ವೈದ್ಯರಿಗೆ ಧೈರ್ಯ ತುಂಬಿದ ಸಿಎಂ ಯಡಿಯೂರಪ್ಪ!
* ಮೆಚ್ಚುಗೆ - ಜೀವ ಉಳಿಸುತ್ತಿರುವ ವೈದ್ಯ ಸಿಬ್ಬಂದಿ ರಾಜ್ಯದ ಅಮೂಲ್ಯ ಆಸಿ
* ವೈದ್ಯರ ಜೊತೆ ಸಂವಾದದಲ್ಲಿ ಯಡಿಯೂರಪ್ಪ ಬಣ್ಣನೆ
* ಲಭ್ಯವಿರುವ ಸೌಲಭ್ಯಗಳನ್ನು ಪಾರದರ್ಶಕತೆಯಿಂದ ಬಳಸಬೇಕು
ಬೆಂಗಳೂರು(ಮೇ.16): ಇತರರ ಜೀವ ಉಳಿಸಲು ತಮಗೆ ಎದುರಾಗಬಹುದಾದ ಅಪಾಯ ಲೆಕ್ಕಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ರಾಜ್ಯದ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದಾರೆ.
ಶನಿವಾರ ಗೃಹ ಕಚೇರಿ ’ಕೃಷ್ಣಾ’ದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ ಸಂದರ್ಭ ತಂದೊಡ್ಡಿರುವ ಸವಾಲುಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಎದುರಿಸಿ, ಲಭ್ಯವಿರುವ ಸೌಲಭ್ಯಗಳನ್ನು ಪಾರದರ್ಶಕತೆಯಿಂದ ಬಳಸಬೇಕು ಎಂದು ಸೂಚಿಸಿದರು. ಕೋವಿಡ್-19ರ ಮೊದಲನೇ ಅಲೆಗಿಂತಲೂ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿರುವುದಲ್ಲದೇ, ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ, ಇಂತಹ ಸಂದರ್ಭದಲ್ಲಿ ಅವರಿಗೆ ಮನೋಸ್ಥೈರ್ಯವನ್ನು ತುಂಬುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
"
18 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್; ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ!
ಸಂವಾದದಲ್ಲಿ ಪಾಲ್ಗೊಂಡಿದ್ದ ವೈದ್ಯರ ಕಾರ್ಯಚಟುವಟಿಕೆ, ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮುಖ್ಯಮಂತ್ರಿಗಳು ಪಡೆದರು. ವೈದ್ಯರು ಸಹ ಕೋವಿಡ್ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದೇ ವೇಳೆ ಕೋವಿಡ್ ಸೋಂಕಿಗೆ ತುತ್ತಾಗಿ, ಗುಣಮುಖರಾಗಿ ಸೇವೆಗೆ ಹಿಂದಿರುಗಿರುವ ವೈದ್ಯರ ಆರೋಗ್ಯ ಮತ್ತು ಅವರ ಮನೆಯವರ ಆರೋಗ್ಯವನ್ನು ಸಹ ವಿಚಾರಿಸಿದರು.
ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯ ಡಾ. ಲಕ್ಷ್ಮೇಪತಿ, ಉಡುಪಿ ಜಿಲ್ಲೆಯ ಮಣಿಪಾಲದ ಡಾ. ಶಶಿಕಿರಣ್ ಉಮಾಕಾಂತ್, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆಯ ಡಾ. ಶ್ರೀನಿವಾಸಲು, ವಿಜಯಪುರದ ಡಾ ಮೀನಾಕ್ಷಿ ಡಿ ಮುತ್ತಪ್ಪನವರ್, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಶರತ್ ಬಾಬು, ಬೆಳಗಾವಿ ಜಿಲ್ಲೆಯ ಗೋಕಾಕದ ಅರವಳಿಕೆ ತಜ್ಞ ಡಾ ಮಹಾಂತೇಶ ಶೆಟ್ಟಪ್ಪನವರ್, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಡಾ ದೀಪಕ್, ತುಮಕೂರು ಜಿಲ್ಲಾ ಆಸ್ಪತ್ರೆಯ ಡಾ ಭಾನುಪ್ರಕಾಶ್, ಮೈಸೂರಿನ ಡಾ. ತ್ರಿವೇಣಿ, ಕಲಬುರಗಿಯ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆಯ ಡಾ ಧನರಾಜ್, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ವೈದ್ಯ ಡಾ ಗಣೇಶ್ ಭಟ್ ಭಾಗವಹಿಸಿದ್ದರು.
ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತ ಡಾ ಕೆ. ವಿ. ತ್ರಿಲೋಕಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ. ಎಸ್. ಹರ್ಷ ಪಾಲ್ಗೊಂಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona