*  ಕಾನೂನು ತಜ್ಞರು, ಸಚಿವರು, ಅಧಿಕಾರಿಗಳ ಜತೆ ಸಭೆ*  ಕೃಷ್ಣಾ, ಕಾವೇರಿ, ಮಹದಾಯಿ ಜತೆಗೆ ನದಿ ಜೋಡಣೆ ಕುರಿತೂ ಚರ್ಚೆ*  ತುಂಗಭದ್ರಾ ಡ್ಯಾಮ್‌ಗೆ ಸಮತೋಲನ ಅಣೆಕಟ್ಟು 

ನವದೆಹಲಿ(ಫೆ.09): ರಾಜ್ಯದ ಜಲವಿವಾದ ನಿವಾರಣೆಗೆ ಎದುರಾಗಿರುವ ಅಡ್ಡಿಗಳನ್ನು ಪರಿಹರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಬಿರುಸಿನ ಪ್ರಯತ್ನ ನಡೆಸಿದ್ದಾರೆ. ಎರಡು ದಿನಗಳ ತಮ್ಮ ದೆಹಲಿ ಪ್ರವಾಸದ ವೇಳೆ ಕೇಂದ್ರ ಸಚಿವರು, ಸಂಸದರು ಹಾಗೂ ತಜ್ಞರ ಜತೆಗೆ ಈ ವಿಚಾರವಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ ರಾಜ್ಯದ ಪಾಲು ಹೇಳದ ಹೊರತು ಕೃಷ್ಣ-ಗೋದಾವರಿ, ಕಾವೇರಿ-ಪೆನ್ನಾರ್‌ ನದಿ ಜೋಡಣೆಗೆ ಕರ್ನಾಟಕವು(Karnataka) ಸಮ್ಮತಿಸಲ್ಲ ಎಂಬ ಸ್ಪಷ್ಟಸಂದೇಶವನ್ನೂ ಕೇಂದ್ರಕ್ಕೆ ತಲುಪಿಸಿದ್ದಾರೆ.

ಬೊಮ್ಮಾಯಿ ಅವರು ಸೋಮವಾರವಷ್ಟೇ ರಾಜ್ಯದ ಸಂಸದರ ಜತೆಗೆ ಜಲವಿವಾದದ(Water Dispute) ಕುರಿತು ಸಮಾಲೋಚನೆ ನಡೆಸಿದ್ದರು. ಎರಡನೇ ದಿನವಾದ ಮಂಗಳವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸಚಿವರು, ಹಿರಿಯ ನ್ಯಾಯವಾದಿಗಳು, ಅಡ್ವೊಕೇಟ್‌ ಜನರಲ್‌ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.

Water Disputes: ಅಂತಾರಾಜ್ಯ ಜಲ ವಿವಾದಕ್ಕೆ ಅಂತ್ಯ ಹಾಡಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ದಿನಗಳಲ್ಲಿ ಯಾವ ರೀತಿ ನಮ್ಮ ನೀರಾವರಿ ಯೋಜನೆಗಳನ್ನು ಆರಂಭಿಸಬೇಕು. ನ್ಯಾಯಾಲಯದ(Court) ಪ್ರಕರಣಗಳು ಯಾವ ಹಂತದಲ್ಲಿವೆ, ಈಗಾಗಲೇ ಪ್ರಾರಂಭಿಸಿರುವ ಯೋಜನೆಗಳನ್ನು ಹೇಗೆ ಮುಂದುವರೆಸಬೇಕೆಂಬ ಬಗ್ಗೆ ಚರ್ಚಿಸಲಾಗಿದೆ. ಸಲಹೆಗಳನ್ನೂ ಸ್ವೀಕರಿಸಲಾಗಿದೆ. ಗೋದಾವರಿ, ಕೃಷ್ಣಾ, ಕಾವೇರಿ, ಪೆನ್ನಾರ್‌ ನದಿ ಜೋಡಣೆಗೆ ಸಂಬಂಧಿಸಿಯೂ ಚರ್ಚೆಯಾಗಿದ್ದು, ಆಕ್ಷೇಪಗಳನ್ನು ದಾಖಲಿಸಬೇಕಿದೆ. ನದಿ ಜೋಡಣೆಗೆ ಸಂಬಂಧಿಸಿ ನಮ್ಮ ಪಾಲು ನಿರ್ಧರಿಸುವವರೆಗೂ ಡಿಪಿಆರ್‌ಗೆ ಒಪ್ಪಿಗೆ ನೀಡಬಾರದೆಂದು ಹೊಸದಾಗಿ ಆಕ್ಷೇಪ ಸಲ್ಲಿಸಬೇಕಿದೆ. ಈ ವಿಚಾರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೂ ತಿಳಿಸಲಾಗಿದೆ ಎಂದು ವಿವರಿಸಿದರು.

