Asianet Suvarna News Asianet Suvarna News

ಬಾಲ್ಯದಲ್ಲಿ ನಿಂಬೆಹಣ್ಣು ಮಾರುತ್ತಿದ್ದ ಬಿಎಸ್‌ವೈ!

ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಅವರ ಬಾಲ್ಯ ಹಾಗೂ ವಿದ್ಯಾಭ್ಯಾಸದ ಕುರಿತು ಕೆಲವು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

CM BS Yediyurappa biography To be released Soon
Author
Bengaluru, First Published Dec 29, 2019, 7:18 AM IST
  • Facebook
  • Twitter
  • Whatsapp

ಕೆ.ಎನ್‌.ರವಿ

ಮಂಡ್ಯ [ಡಿ.29]: ಮಂಡ್ಯದ ಮಾರುಕಟ್ಟೆಯಲ್ಲಿ ನಿಂಬೇ ಹಣ್ಣು ಮಾರಿಕೊಂಡಿದ್ದ ವ್ಯಾಪಾರಿ ಬಾಲಕ ಈಗ ರಾಜ್ಯದ ಮುಖ್ಯಮಂತ್ರಿ!

ರಾಜ್ಯವನ್ನೇ ಆಳುವ ಅದೃಷ್ಠವನ್ನು ಪಡೆದುಕೊಂಡಿರುವ ಬೂಕನಕೆರೆ ಬಸವಲಿಂಗಪ್ಪ ಯಡಿಯೂರಪ್ಪ 4 ಬಾರಿ ಸಿಎಂ ಆಗಿದ್ದಾರೆ. ಈಗ ಮತ್ತೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಯೋಗ ಪಡೆದುಕೊಂಡಿದ್ದಾರೆ. ಯಡಿಯೂರಪ್ಪನವರು ಕಡು ಬಡತನದಲ್ಲಿ ಬೆಳೆದು ಉತ್ತುಂಗಕ್ಕೆ ಬಂದವರು. ತೀರಾ ಚಿಕ್ಕ ವಯಸ್ಸಿನಲ್ಲೇ ತಂದೆ -ತಾಯಿಗಳನ್ನು ಕಳೆದುಕೊಂಡು ತಾತ ಸಂಗಪ್ಪ ಹಾಗೂ ಭಾವ ಬಸವರಾಜು ಅವರ ಆಶ್ರಯ - ಮಾರ್ಗದರ್ಶನದಲ್ಲಿ ಬೆಳೆದು ಬಂದವರು. 1955 ರಿಂದ ಮಂಡ್ಯದ ಮುನ್ಸಿಪಲ್‌ (ಪುರಸಭೆ ಹೈಸ್ಕೂಲ್‌) ಸ್ಕೂಲ್‌ನಲ್ಲಿ 5 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದರು. ಮಾಜಿ ಸಚಿವ ಡಿ ಸಿ ತಮ್ಮಣ್ಣ ಸೇರಿದಂತೆ ಅನೇಕ ಗೆಳೆಯರು ಈ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು.

ವಿದ್ಯಾರ್ಥಿ ದೆಸೆಯಲ್ಲಿಯೇ ಯಡಿಯೂರಪ್ಪನವರು ಅತ್ಯಂತ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದ್ದರು. ನಿಂಬೇಹಣ್ಣಿನ ವ್ಯಾಪಾರ, ಸಂಘ ಪರಿವಾರ ಸಂಪರ್ಕದ ಜೊತೆಗೆ ಓದಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದರು. ಯಾವುದೇ ಕೆಲಸದಲ್ಲಿ ತೋರುವ ನಿಷ್ಠೆ, ಹಠ ಇದ್ದರೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ಯಡಿಯೂರಪ್ಪನವರ ಜೀವನ ಒಂದು ಉದಾಹರಣೆಯಾಗಲಿದೆ. ಯಡಿಯೂರಪ್ಪನವರ ಗೆಳೆಯರಾಗಿರುವ ಮಂಡ್ಯ ಮಾರುಕಟ್ಟೆಯ ಹಿರಿಯ ತರಕಾರಿ ವ್ಯಾಪಾರಿ ಎಂ. ಬಿ. ದೇವರಸು ತಮ್ಮ ನೆನಪಿನ ಬುತ್ತಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಾಲ್ಯದಿನಗಳ ಹೋರಾಟದ ಬದುಕಿನ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿ ಇಟ್ಟರು.

ನಿಂಬೇಹಣ್ಣು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿ ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೂ ಭವಿಷ್ಯ ಕಂಡಿರಲಿಲ್ಲ. ಯಡಿಯೂರಪ್ಪ ಕಷ್ಟಜೀವಿ, ಹೋರಾಟ ಮನೋಭಾವ, ಜೊತೆಗೆ ಒಂದಷ್ಟುಮುಂಗೋಪ. ಆದರೆ ಛಲವಂತ. ಹಠವಾದಿ ಎಂದು ದೇವರಸು ಅವರು ತಾವು ಕಂಡ ಕಳೆದ 50 ವರ್ಷ ಹಿಂದೆ ಯಡಿಯೂಪ್ಪನವರ ಹೇಗಿದ್ದರು ? ಅವರು ಗುಣ ಸ್ವಭಾವ ಹೇಗಿತ್ತು? ಎನ್ನುವುದನ್ನು ಬಿಡಿಸಿ ಹೇಳಿದರು.

ನಿಂಬೇಹಣ್ಣಿನ ಚಿಲ್ಲರೇ ವ್ಯಾಪಾರಿ

ತಂದೆ - ತಾಯಿ ತೀರಿ ಹೋದ ಮೇಲೆ ತಾತ ಸಂಗಪ್ಪನವರು ಮೊಮ್ಮಗ ಯಡಿಯೂರಪ್ಪನವರನ್ನು ಮಂಡ್ಯಕ್ಕೆ ಕರೆದುಕೊಂಡು ಬಂದರು. ಪೇಟೆ ಬೀದಿ ಹೊರ ವಲಯದಲ್ಲಿ ಬಾಡಿಗೆ ಮನೆ. ತಾತ, ಮೊಮ್ಮಗ ಹಾಗೂ ಅಕ್ಕ - ಭಾವ ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಿದ್ದರು. ತಾತ ಸಂಗಪ್ಪ ಹಳ್ಳಿಗಳಿಗೆ ಹೋಗಿ ನಿಂಬೆಹಣ್ಣನ್ನು ಖರೀದಿಸಿ ತಂದ ನಂತರ ಮಂಡ್ಯದ ಮಾರುಕಟ್ಟೆಯಲ್ಲಿ ಇಟ್ಟು ಚಿಲ್ಲರೆ ವ್ಯಾಪಾರ ಮಾಡುತ್ತಿದ್ದರು. ಯಡಿಯೂರಪ್ಪನವರೂ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಮಾರಾಟ ಮಾಡುತ್ತಿದ್ದರು.

ಆಗ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದ ದೇವರಸು ಅವರು ಸಂಗಪ್ಪ ಹಾಗೂ ಯಡಿಯೂರಪ್ಪನವರಿಗೆ ಹೋಲ್‌ ಸೇಲ್‌ ದರದಲ್ಲಿ ಮಂಡ್ಯದ ಮಾರುಕಟ್ಟೆಯಲ್ಲೇ ನಿಂಬೆಹಣ್ಣು ಕೊಟ್ಟಿದ್ದರು. ಯಡಿಯೂರಪ್ಪ ಅವರು ಬೆಳಿಗ್ಗೆ 6 ಗಂಟೆಯಿಂದ 9.30 ರವರಗೆ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಮಾರುತ್ತಿದ್ದರು. ನಂತರ ಮುನ್ಸಿಫಲ್‌ ಹೈಸ್ಕೂಲ್‌ ಗೆ ಓದಲು ಹೋಗುತ್ತಿದ್ದರು. ಆದರೆ ಪ್ರತಿ ಶನಿವಾರ ಮತ್ತು ಭಾನುವಾರ ಮಾತ್ರ ದಿನವಿಡೀ ನಿಂಬೇಹಣ್ಣು ವ್ಯಾಪಾರ ಮಾಡುತ್ತಿದ್ದರು ಎಂದು ಅಂದಿನ ಘಟನೆಗಳನ್ನು ದೇವರಸು ಮೆಲುಕು ಹಾಕಿದರು.

