ಕುರ್ಚಿಯಲ್ಲಿ ಕೂರಲು ನಿರಾಕರಿಸಿ ನಿಂತೇ ಸನ್ಮಾನ ಸ್ವೀಕರಿಸಿದ ಸಿಎಂ
- ಕೆಎಲ್‌ಇ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು
- ಆಸನ ಬೇಡ ಎಂದು ಹೇಳಿ ನಿಂತುಕೊಂಡೇ ಸನ್ಮಾನ ಸ್ವೀಕರಿಸಿ ಸರಳತೆ ಮೆರೆದರು
ಹುಬ್ಬಳ್ಳಿ (ಸೆ.28): ಕೆಎಲ್‌ಇ (KLE) ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಅವರನ್ನು ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಘದಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಲು ಆಸನ ಹಾಕಲು ಸಂಘಟಕರು ಮುಂದಾದರು. ಆದರೆ ಆಸನ ಬೇಡ ಎಂದು ಹೇಳಿ ನಿಂತುಕೊಂಡೇ ಸನ್ಮಾನ ಸ್ವೀಕರಿಸಿ ಸರಳತೆ ಮೆರೆದರು. ಬಳಿಕ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ (Murugesh Nirani) ಅವರನ್ನೂ ಸನ್ಮಾನಿಸಲಾಯಿತು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಇಬ್ಬರು ಗಣ್ಯರನ್ನು ಸನ್ಮಾನಿಸಿದರು.
ಕೈಕೊಟ್ಟ ರಿಮೋಟ್!
ವೇದಿಕೆ ಕಾರ್ಯಕ್ರಮದ ಪರದೆ ಎಳೆಯಲು ರಿಮೋಟ್ (Remote) ಮೂಲಕ ವ್ಯವಸ್ಥೆ ಮಾಡಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಷ್ಟೇ ಸಲ ರಿಮೋಟ್ ಬಟನ್ ಅದುಮಿದರೂ ಪರದೆ ಮಾತ್ರ ಸರಿಯಲಿಲ್ಲ. ಸಿಬ್ಬಂದಿ ಕೂಡ ಪ್ರಯತ್ನಿಸಿದರು. ಆದರೂ ಕಾರ್ಯಕ್ರಮದ ಪರದೆ ಸರಿಯಲಿಲ್ಲ. ಕೊನೆಗೆ ಸಿಬ್ಬಂದಿಯೇ ಕೈಯಿಂದ ಹಿಡಿದು ಪರದೆ ಸರಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ನೆರವಾದರು. ತಾಂತ್ರಿಕ ಕಾಲೇಜಿನಲ್ಲಿ ತಾಂತ್ರಿಕ ಸಮಸ್ಯೆ ಎದುರಿಸುವಂತಾಯಿತು.
ಬಾಲ್ಯದಿಂದ ಮುಖ್ಯಮಂತ್ರಿಯಾಗುವವರೆಗೆ, ಬದುಕಿನ ಚಿತ್ರಣ ತೆರೆದಿಟ್ಟ ಸಿಎಂ ಬೊಮ್ಮಾಯಿ
ನಮ್ಮ ಅತಿ ಹೆಚ್ಚು ಹಾಜರಿ ಕ್ಯಾಂಟೀನ್‌ನಲ್ಲಿ ಇರ್ತಾ ಇತ್ತು
‘ಹಳೆಯ ದಿನಗಳು ಬಹಳ ಚೆನ್ನಾಗಿದ್ದವು. ನಮ್ಮ ಅತಿ ಹೆಚ್ಚು ಹಾಜರಿ ಕ್ಯಾಂಟೀನ್‌ನಲ್ಲಿ ಇರ್ತಾ ಇತ್ತು. ಕ್ಯಾಂಟೀನ್ ಮಾಲೀಕರು ನಮಗೆ ಯಾವಾಗ ಪಾಸ್ ಆಗಿ ಹೋಗ್ತೀರಾ ಅಂತಿದ್ರು. ಸಚಿವನಾಗಿ, ಮುಖ್ಯಮಂತ್ರಿಯಾಗಿ ನಾನು ಕಲಿತ ಸಂಸ್ಥೆಗೆ ಅತಿಥಿಯಾಗಿ ಬರುತ್ತೇನೆ ಎಂದುಕೊಂಡಿರಲಿಲ್ಲ. ಈ ಕ್ಯಾಂಪಸ್ ನೋಡಿದರೆ ಮತ್ತೆ ಪ್ರವೇಶ ಪಡೆಯಬೇಕೆಂಬ ಇಚ್ಛೆಯಾಗುತ್ತದೆ.’
- ಇದು ತಾವು ವಿದ್ಯಾಭ್ಯಾಸ ನಡೆಸಿದ ಕೆಎಲ್‌ಇ ಬಿವಿಬಿ (BVV) ತಾಂತ್ರಿಕ ಕಾಲೇಜಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನಸು ಬಿಚ್ಚಿ ಆಡಿದ ಮಾತುಗಳು. ಕಾಲೇಜಿನಲ್ಲಿ ಟೆಕ್‌ಪಾರ್ಕ್ ಹಾಗೂ ಸಂಸ್ಥೆಯ 75ನೆಯ ವರ್ಷಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಮಾತಿನುದ್ದಕ್ಕೂ ಬಿವಿಬಿ ಕಾಲೇಜಿನಲ್ಲಿ ಕಲಿತ ದಿನಗಳನ್ನು ನೆನಪಿಸಿಕೊಂಡರು.
ರಾಜ್ಯದ ಯೋಜನೆಗಳಿಗೆ ಕೇಂದ್ರದ ಬಂಪರ್ ನೆರವು
ನಾನು ಸಿಎಂ ಆಗಿದ್ದು ದೈವಿಚ್ಛೆ. ಕಲಿಯುವ ವೇಳೆ ಎಂದೂ ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಸಚಿವನಾಗಿ, ಮುಖ್ಯಮಂತ್ರಿಯಾಗಿ ನಾನು ಕಲಿತ ಸಂಸ್ಥೆಗೆ ಅತಿಥಿಯಾಗಿ ಬರುತ್ತೇನೆ ಎಂದುಕೊಂಡಿರಲಿಲ್ಲ. ಈ ಕ್ಯಾಂಪಸ್ ನೋಡಿದರೆ ಮತ್ತೆ ಪ್ರವೇಶ ಪಡೆಯಬೇಕೆಂಬ ಇಚ್ಛೆಯಾಗುತ್ತದೆ. ನನಗೆ ಇಂದು ಮಾತುಗಳೇ ಹೊರಡುತ್ತಿಲ್ಲ. ಎದೆ ತುಂಬಿ ಬಂದಿದೆ. ಬೇರೆಡೆ ನೂರೆಂಟು ಸಲ ಮಾತನಾಡಿರಬಹುದು. ಆದರೆ ಸರಸ್ವತಿ ದೇಗುಲ ಬಿವಿಬಿ ಕಾಲೇಜು. ಇಲ್ಲಿ ಬಂದರೆ ನನಗೆ ನನ್ನ ವಿದ್ಯಾರ್ಥಿ ದಿನಗಳು ನೆನಪಿಗೆ ಬರುತ್ತಿವೆ ಎಂದರು.
ಹಾಸ್ಟೆಲ್, ಹಾಸ್ಟೆಲ್ ರೂಮು, ಕ್ಯಾಂಟೀನ್, ಲ್ಯಾಬ್, ಪರೀಕ್ಷೆ ಮುಂದೂಡಲು ನಡೆಸಿದ ಪ್ರತಿಭಟನೆಗಳನ್ನೆಲ್ಲ ಮೆಲುಕು ಹಾಕಿದ ಮುಖ್ಯಮಂತ್ರಿಗಳು, ನನ್ನ ಬದುಕನ್ನು ಬದಲಾಯಿಸಿದ್ದು ಕೂಡ ಬಿವಿಬಿ ಕಾಲೇಜು. ಇದರ ಋುಣ ತೀರಿಸಲು ಸಾಧ್ಯವಿಲ್ಲ ಎಂದರು.