ತ.ನಾಡು ಯೋಜನೆಗೆ ವಿರೋಧ-ತಮಿಳುನಾಡು ಸರ್ಕಾರ ಕೈಗೊಂಡಿರುವ ಹೊಗೇನಕಲ… ಜಲವಿದ್ಯುತ್‌ ಯೋಜನೆ ಮತ್ತು ಕಾವೇರಿ, ಗುಂಡಾರ್‌ ಹಾಗೂ ವೈಗೈ ನದಿಜೋಡಣೆ ಯೋಜನೆಗಳನ್ನು ನ್ಯಾಯಾಲಯದ ಮೂಲಕ ವಿರೋಧಿಸಲು ತೀರ್ಮಾನಿಸಲಾಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿ ಎನ್‌.ಜಿ.ಟಿ. ಮುಂದಿದ್ದ ಪ್ರಕರಣವೂ ಸೇರಿ ಒಟ್ಟು 2 ಪ್ರಕರಣಗಳು ಜತೆಯಾಗಿ ವಿಚಾರಣೆಗೆ ಬರಲಿದ್ದು, ನಮ್ಮ ಆಕ್ಷೇಪಗಳನ್ನು ಸಲ್ಲಿಸಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದ್ದೇವೆ ಎಂದರು.

ಮೇಕೆದಾಟು ಅಣೆಕಟ್ಟೆಗೆ(Mekedatu) ಸಂಬಂಧಿಸಿ ಕೇಂದ್ರ ಜಲ ಆಯೋಗದಲ್ಲಿ ಹಾಗೂ ಕಾವೇರಿ ನದಿ ಪ್ರಾಧಿಕಾರದ ಮುಂದೆಯೂ ನಮ್ಮ ನಿಲುವನ್ನು ಸ್ಪಷ್ಟಪಡಿಸಲು ತೀರ್ಮಾನಿಸಲಾಗಿದೆ. ಯೋಜನೆಗೆ ಪರಿಸರ ಅನುಮತಿಯೊಂದೇ ದೊರೆಯಬೇಕಿದೆ ಎಂದರು.

ಮಹದಾಯಿಯೂ ಚರ್ಚೆ:

ಮಹದಾಯಿ(Mahadayi) ನದಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕೆಂದು ಕೋರಲಾಗಿದೆ. ಆ ಕುರಿತ ವಿಚಾರಣೆಯೂ ಅಂತಿಮ ಘಟ್ಟದಲ್ಲಿದೆ ಎಂದರು.

ನ್ಯಾಯಮೂರ್ತಿಗಳ ನೇಮಕ:

ಕೃಷ್ಣಾ ನದಿಯ 2ನೇ ಟ್ರಿಬ್ಯುನಲ್‌ನ ಅಧಿಸೂಚನೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಕಳೆದ ಬಾರಿ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ. ಮುಂದಿನ ವಿಚಾರಣೆಗೆ ಬರುವಷ್ಟರಲ್ಲಿ ಹೊಸ ನ್ಯಾಯಮೂರ್ತಿಗಳ ನೇಮಕವಾಗಬೇಕೆಂದು ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

Mekedatu Politics: ಕಾಂಗ್ರೆಸಿಗರು ನಗಾರಿ ಬಾರಿಸದಿದ್ರೆ ಸುಪ್ರಿಂ ತೀರ್ಪು ನೀಡಲ್ಲ: ದೇವೇಗೌಡ

ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ರಾಜ್ಯದ ಮುಖ್ಯ ಕಾರ‍್ಯದರ್ಶಿ ಪಿ.ರವಿಕುಮಾರ್‌, ಮೋಹನ್‌ ಕಾತರಕಿ ಸೇರಿದಂತೆ ವಿವಿಧ ಹಿರಿಯ ಕಾನೂನು ತಜ್ಞರು ಕರ್ನಾಟಕ ಭವನದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತುಂಗಭದ್ರಾ ಡ್ಯಾಮ್‌ಗೆ ಸಮತೋಲನ ಅಣೆಕಟ್ಟು

ತುಂಗಭದ್ರಾ ಡ್ಯಾಂನಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಪಕ್ಕದಲ್ಲಿ ಸಮತೋಲನ ಅಣೆಕಟ್ಟು ಕಟ್ಟುವ ಕುರಿತು ನಿರ್ಧರಿಸಲಾಗಿದೆ. ಈ ಬಗ್ಗೆ ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಿಗೆ ರಾಜ್ಯದ ಮುಖ್ಯ ಕಾರ‍್ಯದರ್ಶಿ ಅವರು ಪತ್ರ ಬರೆಯಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.