ನಿಂಬೆಹಣ್ಣು ವ್ಯಾಪಾರ, ವ್ಯಾಸಂಗದ ನಡುವೆಯೇ ಯಡಿಯೂರಪ್ಪ ಅವರಿಗೆ ಆರ್‌ಎಸ್‌ಎಸ್‌ ನಂಟು ತುಂಬಾ ಇತ್ತು. ಬಿಡುವು ಮಾಡಿಕೊಂಡು ಸ್ವರ್ಣ ಸಂದ್ರದಲ್ಲಿದ್ದ ಸಂಘ ಪರಿವಾರ ಕಚೇರಿಗೆ ಖಾಕಿ ಚಡ್ಡಿ ಹಾಕಿಕೊಂಡು ಪೇರೆಡ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಕಾರ್ಯಕ್ರಮ, ಬೈಠಕ್‌ಗಳಿಗೆ ಹೋಗುತ್ತಿದ್ದರು. ಬ್ರಾಹ್ಮಣ ಹುಡುಗರ ಒಡನಾಟವೇ ಹೆಚ್ಚಿತ್ತು ಎನ್ನುವುದನ್ನು ಗಮನಿಸಿದ್ದೆ. ಯಡಿಯೂರಪ್ಪನವರ ಜೊತೆಯಲ್ಲಿ ಸದಾ ಐವರು ಗೆಳೆಯರ ತಂಡವೊಂದು ಸದಾ ಇರುತ್ತಿತ್ತು. ಮಾರುಕಟ್ಟೆಗೂ ಬರುತ್ತಿದ್ದರು. ಶಾಲೆಗೂ ಜೊತೆಯಾಗಿ ಹೋಗುತ್ತಿದ್ದರು. ಈ ಐವರಲ್ಲಿ ಮೂರು ಜನ ತೀರಿ ಹೋಗಿದ್ದಾರೆ. ಮಹಾಬಲರಾಯರು ಹಾಗೂ ಮತ್ತೊಬ್ಬರು ಈಗ ಇದ್ದಾರೆ. ಈಗಲೂ ಅವರಗಳು ಸಂಪರ್ಕ ಇಟ್ಟುಕೊಂಡಿದ್ದಾರೆನ್ನುವುದು ಮಾತ್ರಗೊತ್ತು ಎನ್ನುತ್ತಾರೆ ದೇವರಸು.

ವ್ಯಾಪಾರ ಮಾಡಿಕೊಂಡು ಓದುತ್ತಿದ್ದರು !

15-16 ವರ್ಷದ ಯಡಿಯೂರಪ್ಪನವರು ವ್ಯಾಪಾರ ಮಾಡುವಾಗಲೂ ಅತಿಯಾದ ಶಿಸ್ತಿನ ಮನುಷ್ಯ. ಕೋಪ ಹೆಚ್ಚು. ನಕ್ಕಿದ್ದೇ ಅಪರೂಪ. ನಾನೊಬ್ಬನೇ ಯಡಿಯೂಪ್ಪನವರನ್ನೇ ಹೆದರಿಸುವಂತೆ ಗಟ್ಟಿಧ್ವನಿಯಲ್ಲಿ ಮಾತನಾಡುತ್ತಿದ್ದೆ. ಕಠಿಣ ಪರಿಶ್ರಮ, ಹೋರಾಟ ಜೀವಿಯಾಗಿದ್ದ ಯಡಿಯೂರಪ್ಪನವರು ನಿಂಬೆಹಣ್ಣಿನ ವ್ಯಾಪಾರಕ್ಕೆ ಕುಳಿತಾಗ ಗ್ರಾಹಕರು ಇಲ್ಲದ ವೇಳೆಯಲ್ಲೇ ಅಲ್ಲೇ ಪುಸ್ತಕ ಇಟ್ಟುಕೊಂಡು ಓದುತ್ತಿದ್ದರು. ಈ ಹುಡುಗನಿಗೆ ಓದಿನಲ್ಲಿ ಎಷ್ಟುಶ್ರದ್ಧೆ ಇದೆ ಎಂದು ಸಹ ವ್ಯಾಪಾರಿಗಳು ಮಾತನಾಡಿಕೊಳ್ಳುತ್ತಿದ್ದರು ಎಂದು ದೇವರಸು ಸ್ಮರಿಸಿದರು.

