Asianet Suvarna News Asianet Suvarna News

ಜನಸೇವಕ ಹೆಸರಿನಲ್ಲಿ ನಾಗರೀಕರ ಮನೆ ಬಾಗಿಲಿಗೆ ಸರ್ಕಾರದ ಸೇವೆ!

* ಜನಸೇವಕ, ಜನಸ್ಪಂದನೆ, ಸಾರಿಗೆ ಇಲಾಖೆ ಸಂಪರ್ಕ ರಹಿತ ಆನ್ ಲೈನ್ ಸೇವೆ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ.

* ಜನಸೇವಕ ಹೆಸರಿನಲ್ಲಿ ನಾಗರೀಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು.

* ಜನಸ್ಪಂದನ ಹೆಸರಿನಲ್ಲಿ ನಾಗರೀಕರ ಕುಂದು ಕೊರತೆ ಆಲಿಸಲು ಸಹಾಯವಾಣಿ ನಂಬರ್ ಬಿಡುಗಡೆ.

* ಮೊಬೈಲ್ ಆಪ್, ವೆಬ್ ಪೋರ್ಟಲ್ ಬಿಡುಗಡೆ.

CM Bommai launches Janasevaka programme offering 56 services pod
Author
Bangalore, First Published Nov 1, 2021, 5:12 PM IST

ಬೆಂಗಳೂರು(n.01): ಸಿಎಂ ಬಸವರಾಜ್​ ಬೊಮ್ಮಾಯಿ(Basavaraj Bommai) ಇಂದು, ಸೋಮವಾರ ಜನಸೇವಕ, ಜನಸ್ಪಂದನೆ, ಸಾರಿಗೆ ಇಲಾಖೆ(Transport Department) ಸಂಪರ್ಕ ರಹಿತ ಆನ್ ಲೈನ್ ಸೇವೆ ಕಾರ್ಯಕ್ರಮಗಳಿಗೆ ಷಾಲನೆ ನೀಡಿದ್ದಾರೆ. ಜನಸ್ಪಂದನ(Janspandan) ಹೆಸರಿನಲ್ಲಿ ನಾಗರೀಕರ ಕುಂದು ಕೊರತೆ ಆಲಿಸಲು ಸಹಾಯವಾಣಿ ನಂಬರ್ 1902 ಸಹಾಯವಾಣಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ ತಾವೇ ಖುದ್ದು ಸಹಾಯವಾಣಿಗೆ ಮೊದಲ ಕರೆ ಮಾಡಿಮ ಸಿಬ್ಬಂದಿ ಜತೆ ಫೋನ್‌ನಲ್ಲಿ ಮಾತನಾಡಿ ವಿವರ ಪಡೆದಿದ್ದಾರೆ. ಇದೇ ವೇಳೆ ವಿಧಾನಸೌಧದಲ್ಲಿ ಗಿಡಗಳಿಗೆ ನೀರು ಹಾಕಿ ಜನ ಸ್ಪಂದನ ಲೋಕಾರ್ಪಣೆ ಮಾಡಿದ್ದಾರೆ. 

ಒಂದು ಕಡತ ನಾಲ್ಕಕ್ಕಿಂತ ಹೆಚ್ಚು ಕೈಗೆ ಹೋಗುವಂತಿಲ್ಲ: ನವೆಂಬರ್‌ನಿಂದ ಹೊಸ ಯೋಜನೆ!

ಜನಸೇವಕ ಹೆಸರಿನಲ್ಲಿ ನಾಗರೀಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಲ್ಲೇಶ್ವರಂ(Malleshwaram) ಕ್ಷೇತ್ರದ ಎರಡು ರಸ್ತೆಗಳಲ್ಲಿ ಪ್ರಾಯೋಗಿಕ ಜನ ಸೇವಕ ಯೋಜನೆಗೆ ಚಾಲನೆ ನೀಡಿದ್ದಾರೆ. ಸ್ಕೂಟರ್ ಚಲಾಯಿಸಿಕೊಂಡು ಮನೆ ಮನೆಗೆ ಯೋಜನೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂಗೆ ರಸ್ತೆಯುದ್ದಕ್ಕೂ ಹೂ ಸುರಿಮಳೆ ಮೂಲಕ ಸ್ವಾಗತಿಸಲಾಗಿದೆ. ಈ ನೂತನ ಸೇವೆ ಮೂಲಕ ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಉದ್ಯೋಗ ಕಾರ್ಡ್, ವಿಧವಾ ವೇತನ, ಪಹಣಿ, ಪಿಂಚಣಿಯನ್ನು ಜನರಿಗೆ ತಲುಪಿಸಲು ಸರ್ಕಾರ ಮುಂದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಜನರ ಸುತ್ತಲೂ ಆಡಳಿತ ಇರಬೇಕು, ಅಭಿವೃದ್ಧಿ ಇರಬೇಕು. ಜನರ ಮನೆ ಬಾಗಿಲಿಗೆ ಸರ್ಕಾರ ಹೋಗುವಂತಹ ಕೆಲಸ ಇದಾಗಿದೆ. ಜನಸೇವಕ, ಜನ ಸ್ಪಂದನೆ, ಸಾರಿಗೆ ಇಲಾಖೆ ಯೋಜನೆ. ಈ ಯೋಜನೆ ಮೂಲಕ ಜನರ ಮನೆ ಬಾಗಿಲಿಗೆ ಸರ್ಕಾರ ಹೋಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ನಾನು ಸಿಎಂ ಆಗಿದ್ದಾಗ ಜನಪರ ಆಡಳಿತ ನೀಡುತ್ತೇನೆ ಎಂದಿದ್ದೆ. ಅದರಂತೆಯೇ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಇದು ಕ್ರಾಂತಿಕಾರಕ ಬದಲಾವಣೆ. ಜನರಿಂದ ಜನರಿಗಾಗಿ ಆಡಳಿತ ಮಾಡಲು ನಾವು ಹೊರಟಿದ್ದೇವೆ. ಆಡಳಿತ ಕೇವಲ ಕೆಲವೇ ಜನರ ಕಪಿಮುಷ್ಟಿಯಲ್ಲಿರಬಾರದು. ಜನರಿಗೆ ಬೇಕಾದ ಸೇವೆ ಮನೆಯ ಬಾಗಿಲಿಗೆ ಬಂದರೆ ಅನುಕೂಲವಾಗುತ್ತದೆ. ಇದರಿಂದ ಭ್ರಷ್ಟಾಚಾರವೂ ನಿಲ್ಲುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕ್ರಾಂತಿಕಾರಿ ಬದಲಾವಣೆ ಆಗುವ ದಿನ 

