*  ಈವರೆಗೂ 149 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮನ*  ಇನ್ನೂ 544 ವಿದ್ಯಾರ್ಥಿಗಳು ಮರಳುವುದು ಬಾಕಿ*  ಖಾರ್ಕಿವ್‌ ಸೇರಿ ಇತರೆ ನಗರಗಳಲ್ಲಿರುವ ವಿದ್ಯಾರ್ಥಿಗಳಿಗೆ ದೂರವಾಣಿ ಕರೆ 

ಬೆಂಗಳೂರು(ಮಾ.04): ‘ಸುರಕ್ಷಿತವಾಗಿ ನಿಮ್ಮನ್ನು ರಾಜ್ಯಕ್ಕೆ(Karnataka) ಕರೆತರಲು ಸರ್ವ ಪ್ರಯತ್ನ ನಡೆಸುವುದು’ ಎಂದು ಉಕ್ರೇನ್‌ನ ಯುದ್ಧ ಹೆಚ್ಚಿರುವ ನಗರಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ(Kannadiga Students) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಭರವಸೆ ನೀಡಿದ್ದಾರೆ.

ಉಕ್ರೇನ್‌ನಲ್ಲಿ(Ukraine) ಸಂಕಷ್ಟದಲ್ಲಿರುವ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಗುರುವಾರ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ತಮ್ಮ ಪರಿಸ್ಥಿತಿಯನ್ನು ವಿವರಿಸಿದ ವಿದ್ಯಾರ್ಥಿಗಳು ಅಂದಾಜು 200 ಮಂದಿ ಕನ್ನಡಿಗ ವಿದ್ಯಾರ್ಥಿಗಳು ಖಾರ್ಕಿವ್‌ನಲ್ಲಿದ್ದೇವೆ ಶೀಘ್ರ ರಕ್ಷಣೆ ಅಗತ್ಯವಿದೆ’ ಎಂದು ಕೋರಿದರು. ಬೆಂಗಳೂರು(Bengaluru) ಮೂಲದ ಗಗನ್‌ ಎಂಬುವವರು ಮಾತನಾಡಿ, ‘ಒಂದಿಷ್ಟುಮಂದಿ ತಂಡಗಳನ್ನು ಮಾಡಿಕೊಂಡು ಖಾರ್ಕಿವ್‌ನಿಂದ 30 ಕಿ.ಮೀ ದೂರದ ಪ್ರದೇಶಕ್ಕೆ ನಾವು ನಡೆದುಕೊಂಡು ಸಾಗಿದ್ದೇವೆ. ಸದ್ಯಕ್ಕೆ ನಾವು ಸುರಕ್ಷಿತವಾಗಿ ಇದ್ದೇವೆ’ ಎಂದು ವಿವರಿಸಿದರು.

Russia Ukraine Crisis ಇಂದು 100ಕ್ಕೂ ಅಧಿಕ ಕನ್ನಡಿಗರು ಮರಳುವ ನಿರೀಕ್ಷೆ

ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಮುಖ್ಯಮಂತ್ರಿಗಳು ‘ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಕರ್ನಾಟಕ ಸರ್ಕಾರ(Government of Karnataka) ನಿರಂತರವಾಗಿ ಸಂಪರ್ಕದಲ್ಲಿದೆ. ನಿಮಗೆ ಎಲ್ಲ ರೀತಿಯ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಿಮ್ಮನ್ನು ಅಲ್ಲಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಉಪಸ್ಥಿತರಿದ್ದರು.

ಮತ್ತೆ 63 ಕನ್ನಡಿಗರು ಉಕ್ರೇನ್‌ನಿಂದ ತವರಿಗೆ

ಉಕ್ರೇನ್‌ನಿಂದ ಗುರುವಾರ ಭಾರತಕ್ಕೆ(India) ಬಂದ 10 ಆಪರೇಷನ್‌ ಗಂಗಾ(Operation Ganga) ವಿಮಾನಗಳಲ್ಲಿ ಕರ್ನಾಟಕದ 63 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ಮೂಲಕ ಒಟ್ಟಾರೆ ಐದು ದಿನಗಳಲ್ಲಿ 149 ಕನ್ನಡಿಗರು ಉಕ್ರೇನ್‌ನಿಂದ ತವರಿಗೆ ಮರಳಿದಂತಾಗಿದೆ.

