊರೋನಾದ 2ನೇ ಅಲೆ, 10 ರಾಜ್ಯಗಳಲ್ಲೂ ಆತಂಕ..!

ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 10ರಿಂದ 30 ಕೋಟಿ ರು. ಹಣ ಇದೆ. ಹೀಗಾಗಿ ಹಣದ ಕೊರತೆ ಇಲ್ಲ. ವೆಂಟಿಲೇಟರ್‌, ಆಕ್ಸಿಜನ್‌ ಸಮಸ್ಯೆಯೂ ಸಹ ಇಲ್ಲ. ಆಕ್ಸಿಜನ್‌ ಕೊರತೆ ಉಂಟಾದರೆ ತಿಳಿಸುವಂತೆ ಸೂಚಿಸಲಾಗಿದೆ ಎಂದರು.

900 ತಜ್ಞ ವೈದ್ಯರ ನಿಯೋಜನೆ:

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ಮುಗಿದಿದೆ. ಎರಡು ದಿನಗಳಲ್ಲಿ 900ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಅಗತ್ಯ ಜಿಲ್ಲೆಗಳಿಗೆ ನಿಯೋಜಿಸಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ವೈದ್ಯರ ಸಮಸ್ಯೆಯೂ ನೀಗಲಿದ್ದು, ಆಯಾ ಜಿಲ್ಲೆಗಳಲ್ಲೇ ಕೊರೋನಾ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಲು ಶ್ರಮಿಸಲಾಗುತ್ತಿದೆ ಎಂದರು.

ಬೂತ್‌ ಮಟ್ಟದ ಟಾಸ್ಕ್‌ ಫೋರ್ಸ್‌ ಕಾರ್ಯಕರ್ತರು ಎಲ್ಲಾ ಪ್ರದೇಶಗಳಿಗೂ ಭೇಟಿ ನೀಡಿ ಸೋಂಕು ಹೆಚ್ಚಿರುವ ಪ್ರದೇಶಗಳ ವರದಿ ನೀಡುತ್ತಾರೆ. ಇದರಂತೆ ಸೋಂಕು ನಿಯಂತ್ರಣಕ್ಕೆ ಸ್ಥಳೀಯ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಜತೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಬಗ್ಗೆಯೂ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಹಾಜರಿದ್ದರು.
 

Latest Videos
Follow Us:
Download App:
  • android
  • ios