ವರಿಷ್ಠರು ಭೇಟಿಗೆ ಸಿಕ್ಕರೆ ಸಂಪುಟ ಕಸರತ್ತಿನ ಬಗ್ಗೆ ಮಾತುಕತೆ ಅಧಿಕೃತ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಸವರಾಜ್ ಬೊಮ್ಮಾಯಿ ಬಜೆಟ್‌ ಹಿನ್ನೆಲೆಯಲ್ಲಿ ಸಂಸದರೊಂದಿಗೆ ಚರ್ಚೆ

ಬೆಂಗಳೂರು(ಫೆ.07): ಅಧಿಕೃತ ಕಾರ್ಯಕ್ರಮದ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ದೆಹಲಿಗೆ(Delhi) ತೆರಳಲಿದ್ದು, ಸಂಪುಟ(Cabinet) ಕಸರತ್ತಿನ ಚರ್ಚೆ ಹಿನ್ನೆಲೆಯಲ್ಲಿ ಕುತೂಹಲ ಮೂಡಿಸಿದೆ. ಪಕ್ಷದ ವರಿಷ್ಠರು ಭೇಟಿಗೆ ಸಿಕ್ಕಲ್ಲಿ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದ್ದು, ಆ ಬಳಿಕ ಸಂಪುಟ ವಿಸ್ತರಣೆಯೇ ಅಥವಾ ಪುನಾರಚನೆಯೇ ಎಂಬುದರ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು(BJP high command) ಗಂಭೀರವಾಗಿ ತೊಡಗಿಸಿಕೊಂಡಿರುವುದರಿಂದ ಸಂಪುಟದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತಕ್ಷಣಕ್ಕೆ ಆಗುವುದು ಅನುಮಾನ ಎನ್ನಲಾಗುತ್ತಿದ್ದರೂ, ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಎಲ್ಲ ಮಾಹಿತಿಯನ್ನೂ ವರಿಷ್ಠರ ಮುಂದಿಡಲು ಮುಖ್ಯಮಂತ್ರಿಗಳು ಬಯಸಿದ್ದಾರೆ. ಒಟ್ಟಾರೆ, ಸಂಪುಟದ ಬಗ್ಗೆ ವರಿಷ್ಠರೇ ಸೂಕ್ತ ನಿರ್ಣಯ ಕೈಗೊಳ್ಳಲಿ ಎಂಬ ನಿಲವಿಗೆ ಮುಖ್ಯಮಂತ್ರಿಗಳು ಬಂದಿದ್ದಾರೆ ಎನ್ನಲಾಗಿದೆ.

 ಸದ್ಯಕ್ಕೆ ಸಂಪುಟ ಸರ್ಜರಿ ಆಗೋದು ಅನುಮಾನ

ಬಜೆಟ್‌ ಹಿನ್ನೆಲೆಯಲ್ಲಿ ಸಂಸದರೊಂದಿಗೆ ಚರ್ಚೆ-ಸಿಎಂ:
ಕೇಂದ್ರ ಬಜೆಟ್‌ ಮಂಡನೆಯಾಗಿದ್ದು, ಮುಂದಿನ ತಿಂಗಳು ರಾಜ್ಯ ಬಜೆಟ್‌ ಮಂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಲವಾರು ಯೋಜನೆಗಳ ಬಗ್ಗೆ ಚರ್ಚಿಸಲು ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಜ್ಯ ಜಲವಿವಾದವನ್ನು ಪ್ರತಿನಿಧಿಸುತ್ತಿರುವ ವಕೀಲರ ತಂಡದೊಂದಿಗೆ ಚರ್ಚಿಸಿ, ರಾಜ್ಯದ ಮುಂದಿನ ನಡೆಯ ಬಗ್ಗೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಕೇಂದ್ರ ಹಣಕಾಸು ಸಚಿವರ ಭೇಟಿಗೂ ಸಮಯ ಕೋರಲಾಗಿದೆ. ರಾಜ್ಯ ಬಜೆಟ್‌, ಹಣಕಾಸಿನ ಪರಿಸ್ಥಿತಿ, ಜಿಎಸ್ಟಿ, ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

Cabinet Reshuffle: ರಾಜ್ಯದ ಸಚಿವಾಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಶಾಕ್..

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೋರಿದ್ದೇನೆ ಎಂದಷ್ಟೇ ಮಾಹಿತಿ ನೀಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯ ಕೇಳಿದ್ದೇನೆ ಎಂದು ಬೊಮ್ಮಾಯಿ ಹೇಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮದಿ ಭೇಟಿಗೆ ಮನವಿ ಮಾಡಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ

ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಸಿಎಂ ಬೊಮ್ಮಾಯಿಗೆ ದುಂಬಾಲು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳುವುದು ನಿಗದಿಯಾದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಿದೆ. ಶುಕ್ರವಾರ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ, ಆರ್‌.ಶಂಕರ್‌, ಆನಂದ್‌ ಮಾಮನಿ ಮತ್ತಿತರ ಕೆಲವು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆದಲ್ಲಿ ತಮಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳು ಸಂಸತ್‌ ಅಧಿವೇಶನ ಹಿನ್ನೆಲೆಯಲ್ಲಿ ಸಂಸದರೊಂದಿಗೆ ಹಾಗೂ ಅಂತಾರಾಜ್ಯ ಜಲ ವಿವಾದಗಳ ಕುರಿತಂತೆ ಕಾನೂನು ತಜ್ಞರೊಂದಿಗೆ ಸಭೆ ನಡೆಸುವ ಉದ್ದೇಶದೊಂದಿಗೆ ದೆಹಲಿಗೆ ತೆರಳುತ್ತಿದ್ದಾರೆ. ಈ ವೇಳೆ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ನಡೆಸಲು ಪಕ್ಷದ ವರಿಷ್ಠರು ಲಭಿಸುವ ಸಾಧ್ಯತೆ ತೀರಾ ಕಡಮೆ ಎನ್ನಲಾಗುತ್ತಿದೆ. ಆದರೂ ಮುಖ್ಯಮಂತ್ರಿಗಳ ಮೇಲೆ ಶಾಸಕರು ತಮ್ಮ ಒತ್ತಡ ಮುಂದುವರೆಸಿದ್ದಾರೆ.