ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ಅನುದಾನ: ಸಿಎಂ ಬೊಮ್ಮಾಯಿ ಘೋಷಣೆ
ಕಳೆದ ಬಾರಿ ಕಲ್ಯಾಣ ಕರ್ನಾಟಕದ ಅಭ್ಯುದಯಕ್ಕೆ 3000 ಕೋಟಿ ಅನುದಾನ ಘೋಷಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ವಿಮೋಚನೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಂಪರ್ ಕೊಡುಗೆ ಘೋಷಿಸಿದ್ದು, ಮುಂದಿನ ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ 5000 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.
ಕಲಬುರಗಿ (ಸೆ.18): ಕಳೆದ ಬಾರಿ ಕಲ್ಯಾಣ ಕರ್ನಾಟಕದ ಅಭ್ಯುದಯಕ್ಕೆ 3000 ಕೋಟಿ ಅನುದಾನ ಘೋಷಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ವಿಮೋಚನೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಂಪರ್ ಕೊಡುಗೆ ಘೋಷಿಸಿದ್ದು, ಮುಂದಿನ ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ 5000 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.
ಶನಿವಾರ ಕಲಬುರಗಿಯಲ್ಲಿ ನಡೆದ ಕಲ್ಯಾಣ ನಾಡಿನ ಅಮೃತ ಮಹೋತ್ಸವ ಪ್ರಯಕ್ತ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷದ ಇದೇ ವೇದಿಕೆಯಲ್ಲಿ 371ಜೇ ರಚನೆಯನ್ವಯ ಕೆಕೆಆರ್‌ಡಿಬಿಗೆ ಮಂಡಳಿಗೆ 3000 ಕೋಟಿ ನೀಡುವುದಾಗಿ ಘೋಷಿಸಿದ್ದೆ. ಇದೀಗ ನುಡಿದಂತೆ 2022-23ನೇ ಸಾಲಿಗೆ .3000 ಕೋಟಿ ನೀಡಿದ್ದೇನೆ. ಸಂವಿಧಾನದ 371ನೇ ವಿಧಿಗೆ ತಿದ್ದುಪಡಿಯಾದ ನಂತರ ಕೆಕೆಆರ್‌ಡಿಬಿಗೆ ಒದಗಿಸಿದ ಅನುದಾನವನ್ನು ಗಮನಿಸಿದರೆ, ನಮ್ಮ ಸರ್ಕಾರ ಇತಿಹಾಸದಲ್ಲಿ ಮೊದಲ ಬಾರಿ ಸಂಪೂರ್ಣ ಅನುದಾನ ಬಿಡುಗಡೆ ಮಾಡಿದೆ. ಇದೊಂದು ಕ್ರಿಯಾಶೀಲ ಸರ್ಕಾರ ಎಂದರು.
ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್: ಸಿಎಂ ಬೊಮ್ಮಾಯಿ ಅಶ್ವಾಸನೆ
ಏಮ್ಸ್‌ಗೆ ಕೇಂದ್ರಕ್ಕೆ ಮನವಿ: ನವ ಕಲ್ಯಾಣ ಕರ್ನಾಟಕದ ಮೂಲಕ ನವ ಕರ್ನಾಟಕ ನಿರ್ಮಾಣ ತಮ್ಮ ಗುರಿ ಎಂದ ಅವರು ಕಲ್ಯಾಣ ನಾಡನ್ನು ತಾವು ಹೃದಯಕ್ಕೆ ತುಂಬ ಹತ್ತಿರವಾಗಿಟ್ಟುಕೊಂಡಿರುದಾಗಿ ನುಡಿದರು. ಕಲಬುರಗಿ ಟೆಕ್ಸಟೈಲ್ ಪಾರ್ಕ್ಗೆ ಅಡಿಗಲ್ಲಿಡಲು ತಾವೇ ಬರೋದಾಗಿ ಹೇಳಿದರಲ್ಲದೆ, ರಾಯಚೂರಿಗೆ ಏಮ್ಸ್ ಸಂಸ್ಥೆ ಮಂಜೂರು ಮಾಡುವಂತೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದಿರುವುದಾಗಿ ನುಡಿದರು.
ಕಲಬುರಗಿಯಲ್ಲಿ ತಲೆ ಎತ್ತುತ್ತಿರುವ ಬಹುಕೋಟಿ ವೆಚ್ಚದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಗಳ ಸ್ವಂತ ಕಟ್ಟಡ ಉದ್ಘಾಟನೆಗೆ ಪ್ರದಾನಿ ಮೋದಿಯವರನ್ನೇ ಆಹ್ವಾನಿಸುವುದಾಗಿ ಹೇಳಿದ ಅವರು ಕಲಬುರಗಿಗೆ ಐಟಿ ರಂಗದಲ್ಲಿ ಸರ್ವಸ್ಪರ್ಶಿ ನೀತಿ ರೂಪಿಸಲಾಗುತ್ತಿದೆ. ಐಟಿ ಕ್ಲಸ್ಟರ್ ಕಲಬುರಗಿಗೆ ಕೊಡುವ ಚಿಂತನೆ ಸಾಗಿದೆ. ಕೊಪ್ಪಳಕ್ಕೆ ಆಟಿಕೆ ಕ್ಲಸ್ಟರ್ ನೀಡಲಾಗಿದೆ. ಬಳ್ಳಾರಿಗೆ ಜೀನ್ಸ್ ಪಾರ್ಕ್, ಯಾದಗಿರಿಯಲ್ಲಿ ಫಾರ್ಮಾಕ್ಯೂಟಿಕಲ್ ಕ್ಲಸ್ಟರ್, ಬೀದರನಲ್ಲಿ ಕೇಂದ್ರದ ನೆರವಿನೊಂದಿಗೆ 90 ಕೋಟಿ ವೆಚ್ಚದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಿಪೆಟ್ ಸಂಸ್ಥೆ ಪ್ರಾರಂಭಿಸಲಾಗುವುದು. ಇಂತಹ ಉದ್ಯೋಗ ಸೃಜನೆಯ ಯೋಜನೆಗಳೊಂದಿಗೆ ನಾವು ಕಲ್ಯಾಣ ಜಿಲ್ಲೆಗಳಿಂದ ಗುಳೆ ಹೋಗುವ ಪಿಡುಗಿಗೆ ಪೂರ್ಣ ವಿರಾಮ ನೀಡಬೇಕಿದೆ ಎಂದರು.
ಉ.ಕನ್ನಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ತಾತ್ವಿಕ ಒಪ್ಪಿಗೆ?
88.67 ಕೋಟಿ ಕಾಮಗಾರಿ ಉದ್ಘಾಟನೆ: ಇದೇ ಸಂದರ್ಭದಲ್ಲಿ ಕ್ರೈಸ್ ಸಂಸ್ಥೆಯಿಂದ 20.19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಆಳಂದ ತಾಲೂಕಿನ ಕಸಬಾ ಅಂಬೇಡ್ಕರ್ ವಸತಿ ಶಾಲೆ, 10 ಕೋಟಿ ವೆಚ್ಚದ ಕಲಬುರಗಿಯಲ್ಲಿ ನಿರ್ಮಿಸಲಾದ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೊದಲನೆ ಹಂತದ ಕಟ್ಟಡ, 6.33 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ನಿರ್ಮಿಸಿದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಕಲಬುರಗಿಯಲ್ಲಿ 5.97 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಹಾಗೂ ಕಲಬುರಗಿಯಲ್ಲಿ 46.18 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯ ಸಂಕೀರ್ಣ (6 ಡೈನಿಂಗ್) ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.