* ದೊಡ್ಡ ಮಟ್ಟದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು* ಟೂರಿಸಂ ನಕ್ಷೆಯನ್ನೇ ಬದಲಿಸುತ್ತೇವೆ: ಬೊಮ್ಮಾಯಿ* ಕೇಂದ್ರ ಸರ್ಕಾರದಿಂದ ಬಹುದೊಡ್ಡ ಅನುದಾನ ಬರುವ ನಿರೀಕ್ಷೆ
ಬೆಂಗಳೂರು(ಮೇ.05): ರಾಜ್ಯದಲ್ಲಿ(Karnataka) ಪ್ರವಾಸೋದ್ಯಮವನ್ನು(Tourism) ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗೊಳಿಸಿ ಮುಂದಿನ ಕೆಲ ವರ್ಷಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮ ನಕ್ಷೆಯನ್ನು ಸಂಪೂರ್ಣವಾಗಿ ಬದಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
‘ಏಷ್ಯಾನೆಟ್ ಸುವರ್ಣ ನ್ಯೂಸ್(Asianet Suvarna News) ಮತ್ತು ಕನ್ನಡಪ್ರಭ’(Kannada Prabha) ವತಿಯಿಂದ ಜಗತ್ತಿನ ಏಳು ಅದ್ಭುತಗಳ ಮಾದರಿಯಲ್ಲಿ ‘ಕರ್ನಾಟಕದ ಏಳು ಅದ್ಭುತಗಳನ್ನು’ ಸಾರ್ವಜನಿಕರಿಂದಲೇ ಗುರುತಿಸಲು ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ‘ಬನ್ನಿ ಹುಡುಕೋಣ ಕರ್ನಾಟಕದ 7 ಅದ್ಭುತಗಳನ್ನು’ ವಿಶೇಷ ಅಭಿಯಾನಕ್ಕೆ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.
ವಿಪರೀತ ಬಿಸಿಲ ಧಗೆ, ಗಿರಿ ಪ್ರದೇಶದಿಂದ ದೂರ ಉಳಿದ ಪ್ರವಾಸಿಗರು
ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ(Government of Karnataka) ಹಲವು ಯೋಜನೆಗಳನ್ನು ರೂಪಿಸಿದೆ. ಬಜೆಟ್‌ನಲ್ಲಿ ಸಾಕಷ್ಟು ಅನುದಾನ(Grants) ಮೀಡಲಿಸಲಾಗಿದೆ. ಜೋಗ ಜಲಪಾತದಲ್ಲಿ 116 ಕೋಟಿ ರು. ವೆಚ್ಚದಲ್ಲಿ, ನಂದಿಬೆಟ್ಟದಲ್ಲಿ 93 ಕೋಟಿ ರು.ವೆಚ್ಚದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅದೇ ರೀತಿ ಚಾಮುಂಡಿಬೆಟ್ಟ, ಉತ್ತರ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಯಾಣ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟಕ್ಕೂ ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಅದೇ ರೀತಿ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮತ್ತು ಸುತ್ತಮುತ್ತಲ ಪ್ರದೇಶಗಳ ವಿಶೇಷ ಅಭಿವೃದ್ಧಿಗೆ ಈ ವರ್ಷ 100 ಕೋಟಿ ರು. ಅನುದಾನವನ್ನು ಬಜೆಟ್‌ನಲ್ಲಿ ಮೀಡಲಿಸಲಾಗಿದೆ. ಸಿಆರ್‌ಜೆಡ್ ಮಾರ್ಗಸೂಚಿಗಳನ್ನು ಪಡೆದುಕೊಂಡು ಕರಾವಳಿ ಪ್ರದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರದಿಂದ ಬಹುದೊಡ್ಡ ಅನುದಾನ ಬರುವ ನಿರೀಕ್ಷೆ ಇದೆ. ಇದರಿಂದ ಭವಿಷ್ಯದಲ್ಲಿ ಕರ್ನಾಟಕ ಪ್ರವಾಸೋದ್ಯಮ ನಕ್ಷೆಯೇ ಬದಲಾಗಲಿದೆ ಎಂದು ತಿಳಿಸಿದರು.
ದಾಂಡೇಲಿ-ಜೊಯಿಡಾದಲ್ಲಿ ಅನಧಿಕೃತ ರ‍್ಯಾಫ್ಟಿಂಗ್ ಬ್ಯಾನ್
ಕರ್ನಾಟಕ ನೈಸರ್ಗಿಕವಾಗಿ, ಪಾರಂಪರಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೇವರ ಸೃಷ್ಟಿಯ ಅದ್ಭುತ ನಾಡು. ಇಲ್ಲಿ 10 ಕೃಷಿ ಹವಾಮಾನ ವಲಯಗಳಿವೆ (Agro Climate Zone). ವರ್ಷದ 365 ದಿನವೂ ಕೃಷಿ ಮಾಡಬಹುದಾದ ವಾತಾವರಣವಿದೆ. ಒಮ್ಮೆ ನಾನು ಹೆಲಿಕಾಪ್ಟರ್‌ನಲ್ಲಿ ಹೋಗುವಾಗ ಪಶ್ಚಿಮಘಟ್ಟಗಳಲ್ಲಿ ದಾರಿ ತಪ್ಪಿ ದಟ್ಟಾರಣ್ಯದಲ್ಲಿ ಇಳಿದಿದ್ದೆ. ಅಲ್ಲಿನ ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಕುಲ, ಹೂವು, ಜಲಧಾರೆಯನ್ನು ನೋಡಿದಾಗ ಕೈಲಾಸವನ್ನೇ ನೋಡಿದಂತಾಯ್ತು. ಕರ್ನಾಟಕದಲ್ಲಿ ರಾಷ್ಟ್ರಕೂಟರು, ಚಾಲುಕ್ಯರಿಂದ ಹಿಡಿದು ವಿಜಯನಗರ ಸಾಮ್ರಾಜ್ಯದವರೆಗೆ ಆಡಳಿತ ನಡೆಸಿದ ರಾಜಮನೆತನಗಳು ತಮ್ಮದೇ ಆದ ಶಿಲಾ ಶಾಸನಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಆಳುವುದು ಬೇರೆ, ಆಡಳಿತ ಬೇರೆ ಎಂಬೆಲ್ಲಾ ತತ್ವಗಳನ್ನು ದಾಖಲಿಸಿದ್ದಾರೆ. ಅವುಗಳನ್ನು ಹೊರಗೆ ತೆಗೆಯುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ, ಅಭಿಯಾನದ ರಾಯಭಾರಿ ನಟ ರಮೇಶ್ ಅರವಿಂದ್, ಏಷ್ಯಾನೆಟ್ ನ್ಯೂಸ್‌ನೆಟ್‌ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಾಲ್ರಾ, ಸಿಇಒ ನೀರಜ್ ಕೊಹ್ಲಿ, ಬ್ಯುಸಿನೆಸ್ ಹೆಡ್ ಅಪ್ಪಚ್ಚು, ಜಾಹೀರಾತು ವಿಭಾಗದ ಉಪಾಧ್ಯಕ್ಷ ಅನಿಲ್ ಸುರೇಂದ್ರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿದೇಶಕ ಜಗದೀಶ್ ಹಾಗೂ ಜಂಟಿ ಆಯುಕ್ತೆ ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.
