ರೈತರು, ಸ್ತ್ರೀಯರು, ಯುವಕರು, ದುಡಿವ ವರ್ಗಕ್ಕೆ ಒತ್ತು, ಸಂಕಷ್ಟದಲ್ಲಿರುವ ಜನರಿಗೆ ಸಹಾಯ: ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ

ಬೆಂಗಳೂರು(ಜ.15): ಚುನಾವಣೆ ಹೊಸ್ತಿಲಿನಲ್ಲಿರುವ ರಾಜ್ಯ ಬಿಜೆಪಿ ಸರ್ಕಾರವು ಪ್ರಸ್ತುತ ಅವಧಿಯ ಕೊನೆಯ ಬಜೆಟ್‌ನಲ್ಲಿ ರಾಜ್ಯದ ಜನತೆಗೆ ಭರಪೂರ ಕೊಡುಗೆ ನೀಡಲು ಸಿದ್ಧತೆ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಿಳೆಯರು, ಯುವಕರು, ದುಡಿಯುವ ವರ್ಗಕ್ಕೆ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ ಇದೆ. ಫೆಬ್ರವರಿ ತಿಂಗಳಲ್ಲಿ ಬಜೆಟ್‌ ಅಧಿವೇಶನ ನಡೆಯಲಿದೆ. ಇದಕ್ಕಾಗಿ ಇಲಾಖಾವಾರು ವೆಚ್ಚಗಳು ಮತ್ತು ಆದಾಯ ಸಂಗ್ರಹ ಕುರಿತ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇಲಾಖಾವಾರು ಸಭೆ ನಡೆಸಿ ಬೇಡಿಕೆಗಳ ಮನವಿಯನ್ನು ಸಿಎಂ ಪಡೆದುಕೊಳ್ಳಲಿದ್ದಾರೆ.

ಈ ಸಂಬಂಧ ಶನಿವಾರ ರೇಸ್‌ಕೋರ್ಸ್‌ ರಸ್ತೆಯ ನಿವಾಸದ ಬಳಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್‌ ಮತ್ತು ಪ್ರವಾಹದ ಕಾರಣದಿಂದಾಗಿ ಸಂಕಷ್ಟಎದುರಿಸುತ್ತಿರುವ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣು ಮಕ್ಕಳಿಗೆ ನೆರವಾಗುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಮನೆ ನಿರ್ವಹಿಸಲು ಅಗತ್ಯ ಇರುವ ಆರ್ಥಿಕ ನೆರವು ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಹೇಳಿದರು.

Union Budget Session: ಜನವರಿ 31 ರಿಂದ 66 ದಿನಗಳ ಸಂಸತ್ ಬಜೆಟ್ ಅಧಿವೇಶನ: ಪ್ರಲ್ಹಾದ್ ಜೋಶಿ

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ದಿನಾಂಕ ಗೊತ್ತು ಮಾಡಲಾಗುವುದು. ಅಲ್ಲದೇ, ಬಜೆಟ್‌ ಅಧಿವೇಶನವನ್ನು ಫೆ.17ರಂದು ನಡೆಸುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭ ಮಾಡಲಾಗಿದೆ. ಡಿಸೆಂಬರ್‌ವರೆಗೆ ರಾಜ್ಯದ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಇದನ್ನು ಇನ್ನಷ್ಟುಹೆಚ್ಚಿಸಲು ಗುರಿಗಳನ್ನು ಹೆಚ್ಚು ಮಾಡುವಂತೆ ಸೂಚನೆ ನೀಡಲಾಗುವುದು. ಜನಪರ ಬಜೆಟ್‌ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ಕುಟುಂಬ ನಿರ್ವಹಣೆ ಮಾಡುವ ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವನ್ನು ನೀಡಲಾಗುವುದು. ಸ್ತ್ರೀ ಸಾಮರ್ಥ್ಯದ ಜತೆಗೆ ಸ್ತ್ರೀ ಶಕ್ತಿ ಯೋಜನೆಯಡಿ ಕೋವಿಡ್‌ ಉಪಚಾರ, ಆರೋಗ್ಯ, ಮುಂತಾದವುಗಳಿಗೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿರುತ್ತದೆ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಮೊದಲು ಚಾಲನೆಗೊಳಿಸಿ ಅದನ್ನು ಅನುಷ್ಠಾನಗೊಳಿಸಿ, ಪ್ರತಿ ಮನೆಗೆ ಸ್ತ್ರೀಯರ ಹೆಸರಿನಲ್ಲಿ ಸಹಾಯ ನೀಡಲಾಗುವುದು. ಜನ ಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆಗಳ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದರು.

