ಬೆಂಗಳೂರು (ಡಿ.20): ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿ ಮಾಡುತ್ತಿರುವ ಕೃಷಿ ಹಾಗೂ ಎಪಿಎಂಸಿ ಕಾಯಿದೆಗಳು ರೈತರ ಪರವಾಗಿವೆ. ಕಾಂಗ್ರೆಸ್‌ ಷಡ್ಯಂತ್ರದಿಂದ ರೈತರು ಪ್ರತಿಭಟನೆ ಮುಂದುವರೆಸಿದ್ದು, ಸರ್ಕಾರಗಳ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಪರವಾದ ಕಾರ್ಯಗಳನ್ನು ಮಾಡುತ್ತಿದ್ದರೂ ಕಾಂಗ್ರೆಸ್‌ ಪಕ್ಷ ಅವರನ್ನು ಎತ್ತಿಕಟ್ಟಿಪಿತೂರಿ ನಡೆಸುತ್ತಿದೆ. ಈ ಬಗ್ಗೆ ಪ್ರತಿ ರೈತನಿಗೂ ಮನವರಿಕೆ ಮಾಡಿಕೊಡಬೇಕು ಎಂದು ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳಿಗೆ ಅವರು ಸೂಚಿಸಿದರು.

ಮತ್ತೋರ್ವ ಬಿಜೆಪಿ ನಾಯಕ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ

ಕೃಷಿ ನಮ್ಮ ಉಸಿರಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಪರವಾಗಿವೆ. ಕೃಷಿಯನ್ನು ಲಾಭದಾಯಕ ಕಸುಬಾಗಿ ಮಾಡಲು ಪ್ರಯತ್ನ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯಿದೆಗಳು ರೈತರ ಪರವಾಗಿದೆ. ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಸತ್ಯಾಗ್ರಹ ನಡೆಸುತ್ತಿರುವವರು ಪ್ರಧಾನಿಯವರು ಕೈಮುಗಿದು ಕೇಳಿದರೂ ಮಾತುಕತೆಗೆ ಬರುತ್ತಿಲ್ಲ. ಆದರೆ, ಕಾಂಗ್ರೆಸ್‌ ಪಕ್ಷ ರೈತರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ರೈತ ತನ್ನ ಉತ್ಪನ್ನವನ್ನು ತನಗಿಚ್ಚಿಸಿದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ರೈತರ ಪರ ನಿರ್ಧಾರ. ಆದರೂ, ಕಾಂಗ್ರೆಸ್‌ ಪಕ್ಷ ರೈತರನ್ನು ಎತ್ತಿಕಟ್ಟಿವಿರೋಧ ಮಾಡುತ್ತಿದೆ. ರೈತ ತಾನು ಬೆಳೆದ ಉತ್ಪನ್ನವನ್ನು ಮಾರಾಟ ಮಾಡಲು ಯಾರ ಅಪ್ಪನ ಅಪ್ಪಣೆ ಬೇಕಿಲ್ಲ ಎಂದು ಕಿಡಿ ಕಾರಿದರು.