ಗಡಿ ವಿವಾದ ಕೆದಕಿದ್ದ ಮಹಾ ನಾಯಕರಿಗೆ ಬೊಮ್ಮಾಯಿ ಖಡಕ್ ಎಚ್ಚರಿಕೆ
ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು(ನ.26): ರಾಜ್ಯದ ಗಡಿ ಮತ್ತು ಜನರನ್ನು ರಕ್ಷಿಸಲು ಶಕ್ತಿಮೀರಿ ಹೋರಾಟ ಮಾಡಲಾಗುವುದು. ಮಹಾರಾಷ್ಟ್ರ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವು ಒಕ್ಕೂಟ ವ್ಯವಸ್ಥೆಯನ್ನು ಹೊಂದಿದ್ದು ಪ್ರತಿ ರಾಜ್ಯಕ್ಕೂ ತನ್ನದೇ ಆದ ಹಕ್ಕುಗಳಿವೆ. ರಾಜ್ಯ ಮರುವಿಂಗಡಣಾ ಕಾಯ್ದೆಯಡಿ ರಾಜ್ಯಗಳನ್ನು ರಚಿಸಲಾಗಿದೆ. ಮಹಾರಾಷ್ಟ್ರವು ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕರ್ತವ್ಯವಾಗಿದೆ. ಮಹಾರಾಷ್ಟ್ರವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ
ರಾಜ್ಯಗಳ ನಡುವೆ ಶಾಂತಿಯುತ ವಾತಾವರಣ ಇರಬೇಕು. ಮಹಾರಾಷ್ಟ್ರ ಸರ್ಕಾರ ತಕ್ಷಣ ಕ್ರಮ ಕೈಗೊಂಡು ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ನಾವು ಕಾನೂನು ಪಾಲಿಸಲಿದ್ದು ನಮ್ಮ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ. ರಾಜ್ಯದ ಗಡಿ ಮತ್ತು ಜನರನ್ನು ರಕ್ಷಿಸಲು ಸರ್ಕಾರ ಶಕ್ತಿ ಮೀರಿ ಹೋರಾಟ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕಾನೂನು ಹೋರಾಟಕ್ಕೆ ಆದ್ಯತೆ
‘ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಕಪ್ಪು ಮಸಿ ಬಳಿಯಲಾಗಿದೆಯಲ್ಲಾ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ನಮ್ಮ ಮೊದಲ ಆದ್ಯತೆ ಕಾನೂನಾತ್ಮಕ ಹೋರಾಟವಾಗಿದೆ. ಸುಪ್ರೀಂ ಕೋರ್ಚ್‌ನಲ್ಲಿ ಪ್ರಕರಣವಿದ್ದು ತೀರ್ಪಿಗಾಗಿ ಕಾಯಬೇಕು. ಪ್ರಕರಣವು ಅರ್ಜಿಯ ಅರ್ಹತೆಯ ಮೇಲಿಲ್ಲ. ಕಲಂ 3 ಸಹ ಇದನ್ನು ಸ್ಪಷ್ಟವಾಗಿ ಹೇಳಿದೆ. ಸುಪ್ರೀಂ ಕೋರ್ಚ್ ಈ ಬಗ್ಗೆ ಒಂದು ನಿರ್ಣಯಕ್ಕೆ ಬರಬೇಕಿದೆ. ಮುಂದಿನ ವಾರ ಸರ್ವ ಪಕ್ಷ ಸಭೆ ಕರೆಯಲಿದ್ದು ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಉತ್ತರಿಸಿದರು.