ಶೀಘ್ರದಲ್ಲೇ ಮೋದಿ ಸಚಿವ ಸಂಪುಟ ಸರ್ಜರಿ, ಹೊಸ ಸಚಿವರ ನೇಮಕಕ್ಕೆ ಸಿದ್ಧತೆ!

ದುಡಿಯುವ ವರ್ಗಕ್ಕೆ ಹೆಚ್ಚಿನ ಅನುಕೂಲ ಮಾಡುವ ಚಿಂತನೆ ಮಾಡಲಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಐದು ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ತಲಾ ಒಂದು ಲಕ್ಷ ರು. ನೀಡಿ ಸ್ವಾವಲಂಬಿ ಮಾಡಲು ‘ಎಂಡ್‌ ಟು ಎಂಡ್‌’ ಅಪ್ರೋಚ್‌ವುಳ್ಳ ಕಾರ್ಯಕ್ರಮ ಇದಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಪ್ರಾರಂಭಿಸುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ ಎರಡು ಸ್ತ್ರೀ ಶಕ್ತಿ ಸಂಘಕ್ಕೆ ಐದು ಲಕ್ಷ ರು.ವರೆಗೆ ಸಹಾಯ ಧನ ನೀಡಲಾಗುವುದು ಎಂದು ನುಡಿದರು.

ಪೌಷ್ಟಿಕ ಆಹಾರ ನೀಡಲು ದೊಡ್ಡ ಪ್ರಮಾಣದ ಘೋಷಣೆ ಮಾಡಲಾಗಿದೆ. ತೀವ್ರ, ಮಧ್ಯಮ ಎಂಬ ವರ್ಗೀಕರಣವಿದ್ದು, ತೀವ್ರ ಕೊರತೆಯಿರುವವರಿಗೆ ನೀಡುವ ಆಹಾರವನ್ನೇ ಮಧ್ಯಮ ಕೊರತೆ ಇರುವವರಿಗೆ ನೀಡುವುದು ಈಗಾಗಲೇ ಅನುಷ್ಠಾನಗೊಳ್ಳುತ್ತಿದೆ. ಜನಸಾಮಾನ್ಯರ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ನೆರವು, ದುಡಿಯುವ ವರ್ಗಕ್ಕೆ ಹೆಚ್ಚಿನ ಸಹಾಯ, ಯುವಕರು ಮತ್ತು ಸ್ತ್ರೀಯರಿಗೆ ಸಹಾಯ ಮಾಡಲಾಗುವುದು ಎಂದು ಹೇಳಿದರು.

ಸಿಎಂ ಹೇಳಿದ್ದೇನು?

- ಮುಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಬಜೆಟ್‌ ಅಧಿವೇಶನಕ್ಕೆ ದಿನಾಂಕ ನಿಗದಿ
- ಜನಪರ ಬಜೆಟ್‌ ಮಂಡನೆಗೆ ತೀರ್ಮಾನ. ಜನಕಲ್ಯಾಣಕ್ಕೆ ಒತ್ತು ನೀಡುವ ಯೋಜನೆ
- ಮಹಿಳೆ ತನ್ನ ಕುಟುಂಬವನ್ನು ಸ್ವತಂತ್ರವಾಗಿ ನಿರ್ವಹಿಸಲು ಬೇಕಾದ ನೆರವು ಘೋಷಣೆ
- ಸ್ವಯಂ ಉದ್ಯೋಗ ಕೈಗೊಳ್ಳಲು ರಾಜ್ಯದ 5 ಲಕ್ಷ ಯುವಕರಿಗೆ ತಲಾ 1 ಲಕ್ಷ ರು. ನೆರವು
- ಪ್ರತಿ ಗ್ರಾಮದ 2 ಸ್ತ್ರೀಶಕ್ತಿ ಸಂಘಗಳಿಗೆ 5 ಲಕ್ಷ ರು.ವರೆಗೆ ಸಹಾಯಧನ ನೀಡಲು ಯೋಜನೆ
- ರೈತರು, ಕಾರ್ಮಿಕರು, ದಲಿತ, ಒಬಿಸಿ ವರ್ಗದ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ಜಾರಿ
- ಡಿಸೆಂಬರ್‌ವರೆಗೆ ರಾಜ್ಯದ ಆದಾಯ 3 ಪಟ್ಟು ಹೆಚ್ಚಾಗಿದೆ. ಹೀಗಾಗಿ ಬಜೆಟ್‌ ಜನಪರ