ಗಡಿ ಜಿಲ್ಲೆಯಲ್ಲಿ ಸಿಎಂ ಖುದ್ದು ಕೋವಿಡ್ ಪರಿಶೀಲನೆ
- ಬೆಂಗಳೂರಿನಲ್ಲಿ ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆ
- ಗಡಿಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಕೋವಿಡ್ ಸಿದ್ಧತೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದ ಸಿಎಂ
- ಶನಿವಾರ ಬೆಳಗಾವಿಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು
ಬೆಳಗಾವಿ (ಆ.22): ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಈ ಹಿಂದೆ ನಡೆದಿದ್ದ ಸಭೆಯಲ್ಲಿ ಗಡಿಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಕೋವಿಡ್ ಸಿದ್ಧತೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶನಿವಾರ ಬೆಳಗಾವಿಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ 10 ಕಡೆ ಆಕ್ಸಿಜನ್ ಘಟಕ ತೆರೆಯುವ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.
ಈ ಸಂಬಂಧ ಬೆಳಗಾವಿಯ ಸುವರ್ಣ ಸೌಧದಲ್ಲಿ ಜಿಲ್ಲೆ ವ್ಯಾಪ್ತಿಯ ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ನಡೆಸಿದ ಅವರು ಕೋವಿಡ್ ಸಿದ್ಧತೆ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಭೆಯಲ್ಲೇ ಸೂಚಿಸಿದ್ದೆ. ಗಡಿಭಾಗಗಳಿಗೆ ನಾನೇ ಖುದ್ದಾಗಿ ಭೇಟಿ ನೀಡುವುದಾಗಿ ಹೇಳಿದ್ದೆ. ಅದರಂತೆ ಬೆಳಗಾವಿಗೆ ಆಗಮಿಸಿದ್ದೇನೆ ಎಂದರು.
ಬೆಂಗಳೂರು ಡೆಡ್ಲಿ ಡೆಂಜರ್ ಕೋವಿಡ್ : ಮುಂಬೈ ಮೀರಿಸಿದ ಸಾವಿನ ಸಂಖ್ಯೆ
ಕೋವಿಡ್ 2ನೇ ಅಲೆಯಲ್ಲಿ ಸಾಕಷ್ಟುಸೋಂಕಿತರು ಪತ್ತೆಯಾಗಿದ್ದರು. ಅಲ್ಲದೆ, ಸಾಕಷ್ಟುಆಸ್ಪತ್ರೆಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಕೊರೋನಾ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ ಶೇ.0.81 ಪಾಸಿಟಿವ್ ರೇಟ್ ಇದೆ. ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಆಕ್ಸಿಜನ್‌ಗೆ ಯಾವುದೇ ಸಮಸ್ಯೆಯಾಗದಂತೆ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಸವದತ್ತಿ ಸೇರಿ 10 ಕಡೆ ಆಕ್ಸಿಜನ್ ತಯಾರಿಕಾ ಘಟಕ ತೆರೆಯಲಾಗುವುದು, ಮುಂದಿನ 20ದಿನಗಳಲ್ಲಿ ಆಕ್ಸಿಜನ್ ಘಟಕ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿಯಲ್ಲಿ .1.36 ಕೋಟಿ ವೆಚ್ಚದಲ್ಲಿ ಕೊರೋನಾ ತಪಾಸಣೆ ಕೇಂದ್ರ ನಿರ್ಮಾಣ ಮಾಡಲಾಗಿದೆ. ಇದು ಮಾಜಿ ಸಿಎಂ ಯಡಿಯೂರಪ್ಪನವರ ಯೋಜನೆಯಾಗಿತ್ತು. ಗೋಕಾಕನಲ್ಲೂ ಮಾಡಬೇಕೆಂಬ ಯೋಜನೆ ಇದ್ದು, ಬೆಂಗಳೂರಿಗೆ ಹೋದ ಕೂಡಲೇ ಅದಕ್ಕೆ ಮಂಜೂರಾತಿ ಕೊಡಲಾಗುವುದು ಎಂದರು.