ಜನ ಸೇವಕ ಕಾರ್ಯಕ್ರಮ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಯಶಸ್ವಿಯಾಗಬೇಕು. ಇಲ್ಲಿ ಯಶಸ್ವಿಯಾದರೆ ಜಿಲ್ಲೆಗಳಿಗೆ ವಿಸ್ತರಿಸುವುದು ಸುಲಭ. ಜನವರಿ 26 ರಂದು ಗ್ರಾಮೀಣ ಪ್ರದೇಶಗಳಿಗೆ ಈ ಕಾರ್ಯಕ್ರಮ ವಿಸ್ತರಿಸುತ್ತೇವೆ. ಕ್ರಾಂತಿಕಾರಿ ಬದಲಾವಣೆ ಆಗುವ ದಿನ ಇದು ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇದೇ ವೇಳೆ ಶಕ್ತಿ ಕೇಂದ್ರದ ಹತ್ತಿರವೇ ಮಾಡುತ್ತಿರುವ ಈ ಯೋಜನೆ ಯಶಸ್ವಿ ಆಗಲೇಬೇಕು. ಮುಂದಿನ ದಿನಗಳಲ್ಲಿ ಇಡೀ ವ್ಯವಸ್ಥೆ ಬದಲಾವಣೆಗೆ ಇದು ಭದ್ರಬುನಾದಿ ಆಗುತ್ತದೆ. ಸ್ಪಷ್ಟ ದಿಕ್ಸೂಚಿ, ನಿರ್ದಿಷ್ಟ ಗುರಿ, ಸಮಸ್ಯೆ ಬಗೆಹರಿಸುವ ಭದ್ದತೆ ಮೂಲಕ ನಾವು ಮುನ್ನಡೆಯುತ್ತೇವೆ. ಕೇವಲ ರಾಜ್ಯೋತ್ಸವ ಮಾಡಿದರೆ ಸಾಲದು ಅದು ಜನೋತ್ಸವ ಆಗಬೇಕು. ಆಡಳಿತ ಸುಧಾರಣೆ ಆದಾಗ ರಾಜ್ಯೋತ್ಸವ ಜನೋತ್ಸವ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರಧಾನಿ ಮೋದಿ ಆಡಳಿತ ಮಾದರಿ Management Schoolಗಳಲ್ಲಿ ಪಠ್ಯವಾಗಲಿ : ರಾಜನಾಥ್ ಸಿಂಗ್!

4.11 ಲಕ್ಷ ಪಡಿತರ ಕಾರ್ಡ್ ಗಳಿಗೆ ಅನುಮೋದನೆ

ಇನ್ನು ಬಿಪಿಎಲ್ ಕಾರ್ಡ್‌ ವ್ಯವಸ್ಥೆ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ ಪಡಿತರ ಆಹಾರ ಧಾನ್ಯ ವಿತರಣೆ ಕೂಡ ಪ್ರಾರಂಭ ಮಾಡಿದ್ದೇವೆ. ಬಿಬಿಎಂಪಿ ಖಾತಾ ಕೊಡುವಂತದ್ದು ಕಷ್ಟದ ಕೆಲಸ, ಜನ ಸುಸ್ತಾಗಿ ಹೋಗಿದ್ದಾರೆ. 4.11 ಲಕ್ಷ ಪಡಿತರ ಕಾರ್ಡ್​ಗಳಿಗೆ ಅನುಮೋದನೆ ನೀಡಿದ್ದೇನೆ. 2.66 ಲಕ್ಷ ಬಿಪಿಎಲ್, 1.45 ಲಕ್ಷ ಎಪಿಎಲ್ ಕಾರ್ಡ್​ಗಳಿವೆ. ಈ ಎಲ್ಲ ಸೇವೆಗಳ ಪರಿಶೀಲನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಾಹನವನ್ನು ಯಾರು ಮಾರುತ್ತಾರೋ ಅವರೇ ರಿಜಿಸ್ಟ್ರೇಷನ್ ನೀಡುವ ವ್ಯವಸ್ಥೆ

