Asianet Suvarna News Asianet Suvarna News

ಶತಮಾನ ಕಳೆದರೂ ಕೆಂಪೇಗೌಡ ಅಜರಾಮರ: ಸಿಎಂ ಬೊಮ್ಮಾಯಿ

ದೂರದೃಷ್ಟಿಮತ್ತು ವ್ಯವಸ್ಥಿತ ಯೋಜನೆಗಳಿರುವ ಆಡಳಿತಗಾರರು ಶತಶತಮಾನಗಳು ಉರುಳಿದರೂ ಅಜರಾಮರಾಗಿ ಇರುತ್ತಾರೆ ಎನ್ನುವುದಕ್ಕೆ ಬೆಂಗಳೂರಿನ ಸ್ಥಾಪಕ ನಾಡಪ್ರಭು ಕೆಂಪೇಗೌಡರೇ ಸಾಕ್ಷಿಯಾಗಿದ್ದು, ಕನ್ನಡ ನಾಡನ್ನು ಸಮೃದ್ಧಿಯ ನಾಡನ್ನಾಗಿ ಮಾಡಲು ನಾಡಪ್ರಭು ಕೆಂಪೇಗೌಡ ಪ್ರಗತಿಯ ಪ್ರತಿಮೆ ಪೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

Cm Basavaraj Bommai talks over kempegowda gvd
Author
First Published Oct 22, 2022, 2:02 PM IST

ಬೆಂಗಳೂರು (ಅ.22): ದೂರದೃಷ್ಟಿ ಮತ್ತು ವ್ಯವಸ್ಥಿತ ಯೋಜನೆಗಳಿರುವ ಆಡಳಿತಗಾರರು ಶತಶತಮಾನಗಳು ಉರುಳಿದರೂ ಅಜರಾಮರಾಗಿ ಇರುತ್ತಾರೆ ಎನ್ನುವುದಕ್ಕೆ ಬೆಂಗಳೂರಿನ ಸ್ಥಾಪಕ ನಾಡಪ್ರಭು ಕೆಂಪೇಗೌಡರೇ ಸಾಕ್ಷಿಯಾಗಿದ್ದು, ಕನ್ನಡ ನಾಡನ್ನು ಸಮೃದ್ಧಿಯ ನಾಡನ್ನಾಗಿ ಮಾಡಲು ನಾಡಪ್ರಭು ಕೆಂಪೇಗೌಡ ಪ್ರಗತಿಯ ಪ್ರತಿಮೆ ಪೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ ಅನಾವರಣದ ಪ್ರಯುಕ್ತ ನಾಡಿನಾದ್ಯಂತ ಪವಿತ್ರ ಮೃತ್ತಿಕಾ ಸಂಗ್ರಹಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಭಿವೃದ್ಧಿ ನಿರಂತರವಾಗಿ ನಡೆಯಬೇಕೆಂಬ ಆಶಯದಿಂದ ಈ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರುವ ಸೂಚನೆ ನೀಡುತ್ತಿದೆ. ನವ ಕರ್ನಾಟಕದಿಂದ ನವಭಾರತ ನಿರ್ಮಾಣದ ಧ್ಯೇಯವನ್ನು ಸಾಧಿಸುವ ಆತ್ಮವಿಶ್ವಾಸವನ್ನು ಈ ಪ್ರಗತಿಯ ಪ್ರತಿಮೆ ನೀಡಲಿದೆ. ನ.11ರಂದು ಪ್ರಧಾನಿ ನರೇಂದ್ರ ಮೋದಿಯವರ ಹಸ್ತದಿಂದ ಪ್ರತಿಮೆ ಅನಾವರಣಗೊಳ್ಳುತ್ತಿದೆ ಎಂದು ಹೇಳಿದರು.

