ಉತ್ತರಕನ್ನಡ ಜಿಲ್ಲೆಯಲ್ಲೂ ವರುಣನ ಅಬ್ಬರ, 91 ಮನೆಗಳಿಗೆ ಹಾನಿ, ಬೀಡುಬಿಟ್ಟ SDRF ತಂಡ

* ಉತ್ತರಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ಸುರಿದ ಮಳೆ
* ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ 4,960 ಮಿ.ಮೀ. ಸುರಿದ ಮಳೆ
* ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
* ಕುಮಟಾದಲ್ಲಿ ಬೀಡುಬಿಟ್ಟ SDRF ತಂಡ

Rain Continue Red Alert School Colleges Holiday In Uttara Kannada rbj

ವರದಿ: ಭರತ್‌ರಾಜ್ ಕಲ್ಲಡ್ಕ ಏಷ್ಯಾನೆಟ್ ಸುವರ್ಣ ನ್ಯೂಸ್

ಕಾರವಾರ, (ಜುಲೈ.07):
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವರುಣ ಅಬ್ಬರಿಸತೊಡಗಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಂತೂ  ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಒಂದೇ ವಾರದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಬರೋಬ್ಬರಿ 4,960 ಮಿ.ಮೀ. ಮಳೆ ಸುರಿದಿದ್ದು, ಜಿಲ್ಲೆಯ ಕಾಳಿ, ಅಘನಾಶಿನಿ, ಗಂಗಾವಳಿ, ವರದಾ, ಶರಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುವ ಮೂಲಕ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ...

ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಭಾರೀ ಪ್ರಮಾಣದಲ್ಲಿ ವರುಣ ಆರ್ಭಟ ಕಾಣಿಸಿಕೊಳ್ಳುತ್ತಿದ್ದು, ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಕಾಳಿ, ಅಘನಾಶಿನಿ, ವರದಾ, ಗಂಗಾವಳಿ, ಶರಾವತಿ ನದಿಗಳು ತುಂಬಿ ಹರಿಯುತಿದ್ದು, ಬಹುತೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹೊನ್ನಾವರದಲ್ಲಂತೂ ಶರಾವತಿ ನದಿ ತುಂಬಿ ಹರಿದು ಗುಂಡಬಾಳ ಗ್ರಾಮದ ತೋಟ, ಮನೆಗಳಿಗೆ ನೀರು ನುಗ್ಗಿದ್ರೆ, ಬನವಾಸಿ ಭಾಗದಲ್ಲಿ ವರದಾ ನದಿ ತುಂಬಿ ನದಿ ತೀರ ಪ್ರದೇಶದ ಕೃಷಿ ಭೂಮಿಗೆ ನೀರು ನುಗ್ಗಿದೆ. 

ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ, ಕೆಲವೆಡೆ ಮರ, ಭೂ ಕುಸಿತ, ನೆರೆ ಭೀತಿಯಲ್ಲಿ ಜನರು

ಮಳೆಗೆ 91 ಮನೆಗಳಿಗೆ ಹಾನಿ
ಅಂಕೋಲಾ ಹಾಗೂ ಗುಳ್ಳಾಪುರದಲ್ಲಿ ಗಂಗಾವಳಿ ನದಿ ತುಂಬಿ ಹರಿಯುತಿದ್ದು, ಡೊಂಗ್ರಿ ಹಾಗೂ ಗುಳ್ಳಾಪುರ ಭಾಗದ ತಾತ್ಕಾಲಿಕ  ಸೇತುವೆ ಮುಳುಗಡೆಯಾಗಿದೆ. ಕುಮಟಾ ಭಾಗದಲ್ಲಿ ಅಘನಾಶಿನಿ ನದಿ ಅಪಾಯ ಮಟ್ಟ ತಲುಪಿದ್ದು ಕೃಷಿ ಭೂಮಿಗೆ ನೀರು ಹರಿಯುತ್ತಿದೆ. ಇನ್ನು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ 91 ಮನೆಗಳಿಗೆ ಅನಾಹುತವಾಗಿದ್ದು, 81 ಮನೆಗಳಿಗೆ ಪರಿಹಾರ ನೀಡಿರುವುದೊಂದಿಗೆ 10 ಮನೆಗಳನ್ನು ಪುನಃ ಪರಿಶೀಲನೆ ನಡೆಸಲಾಗುತ್ತಿದೆ. ಇದರೊಂದಿಗೆ ಒಬ್ಬರ ಪ್ರಾಣಹಾನಿಯೂ ನಡೆದಿದ್ದು, ಪರಿಹಾರ ನೀಡುವ ಕೆಲಸಗಳಾಗಿವೆ. ನೆರೆಯ ಹಿನ್ನೆಲೆ ಹೊನ್ನಾವರ, ಕಾರವಾರ, ಕುಮಟಾದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 

