ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ರಾಜೀವ್‌ ಚಂದ್ರಶೇಖರ್‌, ಜಿತೇಂದ್ರ ಸಿಂಗ್‌ ಅವರನ್ನು ಭೇಟಿ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಮನವಿ ಸಲ್ಲಿಕೆ

 ನವದೆಹಲಿ (ಸೆ.09): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ರಾಜೀವ್‌ ಚಂದ್ರಶೇಖರ್‌, ಜಿತೇಂದ್ರ ಸಿಂಗ್‌ ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು. ಭೇಟಿ ಫಲಪ್ರದವಾಗಿದ್ದು, ತಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು.

ಗಡ್ಕರಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿರಾಡಿ ಘಾಟ್‌ನಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದೇವೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಬಳಿಕ ಮತ್ತೊಂದು ಸುರಂಗ ಮಾರ್ಗಕ್ಕೆ ಆದ್ಯತೆ ನೀಡುತ್ತೇವೆ ಎಂದರು.

ಉಪನಗರ ವರ್ತುಲ ರಸ್ತೆ ಅಡೆ-ತಡೆ ನಿವಾರಣೆ:

ಬೆಂಗಳೂರು ನಗರದ ಸುತ್ತಲಿನ ಸಂಚಾರವನ್ನು ಸುಗಮಗೊಳಿಸುವ ದಾಬಸ್‌ಪೇಟೆ-ಹೊಸೂರು ರಸ್ತೆ ಉಪನಗರ ವರ್ತುಲ ರಸ್ತೆ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗಿದ್ದು, ಫಲಪ್ರದವಾಗಿದೆ. ಯೋಜನೆ ಅಡೆತಡೆ ನಿವಾರಣೆಯಾಗಿದೆ ಎಂದರು.

ಶಿರಾಡಿ ಘಾಟ್‌ನಲ್ಲಿ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಅವಕಾಶ

ರಾಜ್ಯದ 4 ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಮನವಿ ಸಲ್ಲಿಸಲಾಗಿದೆ. ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ವಿಸ್ತರಣೆ ಹಾಗೂ ಮಳೆ ಮತ್ತು ಭೂಕುಸಿತದಿಂದ ರಾಜ್ಯದಲ್ಲಿ ವಿವಿಧ ಘಾಟ್‌ಗಳ ರಸ್ತೆ ಹಾಳಾಗಿದ್ದು, ಇವುಗಳ ಅಭಿವೃದ್ಧಿಗೆ 184 ಕೋಟಿ ರು. ಅನುದಾನ ನೀಡಲು ಗಡ್ಕರಿ ಸಮ್ಮತಿ ಸೂಚಿಸಿದ್ದಾರೆ. ಭಾರತ್‌ಮಾಲಾ ಯೋಜನೆಯಡಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‌ ಪಾರ್ಕ್ ನಿರ್ಮಾಣ:

ಇದೇ ವೇಳೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರನ್ನು ಭೇಟಿ ಮಾಡಿ, ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು.

ಬಳಿಕ ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಅವರನ್ನು ಭೇಟಿ ಮಾಡಲಾಯಿತು. ಈ ವೇಳೆ ಬೆಂಗಳೂರು-ಕೋಲಾರ ನಡುವೆ 400 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‌ ಪಾರ್ಕ್ ನಿರ್ಮಾಣ ಹಾಗೂ ರಾಜ್ಯದಲ್ಲಿ ಆಪ್ಟಿಕಲ್‌ ಫೈಬರ್‌ ಇಂಟರ್‌ನೆಟ್‌ ಅಳವಡಿಕೆ ಕುರಿತು ಚರ್ಚೆ ನಡೆಸಲಾಯಿತು. ರಾಜ್ಯಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಕುರಿತು ಮಾತುಕತೆ ನಡೆಸಲಾಯಿತು. ಇದಕ್ಕೆ ಅವಶ್ಯವಾದ ನೆರವು ನೀಡುವುದಾಗಿ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ ಎಂದರು.

ಈ ವೇಳೆ ಕಂದಾಯ ಸಚಿವ ಆರ್‌.ಅಶೋಕ್‌, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮುಖ್ಯಮಂತ್ರಿಗಳಿಗೆ ಸಾಥ್‌ ನೀಡಿದರು.