ಇದೇ ವೇಳೆ ಸಾರಿಗೆ ಇಲಾಖೆಯಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಮಾತನಾಡಿದ ಬೊಮ್ಮಾಯಿ ಸಾರಿಗೆ ಇಲಾಖೆಯಲ್ಲಿ ಬಹಳ ದೊಡ್ಡ ಬದಲಾವಣೆ ಮಾಡಲು ಸಾರಿಗೆ ಸಚಿವರು ಮುಂದಾಗಿದ್ದಾರೆ. 60 ಲಕ್ಷ ರೂ. ಜನ ಸಾರಿಗೆ ಕಚೇರಿಗೆ ಹೋಗುತ್ತಾರೆ. ಅದನ್ನು ತಪ್ಪಿಸಬೇಕು. 30 ಸೇವೆಗಳನ್ನು ಇದರ ಅಡಿಯಲ್ಲಿ ತರುತ್ತಿದ್ದೇವೆ. ವಾಹನವನ್ನು ಯಾರು ಮಾರುತ್ತಾರೋ ಅವರೇ ರಿಜಿಸ್ಟ್ರೇಷನ್ ನೀಡುವ ವ್ಯವಸ್ಥೆ ತರುತ್ತಿದ್ದೇವೆ. 10 ಸಂಸ್ಥೆಗಳಿಗೆ ಮಾತ್ರ ಇದೀಗ ರಿಜಿಸ್ಟ್ರೇಷನ್ ಅವಕಾಶ ನೀಡುತ್ತಿದ್ದೇವೆ. ಇವೆಲ್ಲವೂ ಜನಪರವಾದ ಸರ್ಕಾರದ ನಿರ್ಣಯ ಎಂದು ತಿಳಿಸಿದ್ದಾರೆ.

ಜನರೇ ಶ್ರೀಮಂತ ಆದರೆ ತಲಾ ಆದಾಯ ಹೆಚ್ಚಾಗಬೇಕು

ಒಂದು ಸರ್ಕಾರ ಶ್ರೀಮಂತವಾಗುವುದಕ್ಕಿಂತ ರಾಜ್ಯದ ಜನರು ಶ್ರೀಮಂತರಾಗಬೇಕು. ಸರ್ಕಾರ ಶ್ರೀಮಂತವಾದರೆ ಸರ್ಕಾರಕ್ಕೆ ಬೇಕಾದ ಕಾರ್ಯಕ್ರಮ ಮಾಡುತ್ತದೆ. ಜನರೇ ಶ್ರೀಮಂತ ಆದರೆ ತಲಾ ಆದಾಯ ಹೆಚ್ಚಾಗುತ್ತದೆ. ನಾವು ದೇಶದಲ್ಲಿ ತಲಾ ಆದಾಯದಲ್ಲಿ ನಾಲ್ಕನೆ ಸ್ಥಾನದಲ್ಲಿದ್ದೇವೆ. ಆದ್ರೆ ತಲಾಆದಾಯದಲ್ಲಿ ಶೇ 65 ರಷ್ಟು ಜನರು ಹಿಂದೆ ಬಿದ್ದಿದ್ದಾರೆ. ಶೇ 35 ರಷ್ಟು ಜನ ಮಾತ್ರ ರಾಜ್ಯದ ತಲಾ ಆದಾಯಕ್ಕೆ ಕೊಡುಗೆ ನೀಡ್ತಿದ್ದಾರೆ. ಕುಟುಂಬಗಳ ಆದಾಯ ಹೆಚ್ಚಾದರೆ ಅವರು ಸುಧಾರಿಸುತ್ತಾರೆ. ಆ ಮೂಲಕ ಕುಟುಂಬಗಳ ಆರೋಗ್ಯವೂ ಸುಧಾರಣೆಯಾಗುತ್ತದೆ. ಕುಟುಂಬಗಳು ಶ್ರೀಮಂತವಾದರೆ ಸರ್ಕಾರದ ಬೊಕ್ಕಸಕ್ಕೆ ಹಣ ಸಿಗುತ್ತದೆ. ಈ ಮೂಲಕ ಸರ್ಕಾರವೂ ಶ್ರೀಮಂತವಾಗುತ್ತದೆ. ಇನ್ನು ಹೆಣ್ಣು ಮಕ್ಕಳ ಆರ್ಥಿಕ ಸಾಮರ್ಥ್ಯ ಕೂಡ ಹೆಚ್ಚಾಗಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ ಹೆಣ್ಣುಮಕ್ಕಳ ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ಚಿಂತನೆ ಇದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Follow Us:
Download App:
  • android
  • ios