ಜಿಲ್ಲೆಯಲ್ಲಿ ಜಲಾಶಯಗಳು ಸದ್ಯಕ್ಕೆ ಅಪಾಯದ ಮಟ್ಟಕ್ಕೆ ಏರಿಲ್ಲ. ಆದ್ರೂ, ಜಿಲ್ಲೆಯ 229 ಗ್ರಾಮ ಪಂಚಾಯತ್‌ ಹಾಗೂ 13 ನಗರಾಡಳಿತ ಸಂಸ್ಥೆಗಳಿದ್ದು, ಇವುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅಲ್ಲದೇ, ಇಲ್ಲಿಗೆ ನೋಡೆಲ್ ಅಧಿಕಾರಿಗಳನ್ನು ಕೂಡಾ ನೇಮಿಸಲಾಗಿದೆ.‌  ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ ತೆರೆದು 7 ಸಿಬ್ಬಂದಿಯನ್ನು ಕೂಡಾ ನೇಮಿಸಲಾಗಿದ್ದು, ನೆರೆ ಸಮಸ್ಯೆ ಮುಗಿಯುವವರೆಗೂ ಯಾವ ಅಧಿಕಾರಿಗಳೂ ರಜೆ ಮಾಡದಂತೆ ಆದೇಶ ಕೂಡಾ ಹೊರಡಿಸಲಾಗಿದೆ. 

ಜಿಲ್ಲೆಯಲ್ಲಿ ಕೃತಕ ನೆರೆ ಕಾಟವೂ ಕಾಣಿಸಿಕೊಳ್ಳುತ್ತಿದ್ದು, ಜನರು ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ‌. ಇದಕ್ಕೆ ಐಆರ್‌ಬಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಶಾಸಕಿ ರೂಪಾಲಿ ನಾಯ್ಕ್, ಮಾಜಾಳಿಯಿಂದ ಮಾದನಗೇರಿಯವರೆಗೆ ನಡೆಸಿದ ಸರ್ವೆಯೇ ಅವೈಜ್ಞಾನಿಕವಾಗಿದ್ದು, ಐಆರ್‌ಬಿಯವರು ಕೂಡಾ ಬೇಕಾಬಿಟ್ಟಿ ಕೆಲಸ ಮಾಡಿಕೊಂಡು ಹೋಗಿದ್ದಾದೆ. ಟೋಲ್‌ಗೇಟ್ ಮಾಡಲು ಶೀಘ್ರದಲ್ಲಿ ರಸ್ತೆ ನಿರ್ಮಾಣ ಮಾಡಿದ್ರೂ, ಎಲ್ಲಿಯೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಲ್ಲ, ಚರಂಡಿಯನ್ನೂ  ನಿರ್ಮಿಸಿಲ್ಲ.

 ಈ ಕಾರಣದಿಂದ ಬೆಟ್ಟ, ಗುಡ್ಡಗಳಿಂದ ಬರುವ ನೀರು ಸಮುದ್ರ ಸೇರದೆ ಜನರ ಮನೆಗಳಿಗೆ ನುಗ್ಗುತ್ತಿದೆ. ನೇವಲ್ ಬೇಸ್‌ನಲ್ಲೂ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್‌ಬಿ ಹಾಗೂ ಸೀಬರ್ಡ್‌ನವರಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆ ಹಾಗೂ ಕಾಲೇಜುಗಳಿಗೆ ರಜೆ
ಇನ್ನು ಜಿಲ್ಲೆಯಲ್ಲಿ ಸದ್ಯ ಜುಲೈ 9ರ ಬೆಳಿಗ್ಗೆ 8:30ರ ವರೆಗೆ ರೆಡ್ ಅಲರ್ಟ್‌ ಮುನ್ಸೂಚನೆಯನ್ನ ಹವಾಮಾನ  ಇಲಾಖೆ ನೀಡಿದೆ. ಹೀಗಾಗಿ ಕಾರವಾರ, ಅಂಕೋಲಾ, ಹೊನ್ನಾವರ, ಕುಮಟಾ, ಭಟ್ಕಳ ತಾಲ್ಲೂಕು ಹಾಗೂ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ ತಾಲ್ಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಣಶಿ ಘಟ್ಟ ಭಾಗದಲ್ಲಿ ಗುಡ್ಡ ಕುಸಿಯುತಿದ್ದು ಇಂದಿನಿಂದ ಪ್ರತಿ ದಿನ ಸಂಜೆ ಏಳರಿಂದ ಬೆಳಗ್ಗೆ ಏಳು ಗಂಟೆ ವರೆಗೆ ರಾಜ್ಯ ಹೆದ್ದಾರಿ -34 ರ ಸಂಚಾರವನ್ನು ಸ್ಥಗಿತಮಾಡಲಾಗಿದೆ. ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಸೂಕ್ಷ ಪ್ರದೇಶಗಳಲ್ಲಿ ಎಸ್.ಡಿ.ಆರ್.ಎಫ್ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಕುಮಟಾ ದಲ್ಲಿ ಬೀಡು ಬಿಟ್ಟಿದೆ.

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ ಮಾಡಿಕೊಂಡಿದ್ರೂ, ಮುಂದಿನ ದಿನಗಳಲ್ಲಿ ಮಳೆಯ ಅಬ್ಬರ ಯಾವ ರೀತಿಯಲ್ಲಿ ಇರಲಿದೆ ಅನ್ನೋದನ್ನ ಕಾದುನೋಡಬೇಕಷ್ಟೇ.

Latest Videos
Follow Us:
Download App:
  • android
  • ios