ಅಂದು ದಸರಾ ನೋಡಲು ಕಾಸಿರಲಿಲ್ಲ. ಇಂದು ದಸರಾ ಉದ್ಘಾಟಿಸುವ ಭಾಗ್ಯ:

ಯಡಿಯೂರಪ್ಪನವರಿಗೆ ಮಂಡ್ಯದಲ್ಲಿದ್ದಾಗ ದಸರಾ ನೋಡುವುದು ಬಲು ಇಷ್ಟವಾದ ಸಂಗತಿ. ಆದರೆ ದುಡ್ಡೇ ಇರುತ್ತಿರಲಿಲ್ಲ. 2 ಆಣೆ ಕೊಟ್ಟು ದಿನಪೂರ್ತಿ ಬಾಡಿಗೆ ಸೈಕಲ್‌ ತೆಗೆದುಕೊಂಡು ಮೈಸೂರಿಗೆ ದಸರಾ ನೋಡಲು ಹೋಗುತ್ತಿದ್ದರು. ಆ ಕಾಲದಲ್ಲಿ 2 ಆಣೆ ಹೊಂದಿಸುವುದೇ ದೊಡ‚್ಡ ಕಷ್ಟವಾಗಿತ್ತು. ಆದರೂ ದಸರಾ ನೋಡದೇ ಬಿಡುತ್ತಿರಲಿಲ್ಲ. ಆದರೆ ಈಗ ರಾಜ್ಯದ ಮುಖ್ಯಮಂತ್ರಿಯಾಗಿ ದಸರಾ ಉದ್ಘಾಟನೆಯ ಭಾಗ್ಯ ಯಡಿಯೂರಪ್ಪನವರಿಗೆ ಸಿಕ್ಕಿದೆ ಎಂದರೆ ತುಂಬಾ ಸಂತೋಷ ಸಂಗತಿ ಎನ್ನುತ್ತಾರೆ ದೇವರಸು.

ಯಾರ ಹಣೆ ಬರಹದಲ್ಲಿ ಏನಿದೆಯೋ ಗೊತ್ತಿಲ್ಲ. ಕಷ್ಟ, ಪರಿಶ್ರಮ, ನಿಷ್ಟೆ, ಹೋರಾಟ ಮನೋಭಾವನೆಯ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಗೆಲ್ಲುತ್ತಾರೆ ಎನ್ನುವುದಕ್ಕೆ ಯಡಿಯೂರಪ್ಪ ಅವರು ಒಂದು ಉದಾಹರಣೆ ಎಂಬುದು ದೇವರಸು ಅವರ ಅಭಿಮತ.

ಸಿಎಂ ಯಡಿಯೂರಪ್ಪನವರು ಕಷ್ಟಜೀವಿ. ಈಗ ಸುಖ ಬಂದಿರಬಹುದು. ಆದರೆ 50-55 ವರ್ಷಗಳ ಹಿಂದೆ ನಿಂಬೇ ಹಣ್ಣು ಮಾರಿಕೊಂಡು ಜೀವನ ಸಾಗಿಸುವ ದಿನಗಳನ್ನು ನೆನಪಿಸಿಕೊಂಡರೆ ನಿಜಕ್ಕೂ ಅಂತಹ ಹೋರಾಟದ ಬದುಕು ಇಂದು ದಾರಿ ತೋರಿಸಿದೆ ಎಂದು ಎನಿಸುತ್ತದೆ. ಯಡಿಯೂರಪ್ಪನವರು ನಿಂಬೆಹಣ್ಣು ಮಾರುತ್ತಿದ್ದ ಮಂಡ್ಯದ ಮಾರುಕಟ್ಟೆಇಂದಿಗೂ ಹಾಳಾಗಿ ಹೋಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಮಾರುಕಟ್ಟೆಗೆ ಭೇಟಿ ನೀಡಿ ಮಾರುಕಟ್ಟೆಗೆ ಕಾಯಕಲ್ಪ ಮಾಡಿದರೆ ವ್ಯಾಪಾರಸ್ಥರು ಮತ್ತು ಗ್ರಾಹಕರು ನೆನಪಿಸಿಕೊಳ್ಳುತ್ತಾರೆ. ನಮ್ಮ ಗೆಳೆತನಕ್ಕೆ ಸಾಕ್ಷಿಯಾಗಿ ಇದೊಂದು ಸಾರ್ವಜನಿಕ ಕೆಲಸವನ್ನು ಯಡಿಯೂರಪ್ಪನವರು ಮಾಡಿಕೊಟ್ಟರೆ ನಾನು ಧನ್ಯ.

- ಎಂ.ಬಿ.ದೇವರಸು, ಯಡಿಯೂರಪ್ಪನವರ ಸಮಕಾಲೀನರು

ಎಂ.ಬಿ.ದೇವರಸು.

Follow Us:
Download App:
  • android
  • ios