ಆರೋಗ್ಯ ವೃತ್ತಿಪರರ ನೋಂದಣಿ, ದೇಶಕ್ಕೇ ಕರ್ನಾಟಕ ಪ್ರಥಮ: ಸಚಿವ ಸುಧಾಕರ್
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ (ಎಬಿಡಿಎಂ) ಕರ್ನಾಟಕವು ಆರೋಗ್ಯ ವೃತ್ತಿಪರರ ನೋಂದಣಿಯಲ್ಲಿ ಮೊದಲ ಸ್ಥಾನ ಮತ್ತು ಆರೋಗ್ಯ ಸೌಲಭ್ಯ ನೋಂದಣಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು (ನ.27): ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ (ಎಬಿಡಿಎಂ) ಕರ್ನಾಟಕವು ಆರೋಗ್ಯ ವೃತ್ತಿಪರರ ನೋಂದಣಿಯಲ್ಲಿ ಮೊದಲ ಸ್ಥಾನ ಮತ್ತು ಆರೋಗ್ಯ ಸೌಲಭ್ಯ ನೋಂದಣಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದ ಆರೋಗ್ಯ ವಲಯ ಸಾಧನೆ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವರು, ‘ಎಬಿಡಿಎಂನಲ್ಲಿ ಕರ್ನಾಟಕದಿಂದ ಆರೋಗ್ಯ ವೃತ್ತಿಪರರ ನೋಂದಣಿ (ಎಚ್‌ಪಿಆರ್) ವಲಯದಲ್ಲಿ 28,643 ವೈದ್ಯರು ಮತ್ತು ದಾದಿಯರು ನೋಂದಣಿಯಾಗಿದ್ದು, ರಾಜ್ಯ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಸೌಲಭ್ಯ ಸಂಸ್ಥೆಗಳ ನೋಂದಣಿಯಡಿ (ಎಚ್‌ಎಫ್‌ಆರ್) 27,244 ಸಂಸ್ಥೆಗಳು ನೋಂದಣಿಯಾಗಿದ್ದು, 2ನೇ ಸ್ಥಾನದಲ್ಲಿದ್ದೇವೆ’ ಎಂದು ಹೇಳಿದ್ದಾರೆ.
ಡಿಸೆಂಬರ್ ವೇಳೆಗೆ 438 ನಮ್ಮ ಕ್ಲಿನಿಕ್ ಆರಂಭ: ಸಚಿವ ಸುಧಾಕರ್
ಡಿಜಿಟಲ್ ಬೆಳವಣಿಗೆಯಿಂದಾಗಿ ಭೌತಿಕವಾಗಿ ರೋಗಿಗಳು ಯಾವುದೇ ದಾಖಲೆಗಳನ್ನು ಕೊಂಡೊಯ್ಯುವ ಅಗತ್ಯವಿರುವುದಿಲ್ಲ. ಈ ನಿಟ್ಟಿನಲ್ಲಿ ಆರಂಭವಾಗಿರುವ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗೆ (ಎಬಿಎಚ್‌ಎ) ರಾಜ್ಯದ 4.58 ಲಕ್ಷ ಮಂದಿಯ ಆರೋಗ್ಯ ದಾಖಲೆಗಳನ್ನು ಸೇರಿಸಲಾಗಿದೆ. ಈ ಮೂಲಕ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಈ ಯೋಜನೆಯಡಿ ಆಯುಷ್ಮಾನ್ ಕಾರ್ಡ್ ಹೊಂದಿರುವ ವ್ಯಕ್ತಿ ಇ-ಆಸ್ಪತ್ರೆ ಪೋರ್ಟಲ್ ಮೂಲಕ ಆರೋಗ್ಯ ದಾಖಲೆಯನ್ನು ತ್ವರಿತವಾಗಿ ಪಡೆಯಬಹುದು. ಭೌತಿಕ ದಾಖಲೆ ಅವಶ್ಯಕತೆ ಇರುವುದಿಲ್ಲ.
ಎಬಿಡಿಎಂ-ದೂರುಗಳು, ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ಬಳಸುವ ದೇಶದ 517 ಸಾರ್ವಜನಿಕ ಆಸ್ಪತ್ರೆಗಳ ಪೈಕಿ ಕರ್ನಾಟಕದಲ್ಲಿ 334 ಆಸ್ಪತ್ರೆಗಳಿರುವುದು ಮಹತ್ವದ ಸಾಧನೆಯಾಗಿದೆ. ಇನ್ನು ದೇಶದಲ್ಲಿ 1.35 ಕೋಟಿ ಜನರು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಹೊಂದಿದ್ದು, ಈ ವಿಭಾಗದಲ್ಲಿ ರಾಜ್ಯ 7ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳು ಮತ್ತು ಹೆಚ್ಚಿನ ಒತ್ತಡ ಇರುವ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ನೋಂದಣಿಗೆ ಕ್ಯೂಆರ್ ಕೋಡ್ ಜಾರಿಗೊಳಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ 500 ಜನೌಷಧಿ ಮಳಿಗೆ ಸ್ಥಾಪನೆ: ಸಚಿವ ಸುಧಾಕರ್
ತಾಲೂಕು ಆಸ್ಪತ್ರೆಯಲ್ಲಿಯೂ ಕ್ಯೂಆರ್ ಕೋಡ್: ಎಬಿಡಿಎಂ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ) ಸಹಕಾರದೊಂದಿಗೆ ಇ-ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದ (ಒಪಿಡಿ ) ನೋಂದಣಿಗೆ ಕ್ಯೂ ಆರ್ ಕೋಡ್ ವ್ಯವಸ್ಥೆ ಪ್ರಾರಂಭಿಸಲಾಗಿದೆ. ಇದರಿಂದ ಒಪಿಡಿ ನೋಂದಣಿಗಾಗಿ ರೋಗಿಗಳು ಸರತಿಯಲ್ಲಿ ಕಾಯುವುದು ತಪ್ಪಲಿದೆ. ಜತೆಗೆ ರೋಗಿಯ ಆರೋಗ್ಯ ದಾಖಲೆಗಳು ಸಂಪರ್ಕ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಸಹ ಸುಗಮವಾಗಿ ಲಭ್ಯವಾಗಲಿದೆ. ಈಗಾಗಲೇ ಬೆಂಗಳೂರಿನ ಸಿ.ವಿ.ರಾಮನ್ ನಗರದ ಜನರಲ್ ಆಸ್ಪತ್ರೆ ಸೇರಿದಂತೆ ರಾಜ್ಯದ 15 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.