ಬುಧವಾರದ ಅಂತ್ಯಕ್ಕೆ ರಾಜ್ಯದ 86 ವಿದ್ಯಾರ್ಥಿಗಳು ಆಗಮಿಸಿದ್ದರು. ಗುರುವಾರ ಮುಂಬೈ ಬಂದ ಒಂದು ವಿಮಾನ ಮತ್ತು ದೆಹಲಿ ಬಂದ 9 ವಿಮಾನ ಸೇರಿ ಒಟ್ಟಾರೆ ಭಾರತಕ್ಕೆ ಬಂದ 10 ವಿಮಾನಗಳಲ್ಲಿಯೂ ರಾಜ್ಯ ವಿದ್ಯಾರ್ಥಿಗಳಿದ್ದರು. ಉಕ್ರೇನ್‌ನಿಂದ ಮುಂಬೈಗೆ ಬಂದಿದ್ದ ನಾಲ್ವರು ಬೆಳಿಗ್ಗೆ 11 ಗಂಟೆಗೆ ಮತ್ತು ದೆಹಲಿಗೆ ಬಂದಿದ್ದ 59 ವಿದ್ಯಾರ್ಥಿಗಳು ತಂಡಗಳಾಗಿ ಪ್ರತ್ಯೇಕ ವಿಮಾನಗಳಲ್ಲಿ ಮಧ್ಯಾಹ್ನದಿಂದ ತಡರಾತ್ರಿವರೆಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವಿದ್ಯಾರ್ಥಿಗಳನ್ನು ಉಕ್ರೇನ್‌ ಕನ್ನಡಗರ ರಕ್ಷಣಾ ಕಾರ್ಯಾಚರಣೆಯ ರಾಜ್ಯ ನೋಡಲ್‌ ಮನೋಜ್‌ ರಾಜನ್‌ ಬರಮಾಡಿಕೊಂಡರು.

Ukraine Crisis: ನಮ್ಮ ನಾಗರಿಕರನ್ನೂ ಕರೆತನ್ನಿ, ಭಾರತಕ್ಕೆ ನೇಪಾಳ ಮನವಿ!

ಇದರೊಂದಿಗೆ ಕಳೆದ ಐದು ದಿನಗಳಲ್ಲಿ ಅತಿ ಹೆಚ್ಚು ಕನ್ನಡಿಗರು ಗುರುವಾರ ಆಗಮಿಸಿದಂತಾಗಿದೆ. ಈವರೆಗೂ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ಸಹಾಯವಾಣಿಗೆ 693 ಮಂದಿ ನೋಂದಣಿಯಾಗಿದ್ದು, ಈ ಪೈಕಿ ಕಳೆದ ಐದು ದಿನಗಳಲ್ಲಿ 149 ಮಂದಿ ರಾಜ್ಯಕ್ಕೆ ಮರಳಿದ್ದಾರೆ. 544 ಮಂದಿ ಉಕ್ರೇನ್‌ನಲ್ಲಿ ಉಳಿದಿದ್ದಾರೆ. ಕಳೆದ ಎರಡು ದಿನಗಳಿಂದ ಹೊಸ ನೋಂದಣಿಗಳು ಹೆಚ್ಚಳವಾಗಿಲ್ಲ ಎಂದು ರಾಜ್ಯ ಸರ್ಕಾರದ ಸಹಾಯವಾಣಿ ಸಿಬ್ಬಂದಿ ಮಾಹಿತಿ ನೀಡಿದರು.

ದಿನಾಂಕ - ಆಗಮಿಸಿದ ಕನ್ನಡಿಗರು

ಫೆ.27 - 30
ಫೆ.28 - 7
ಮಾ.1 - 18
ಮಾ.2 - 31
ಮಾ.3 - 63
ಒಟ್ಟು - 149

ಉಕ್ರೇನಿಂದ 3000 ಭಾರತೀಯರು ಒತ್ತೆ, ಪುಟಿನ್‌ ‘ಬಾಂಬ್‌’

ಭಾರತೀಯರನ್ನು ಉಕ್ರೇನ್‌ (Ukraine) ಒತ್ತೆಯಾಗಿರಿಸಿಕೊಂಡಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಆರೋಪ ಮಾಡಿದ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ (Russia President ) ವ್ಲಾದಿಮಿರ್‌ ಪುಟಿನ್‌ (Vladimir Putin) ಕೂಡ ಇಂಥದ್ದೇ ಗಂಭೀರ ಆರೋಪವನ್ನು ಗುರುವಾರ ತಡರಾತ್ರಿ ಮಾಡಿದ್ದಾರೆ. ‘3000 ಭಾರತೀಯರನ್ನು ಉಕ್ರೇನ್‌ ಒತ್ತೆಯಾಳಾಗಿರಿಸಿಕೊಂಡಿದೆ’ ಎಂದು ಅವರು ಬಾಂಬ್‌ ಸಿಡಿಸಿದ್ದಾರೆ.