ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಂತೆ: ಸಿಎಂ ಬೊಮ್ಮಾಯಿ
ಭದ್ರಾ ಮೇಲ್ದಂಡೆಗೆ 5300 ಕೋಟಿ ರು. ಅನುದಾನ ಲಭಿಸಿದ್ದಕ್ಕೆ ಪ್ರತಿಪಕ್ಷಗಳು ಸ್ವಾಗತ ಮಾಡಬೇಕು. ಅದರಲ್ಲಿ ತಪ್ಪು ನೋಡುವಂತಹದ್ದು ಸರಿಯಲ್ಲ. ಆದರೆ, ಪ್ರತಿಪಕ್ಷಗಳು ರಾಜಕೀಯವಾಗಿ ಟೀಕೆ ಮಾಡುವುದು ಸಹಜ. ಅನುದಾನ ನೀಡಿರುವುದಕ್ಕೆ ನಿರಾಶೆಯಾಗಿ ಈ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಸಿಎಂ ಬೊಮ್ಮಾಯಿ.

ಬೆಂಗಳೂರು(ಫೆ.03): ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರು. ಅನುದಾನ ನೀಡಿದ್ದರಿಂದ ಪ್ರತಿಪಕ್ಷಗಳಿಗೆ ನಿರಾಶೆಯಾಗಿದೆ. ಅದಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆಗೆ 5300 ಕೋಟಿ ರು. ಅನುದಾನ ಲಭಿಸಿದ್ದಕ್ಕೆ ಪ್ರತಿಪಕ್ಷಗಳು ಸ್ವಾಗತ ಮಾಡಬೇಕು. ಅದರಲ್ಲಿ ತಪ್ಪು ನೋಡುವಂತಹದ್ದು ಸರಿಯಲ್ಲ. ಆದರೆ, ಪ್ರತಿಪಕ್ಷಗಳು ರಾಜಕೀಯವಾಗಿ ಟೀಕೆ ಮಾಡುವುದು ಸಹಜ. ಅನುದಾನ ನೀಡಿರುವುದಕ್ಕೆ ನಿರಾಶೆಯಾಗಿ ಈ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಭದ್ರಾ ಮೇಲ್ದಂಡೆ ಯೋಜನೆ 1964ರಿಂದಲೇ ಬೇಡಿಕೆಯಿದ್ದರೂ, 2008ರವರೆಗೂ ಯಾವುದೇ ನಿರ್ದಿಷ್ಟ ಕ್ರಮ ಆಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಕಾಲದಿಂದಲೇ ಯೋಜನೆ ಜಾರಿ ಪ್ರಕ್ರಿಯೆ ಇತ್ತು. ಸುಮಾರು 40 ವರ್ಷ ಪ್ರಕ್ರಿಯೆಯಲ್ಲಿಯೇ ಕಳೆದು ಹೋಯಿತು. ಯಾವ ಸರ್ಕಾರವೂ ಮಾಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಮಾಡಿತು. ಪ್ರತಿಪಕ್ಷದವರು ಈ ಯೊಜನೆಗೆ ಈ ವರ್ಷ ಹಣ ಬರುವುದಿಲ್ಲ ಎಂದಿದ್ದಾರೆ. ಬಜೆಟ್ ಇರುವುದೇ 2023-24ನೇ ಸಾಲಿಗೆ. ಮೊದಲು 16 ಟಿಎಂಸಿ ಇದ್ದು, ಈಗ 23 ಟಿಎಂಸಿ ನೀರಿಗೆ ಹೆಚ್ಚಿಗೆ ಮಾಡಿದ್ದರಿಂದ ಯೋಜನೆಯ ವೆಚ್ಚವೂ ಹೆಚ್ಚಾಗಿದೆ. ರಾಷ್ಟ್ರೀಯ ಯೋಜನೆ ಘೋಷಣೆಯಾಗುವುದಕ್ಕೆ ಜಲಸಂಪನ್ಮೂಲ ಇಲಾಖೆ, ಡಿಡಬ್ಲ್ಯೂಸಿ, ಆರ್ಥಿಕ ಇಲಾಖೆಯ ಕ್ಲಿಯರೆನ್ಸ್ ದೊರೆತು, ಸಚಿವ ಸಂಪುಟದಲ್ಲಿಯೂ ಅನುಮೋದನೆ ಪಡೆದು ಬಜೆಟ್‌ನಲ್ಲಿಯೂ ಘೋಷಣೆಯಾಗಿರುವುದರಿಂದ ರಾಷ್ಟ್ರೀಯ ಯೋಜನೆ ಒಪ್ಪಿಗೆಯನ್ನು ಕೊಟ್ಟಂತೆಯೇ ಎಂದು ಹೇಳಿದರು.
