ಬೆಂಗಳೂರು(ಡಿ.20):  ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಕೂಡು ರಸ್ತೆಗಳನ್ನು ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು, ಶಿರಾಡಿ ಘಾಟ್‌ ಟನಲ್‌ ಬೈಪಾಸ್‌ ರಸ್ತೆಗೆ ಅನುಮೋದನೆ, ಬೆಂಗಳೂರು ತುಮಕೂರು ಹೆದ್ದಾರಿಯನ್ನು ಅಷ್ಟಪಥವಾಗಿ ಮೇಲ್ಜರ್ಗೆಗೇರಿಸುವ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ 1200 ಕಿ.ಮೀ. ಉದ್ದದ ವಿವಿಧ 33 ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ತಮ್ಮ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ವರ್ಚುವಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಕೂಡುರಸ್ತೆಗಳಲ್ಲಿ ದಟ್ಟಣೆಯನ್ನು ತಗ್ಗಿಸುವ ಯೋಜನೆಗಳಿಗೆ ಕೇಂದ್ರದ ನೆರವು ಬೇಕು. ಹಾಲಿ ಇರುವ ಬೆಂಗಳೂರು ತುಮಕೂರು ಚತುಷ್ಪತ ಹೆದ್ದಾರಿಯನ್ನು ಅಷ್ಟಪಥವನ್ನಾಗಿ ಮೇಲ್ದರ್ಜೆಗೇರಿಸಬೇಕು. ಬೆಂಗಳೂರು-ಮಂಗಳೂರು ವಿಭಾಗದಲ್ಲಿ ಶಿರಾಡಿ ಘಾಟ್‌ ಟನಲ್‌ ಬೈಪಾಸ್‌ ರಸ್ತೆಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕದಲ್ಲಿ 11 ಸಾವಿರ ಕೋಟಿಯ 33 ಹೆದ್ದಾರಿ ಕಾಮಗಾರಿ ಉದ್ಘಾಟಿಸಿದ ಗಡ್ಕರಿ!

ಅಲ್ಲದೆ, ರಾಜ್ಯದಲ್ಲಿ ಈ ವರ್ಷ ಉಂಟಾದ ಭಾರೀ ಪ್ರವಾಹದಿಂದ ಅನೇಕ ಜಿಲ್ಲಾ ಕೇಂದ್ರಗಳ ಮೂಲಕ ಹಾದು ಹೋಗುವ ಹೆದ್ದಾರಿಗಳು ಸೇರಿ ಮೂಲ ಸೌಕರ್ಯಗಳಿಗೆ ವಿವಿಧೆಡೆ ತೀವ್ರ ಹಾನಿಗೊಳಗಾಗಿವೆ. ಅವುಗಳ ದುರಸ್ಥಿಕಾರ್ಯಕ್ಕೆ ಕೇಂದ್ರದಿಂದ ಹೆಚ್ಚುವರಿ ವಿಪ್ಪತ್ತು ಪರಿಹಾರ ಧನ ಬಿಡುಗಡೆಗೆ ಮನವಿ ಮಾಡಿದರು. ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳನ್ನು ಚುರುಕುಗೊಳಿಸಲು ಭೂಸ್ವಾಧೀನಕ್ಕೆ ಸಂಬಂಧಿಸಿದ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಕೇಂದ್ರ ಸರ್ಕಾರವು ಮುಂದಿನ ವರ್ಷಗಳಲ್ಲಿ ರಾಜ್ಯದಲ್ಲಿ 6242 ಕಿ.ಮೀ. ಉದ್ದದ ರಸ್ತೆಗಳ ನಿರ್ಮಾಣಕ್ಕೆ 1.16 ಲಕ್ಷ ಕೋಟಿ ರು. ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವನೆಗಳನ್ನು ಹೊಂದಿರುವುದಾಗಿ ನಿತಿನ್‌ ಗಡ್ಕರಿ ಅವರು ಹೇಳಿರುವುದು ಅತ್ಯಂತ ಸಂತಸದ ವಿಚಾರ. ಇದನ್ನು ನೋಡಿದಾಗ ಕರ್ನಾಟಕಕ್ಕೆ ಗಡ್ಕರಿ ಅವರು ವಿಶೇಷ ಸ್ಥಾನ ನೀಡಿರುವುದು ತಿಳಿಯುತ್ತದೆ. ಗಡ್ಕರಿ ಅವರು ಮೊದಲಿನಿಂದಲೂ ರಾಜ್ಯದ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಬರುತ್ತಿದ್ದಾರೆ. ಇದರಿಂದ ರಾಜ್ಯದ ರಸ್ತೆ ಜಾಲ ವಿಸ್ತಾರವಾಗಿದ್ದು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.