ಕೆಂಪೇಗೌಡ ಥೀಮ್‌ ಪಾರ್ಕ್‌ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಕೆಂಪೇಗೌಡ ಅವರು ಜನರ ನಡುವೆಯೇ ಬದುಕಿ, ಇಲ್ಲಿನ ಜನರ ನೆಮ್ಮದಿಗೆ ಇಂತಹದೊಂದು ನಗರವನ್ನು ನಿರ್ಮಿಸಿ ಹೋಗಿದ್ದಾರೆ. ಇತಿಹಾಸವನ್ನು ಮರೆತರೆ ನಮ್ಮ ಭವಿಷ್ಯ ಮಂಕಾಗುತ್ತದೆ. ಕೆಂಪೇಗೌಡರಿಗೆ ಸೂಕ್ತ ಗೌರವ ಸಲ್ಲಬೇಕೆಂಬ ಸಂಕಲ್ಪ ಸರ್ಕಾರದ್ದಾಗಿತ್ತು. ಅನೇಕ ದಶಕಗಳ ಈ ಕನಸು ಈಗ ನನಸಾಗುತ್ತಿದೆ. ಅಮೆರಿಕದ ಸ್ವತಂತ್ರ ಪ್ರತಿಮೆ, ಗುಜರಾತ್‌ನ ಏಕತಾ ಪ್ರತಿಮೆಗಳಂತೆ ನಮ್ಮಲ್ಲಿ ಕೆಂಪೇಗೌಡರ ಪ್ರತಿಮೆಗೆ ಪ್ರಗತಿ ಪ್ರತಿಮೆ ಎಂದು ಹೆಸರಿಸಲಾಗಿದೆ. ಅವರ 108 ಅಡಿ ಎತ್ತರದ ಪ್ರತಿಮೆಗೆ ತಕ್ಕಂತೆ ಕರ್ನಾಟಕವು ಇಡೀ ದೇಶದಲ್ಲಿ ನಂ.1 ಸ್ಥಾನಕ್ಕೆ ಏರಬೇಕು. ಈ ಪ್ರತಿಮೆ ಸ್ಥಾಪನೆಯು ರಾಜ್ಯದ ಉಜ್ವಲ ಭವಿಷ್ಯದ ಸಂಕೇತವಾಗಿದೆ ಎಂದರು.

ಬಸವಣ್ಣ, ಬುದ್ಧ, ಮಹಾವೀರರು ಸೇರಿದಂತೆ ತತ್ವಜ್ಞಾನಿಗಳೆಲ್ಲರೂ ಆಡಳಿತ ನಡೆಸಿದ್ದು, ಆಧ್ಯಾತ್ಮಿಕತೆಯಿಂದ ಜನಕಲ್ಯಾಣವಾಗಬೇಕು ಎಂದು ಪರಿವರ್ತನೆಯಾದವರು. ಆದರೆ, ಕೆಂಪೇಗೌಡ ಅವರು ಜನರ ನಡುವೆಯೇ ಇದ್ದು, ಜನರ ಬದುಕನ್ನು ಕಟ್ಟಿದವರು. ಆದ್ದರಿಂದ ಬೆಂಗಳೂರಲ್ಲಿ ಕೆಂಪೇಗೌಡ ಪ್ರತಿಮೆಯನ್ನು ನಿರ್ಮಿಸುವ ತೀರ್ಮಾನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೈಗೊಂಡರು. ಕೆಂಪೇಗೌಡ ಬದುಕು, ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ರಾಜ್ಯದ ಎಲ್ಲ ಪುಣ್ಯಭೂಮಿಯಿಂದ ಮೃತ್ತಿಕೆಯನ್ನು ತಂದು ಪ್ರತಿಮೆಯಲ್ಲಿ ಸೇರಿಸಲಾಗುತ್ತಿದೆ. 

ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿಎಂ ಬೊಮ್ಮಾಯಿ

ಕೆಂಪೇಗೌಡರ ಪ್ರೇರಣೆ ಕನ್ನಡ ನಾಡಿನ ಮಣ್ಣಿನ ಕಣಕಣದಲ್ಲಿಯೂ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದ ಡಿ.ವಿ.ಸದಾನಂದಗೌಡ, ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಕುಮಾರ ಚಂದ್ರಶೇಖರ್‌ನಾಥ ಸ್ವಾಮೀಜಿ, ಸಚಿವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಡಾ.ಕೆ.ಸುಧಾಕರ್‌, ಸುನೀಲ್‌ಕುಮಾರ್‌, ಆರಗ ಜ್ಞಾನೇಂದ್ರ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios