ರೈತ ವಿರೋಧಿ ನೀತಿಗಳಿಗೆ ಕಾನೂನು ತಿದ್ದುಪಡಿ ಮಾಡುವುದರ ಮೂಲಕ ರೈತರಿಗೆ ಸಾಲ ತೀರಿಸುವ ಅವಕಾಶ ಮಾಡಿಕೊಟ್ಟು, ಮನೆ, ಆಸ್ತಿ-ಪಾಸ್ತಿ ಜಪ್ತಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.24): ರೈತ ವಿರೋಧಿ ನೀತಿಗಳಿಗೆ ಕಾನೂನು ತಿದ್ದುಪಡಿ ಮಾಡುವುದರ ಮೂಲಕ ರೈತರಿಗೆ ಸಾಲ ತೀರಿಸುವ ಅವಕಾಶ ಮಾಡಿಕೊಟ್ಟು, ಮನೆ, ಆಸ್ತಿ-ಪಾಸ್ತಿ ಜಪ್ತಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಶನಿವಾರ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಮೂವತ್ತನೆಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರ ಸಂಕಷ್ಟದ ಸಂದರ್ಭದಲ್ಲಿ ಹಣಕಾಸಿನ ಸಂಸ್ಥೆಗಳಾದ ಬ್ಯಾಂಕುಗಳು ರೈತರ ಮನೆ, ಜಮೀನು, ಆಸ್ತಿಪಾಸ್ತಿ ಜಪ್ತಿ ಮಾಡುವ ಕಾರ್ಯಕ್ಕೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಆಗುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತ ತಕ್ಷಣವೇ ರೂ.14 ಸಾವಿರ ಕೋಟಿ ರೂಪಾಯಿ ಕೇಂದ್ರ ಸರ್ಕಾರದ ನೆರವು ಸಿಗಲಿದೆ. ಈ ಯೋಜನೆ ಪೂರ್ಣಗೊಳ್ಳಲು ದೊಡ್ಡ ಹಣಕಾಸಿನ ಶಕ್ತಿ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯದಲ್ಲಿ 14 ಲಕ್ಷ ರೈತರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳು ಸೇರಿದಂತೆ ದುಡಿಯುವ ವರ್ಗದ ಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆ ವಿಸ್ತರಿಸಲಾಗುವುದು.ಯಾವುದೇ ಕಾರಣಕ್ಕೂ ಹಣಕಾಸಿನ ಅಡಚಣೆಯಿಂದ ದುಡಿವ ವರ್ಗದ ಮಕ್ಕಳ ವಿದ್ಯಾಭ್ಯಾಸ ಮೊಟಕಾಗಬಾರದು ಎಂದರು.
ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ ಅನ್ನದಾಸೋಹ ಹಾಗೂ ಜ್ಞಾನದಾಸೋಹಕ್ಕೆ ಪ್ರಾಮುಖ್ಯತೆ ನೀಡಿದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತೇನೆ. ರಾಜ್ಯಾದ್ಯಂತ ಉತ್ತಮ ಮೆಳೆಯಾಗಿದೆ. ಕೆರೆ ಕಟ್ಟೆ ಜಲಾಶಯಗಳು ತುಂಬಿವೆ. ಕೆಲವು ಭಾಗದಲ್ಲಿ ಅತಿವೃಷ್ಠಿಯಿಂದ ಬೆಳೆ ನಾಶವಾಗಿದೆ. ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ದೇಶಾದ್ಯಂತ ರೈತರು ಕಟ್ಟಿದ 26 ಸಾವಿರ ಕೋಟಿ ಬೆಳೆ ವಿಮೆಗೆ 1ಲಕ್ಷ ಕೋಟಿ ಪರಿಹಾರ ನೀಡಲಾಗಿದೆ. ಸರ್ಕಾರ ನೀರಾವರಿಗೆ ಆದ್ಯತೆ ನೀಡಿದೆ. ಪೂಜ್ಯರ ಅಪೇಕ್ಷೆಯಂತೆ ಭರಮಸಾಗರ ಏತ ನೀರಾವರಿಗೆ 565 ಕೋಟಿ ರೂಪಾಯಿ, ಹಾಗೂ ಜಗಳೂರು ಏತ ನೀರಾವರಿ ಯೋಜನೆಗೆ 725 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರೈತರು ಸ್ವಾಭಿಮಾನದಿಂದ ಬದಕಲು ಅವಕಾಶ ಕಲ್ಲಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೇನೆ. ಹಾಲು ಉತ್ಪಾದಕ ರೈತರಿಗೆ ಹಣಕಾಸಿನ ನೆರವು ನೀಡಲಾಗಿದೆ. ರೈತರ ಜ್ವಲಂತ ಸಮಸ್ಯೆಗಳಿಗೆ ಒಂದು ಕ್ಷಣ ತಡಮಾಡದೆ ಪರಿಹಾರ ಒದಗಿಸಲಾಗಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದ ರೈತ ಸಮುದಾಯಕ್ಕೆ ಸಲವತ್ತು ನೀಡಲಾಗಿದೆ. ಹಿಂದಿನ ಗುರುಗಳು ಶಿಕಾರಿಪುರದ ಶಿವನಪಾದಕ್ಕೆ ದರ್ಶನ ಬರುತ್ತಿದ್ದರು.
ಆಧುನಿಕ ಜಗತ್ತಿನಲ್ಲಿ ಭಾರತ ಮುಂದುವರಿಯಲು ಎಲ್ಲಾ ಜಗದ್ಗುರಗಳು ಬೋಧಿಸಿದ ಸಂಸ್ಕೃತಿ ಕಾರಣ. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳು 1947ರಲ್ಲಿ ಸಿರಿಗೆರೆಯಲ್ಲಿ ಹೈಸ್ಕೂಲ್ ಸ್ಥಾಪನೆ ಮಾಡಿದ್ದಾರೆ. ಭಾವ್ಯಕತೆ ಹಾಗೂ ಮಾನವೀಯತೆ ಭೋಧಿಸಿದ್ದಾರೆ. ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ . ರೈತರು ಸ್ವಾವಲಂಭಿಯಾಗಲು ಅವಕಾಶ ಕಲ್ಪಿಸಿದ್ದಾರೆ. ಶಿಕ್ಷಣ ಹಾಗೂ ಆಶ್ರಯ ನೀಡುವಲ್ಲಿ ಮಠಗಳ ಕೊಡುಗೆ ಅಪಾರ. ಮುಖ್ಯಮಂತ್ರಿಯಾಗಿ ಇದ್ದ ಸಮಯದಲ್ಲಿ ವೀರಶೈವ ಅಭಿವೃದ್ಧಿ ಮಂಡಳಿ ಸ್ಥಾಪಿಸಿ 500 ಕೋಟಿ ಅನುದಾನ ನೀಡಿದ್ದೆ. ಅತಿವೃಷ್ಠಿ ಹಾಗೂ ಕೊವಿಡ್ ನಡುವೆಯು ನೀರಾವರಿ ಯೋಜನೆ ಹಣ ಹಣ ಮೀಸಲಿರಿಸಿದೆ. ಸರ್ಕಾರ ರೈತರ ಸಾಲಕ್ಕೆ ಆಸ್ತಿ ಮನೆಗಳನ್ನು ಜಫ್ತಿಗೆ ನಿಷೇಧಕ್ಕೆ ಕಾನೂನು ತರಲು ಪ್ರಯತ್ನಿಸಲಾಗುವುದು ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಧುಸ್ವಾಮಿ ಮಾತನಾಡಿ, ಧರ್ಮ ಹಾಗೂ ಕರ್ಮ ಸಿದ್ಧಾಂತಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದೆ ಇರುವ ಧರ್ಮ ಬಸವ ಧರ್ಮ. ಕಾಯಕ ನಿಷ್ಠೆಯ ಮೂಲಕ ಶಿವಪಥ ಕಾಣುವಂತೆ ಬೋಧಿಸಲಾಗುತ್ತದೆ. ಜನರು ಸ್ವಾಭಿಮಾನದಿಂದ ಬದುಕಬೇಕು. ಇದಕ್ಕೆ ವಿದ್ಯೆ, ಶಿಕ್ಷಣ ಬೇಕು. ಅರಿವು ಮೂಡಿಸುವ ಗುರು ಬೇಕು. ಈ ರೀತಿ ಅರಿವು ಮೂಡಿಸುವ ಗುರುಗಳಾಗಿದ್ದವರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ. ಸಮಾಜ ಸಮಸ್ಯೆ ಬಗೆಹರಿಸುವಲ್ಲಿ ಹಾಗೂ ಭಕ್ತರ ಅಭಿವೃದ್ಧಿಯಲ್ಲಿ ಸ್ವಾಮೀಜಿಗಳ ಶ್ರಮ ದೊಡ್ಡದು. ರಾಜ್ಯಕ್ಕೆ ವೀರಶೈವ ಮಠಗಳ ಕೊಡುಗೆ ದೊಡ್ಡದು. ರಾಜ್ಯದಲ್ಲಿ ಶೈಕ್ಷಣಿಕ ಪ್ರಗತಿಯಲ್ಲಿ ಮಠಗಳು ಸಾಕಷ್ಟು ಕೆಲಸ ಮಾಡಿವೆ. ಕಡು ಬಡತನದಲ್ಲಿ ಇರುವ ಜನರಿಗೆ ಮಠಗಳು ಸಹಾಯ ನೀಡಿವೆ. ಪ್ರಸ್ತುತ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಿಂದಿನ ಶ್ರೀಗಳ ಹಾದಿಯಲ್ಲಿ ನಡೆದಿದ್ದಾರೆ. ಗ್ರಾಮೀಣ ಜನರ ಬದುಕಿಗೆ ಶಕ್ತಿ ತುಂಬಿದ್ದಾರೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ತಕ್ಷಣ ನೀರಾವರಿಗೆ ಒಂದು ಲಕ್ಷ ಕೋಟಿ ಅನುದಾನ ಮೀಸಲಿಡುವ ಸಂಕಲ್ಪ ಮಾಡಿದ್ದರು. ಅತಿವೃಷ್ಠಿ ಹಾಗೂ ಕೋವಿಡ್‌ನಿಂದ ಹಣಕಾಸು ಸ್ಥಿತಿ ಬಿಗಡಾಯಿಸಿತು. ಆದರೂ ಸಣ್ಣ ನೀರಾವರಿ ಇಲಾಖೆಗೆ ಕೋಟ್ಯಾಂತರ ರೂಪಾಯಿ ಹಣ ನೀಡಿದರು. ಕೋವಿಡ್ ಸಂದರ್ಭದಲ್ಲಿ ಸರ್ಕಾರವನ್ನು ಯಶಸ್ವಿಯಾಗಿ ಬಸವರಾಜ ಬೊಮ್ಮಾಯಿ ನೀಡಸಿದ್ದಾರೆ. ಸರ್ಕಾರ ಜಲಜೀವನ್ ಮಿಷನ್ 9 ಸಾವಿರ ಕೋಟಿ ಹಣ ನೀಡಲಾಗಿದೆ. ಮನೆ ಮನೆಗಳಿಗೆ ನಳದ ಸಂಪರ್ಕ ಕಲ್ಲಿಸಲಾಗುವುದು. ಸರ್ಕಾರಕ್ಕೆ ಮಠಗಳ ಸಹಕಾರ ಇರಬೇಕು. ಸ್ವಾಮೀಜಿಯವರ ಲೇಖನ ಸಂಗ್ರಹ ಭ್ರಷ್ಟಾಚಾರ ಮೊದಲ ಹೆಜ್ಜೆ ಕೃತಿ ಬಿಡುಗಡೆ ಮಾಡಿದ್ದೇನೆ. ಭ್ರಷ್ಟಾಚಾರದ ಮೂಲ ನಮ್ಮೆಲ್ಲರ ಆಲೋಚನೆಯಲ್ಲಿದೆ. ವ್ಯವಸ್ಥೆ ರಾಜಕಾರಣಿಗಳನ್ನು ಭ್ರಷ್ಟರನ್ನಾಗಿ ಮಾಡುತ್ತದೆ. ಜನರು ಮನಸ್ಸು ಮಾಡಿದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದರು.