ಅಪ್ಪಣ್ಣ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಲು ಕ್ರಮ: ಸಿಎಂ ಬೊಮ್ಮಾಯಿ
ಮೊದಲು ಎಐಬಿಪಿ ಕಾರ್ಯಕ್ರಮದಂತೆ ನೀರಾವರಿ ಯೋಜನೆಗಳ ಪ್ರಗತಿಯಂತೆ ಹಣ ಬಿಡುಗಡೆಯಾಗುತ್ತಿದ್ದು, ಯುಪಿಎ ಸರ್ಕಾರ 2012ರಲ್ಲಿ ಅನುದಾನ ಖರ್ಚು ಮಾಡಿದ ಮೇಲೆಯೇ ಹೆಚ್ಚಿನ ಅನುದಾನ ನೀಡುವ ನಿರ್ಬಂಧ ಹಾಕಿದ್ದರ ಕಾರಣ, ಎಐಬಿಪಿಯಲ್ಲಿ ಹಲವಾರು ಕರ್ನಾಟಕ ಯೋಜನೆಗಳು ಅನುದಾನವೇ ಬರಲಿಲ್ಲ. ನಂತರ ಎನ್‌ಡಿಎ ಸರ್ಕಾರ ಬಂದ ನಂತರ ಈ ಪರಿಸ್ಥಿತಿಯನ್ನು ಬದಲಾಯಿಸಿ, ಯೋಜನೆಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆಯಾಗಿದೆ. ಆದ್ದರಿಂದ ಕೇಂದ್ರದಿಂದ ಯಾವುದೇ ಕರಾರಿಲ್ಲದೇ 5300 ಕೋಟಿ ರು. ಅನುದಾನ ನೀಡಿದೆ. ಈಗಾಗಲೇ ನಮ್ಮ ಸರ್ಕಾರ 13 ಸಾವಿರ ಕೋಟಿ ರು. ವೆಚ್ಚ ಮಾಡಿದೆ. ಮುಂದಿನ ದಿನದಲ್ಲಿ ಕೇಂದ್ರದಿಂದ ಬರುವ ಹಣ ಬಳಸಿಕೊಳ್ಳಲಾಗುವುದು. ನಂತರದ ಕಾಡಾ ಕೆಲಸಗಳಿಗೆ ಪುನಃ ಅನುದಾನವನ್ನು ನೀಡಲಿದ್ದಾರೆ. ರಾಜ್ಯದ ಒಂದೇ ಯೋಜನೆಗೆ ಇಷ್ಟೊಂದು ಹಣ ಬಂದಿರುವುದಕ್ಕೆ ಸಂತೋಷಪಡಬೇಕು. ರಾಜ್ಯದ ಯೋಜನೆಗೆ ಇಷ್ಟುದೊರೆತಿರುವುದಕ್ಕೆ ಪ್ರತಿಪಕ್ಷದವರಿಗೆ ನಿರಾಸೆಯಾಗಿ ಈ ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮೇಕೆದಾಟು ಯೋಜನೆ ಪ್ರಾರಂಭ ಮಾಡುವಾಗಲೇ ಸರ್ಕಾರ ತಪ್ಪು ಮಾಡಿದೆ. ಹೀಗಾಗಿ ಅದು ಅಂತಾರಾಜ್ಯ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅಂದಿನ ಸರ್ಕಾರ ಮೇಕೆದಾಟು ವಿವಾದವೇ ಇಲ್ಲ ಎಂದಿತು. ಈಗ ಸುಪ್ರೀಂಕೋರ್ಚ್‌ನಲ್ಲಿ ಸಿಕ್ಕಿಕೊಂಡಿದೆ. ಸುಪ್ರೀಂಕೊರ್ಚ್‌ನಿಂದ ಆಕಸ್ಮಾತ್ ಅನುಮತಿ ಬಂದರೆ ಹಣಕಾಸಿನ ವ್ಯವಸ್ಥೆ ಬಜೆಟ್‌ನಲ್ಲಿ ಇರಲಿ ಎಂದು ಅವಕಾಶ ಮಾಡಿಕೊಳ್ಳಲಾಗಿದೆ. ಅನುಮತಿ ಬಂದರೆ ನಾವು ಅನುದಾನ ಬಳಕೆ ಮಾಡಿಕೊಳ್ಳುತ್ತೇವೆ. ಡಿಪಿಆರ್ ಅನುಮತಿ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ಡಿಪಿಆರ್ ಅನುಮತಿ ದೊರೆತರೆ, ಆದಷ್ಟುಬೇಗನೇ ಕೆಲಸ ಪ್ರಾರಂಭ ಮಾಡುತ್ತೇವೆ ಎಂದರು.