ಅಪಾಯಕಾರಿ ಕೆರೆಗಳ ಸಮೀಕ್ಷೆಗೆ ಸಿಎಂ ಬೊಮ್ಮಾಯಿ ಆದೇಶ
ದೊಡ್ಡ ಕೆರೆಗಳಿರುವ ಭಾಗದಲ್ಲಿ ಜಾಗೃತರಾಗಿದ್ದು, ಸಾವು-ನೋವು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು(ಆ.29): ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆಗಳು ಒಡೆಯದಂತೆ, ಏರಿ ಬಿರುಕು ಬಿಡದಂತೆ ಎಚ್ಚರಿಕೆ ವಹಿಸಬೇಕು. ಕೆರೆಗಳ ಸಮೀಕ್ಷೆ ನಡೆಸಿ ಅಗತ್ಯವಿರುವ ಕಡೆ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಾನುವಾರ ತಮ್ಮ ಗೃಹ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಯಿಂದ ಹಾನಿಗೊಳಗಾದ 15 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು, ಮಳೆಯಿಂದ ಉಂಟಾದ ಹಾನಿಯ ಮಾಹಿತಿ ಪಡೆದರು.
ಕೆಲವೆಡೆ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಒಳ ಹರಿವು ಹೆಚ್ಚಾಗಿರುವುದರಿಂದ ಕೆರೆಗಳು ಒಡೆಯದಂತೆ ಹಾಗೂ ಏರಿ ಬಿರುಕು ಬಿಡದಂತೆ ಎಚ್ಚರಿಕೆ ವಹಿಸಬೇಕು. ದೊಡ್ಡ ಕೆರೆಗಳಿರುವ ಭಾಗದಲ್ಲಿ ಜಾಗೃತರಾಗಿದ್ದು, ಸಾವು-ನೋವು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಗುಳೆ ತಡೆಗೆ ಕಲ್ಯಾಣ ಕರ್ನಾಟಕಕ್ಕೆ ಸ್ಕೀಂ: ಸಿಎಂ
ಬೆಳೆ ಹಾನಿ ಮಾಹಿತಿ ಸಂಗ್ರಹಿಸಿ:
ಭಾರೀ ಮಳೆಯಿಂದ ಮನೆಗಳಿಗೆ ಹಾನಿ ಉಂಟಾಗಿದ್ದರೆ ತಕ್ಷಣ ಪರಿಹಾರ ನೀಡಬೇಕು. ಬೆಳೆ ಹಾನಿ ಬಗ್ಗೆ ನಿಖರ ಮಾಹಿತಿ ಪಡೆದು ಶೀಘ್ರ ಪರಿಹಾರ ವಿತರಿಸಬೇಕು. ಮಳೆಯಿಂದಾಗಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಇರುವವರಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಬಂಧುಗಳ ಮನೆಗೆ ತೆರಳಿರುವವರಿಗೆ ಆಹಾರ ಕಿಟ್‌ಗಳನ್ನು ತಲುಪಿಸಬೇಕು ಎಂದು ಹೇಳಿದರು.
ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಮೇಶ್ ಕತ್ತಿ ಅವರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಂಟಾಗಿರುವ ಮಳೆ ಹಾನಿಯ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ಕೊಡುತ್ತಾ? ಸಿಎಂ ಹೇಳಿದ್ದೇನು?
ಪರ್ಯಾಯ ಮಾರ್ಗ ಕಲ್ಪಿಸಿ
ಮೈಸೂರು ಹೆದ್ದಾರಿಯಲ್ಲಿ ಮಳೆಯಿಂದಾಗಿ ನೀರು ನಿಂತಿದ್ದು ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತಕ್ಷಣ ಅವಕಾಶ ಮಾಡುವಂತೆ ಮೈಸೂರು, ರಾಮನಗರ ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದರು.
ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಿಂದ ರಸ್ತೆ, ಸೇತುವೆಗೆ ಹಾನಿಯಾಗಿ ವಾಹನಗಳ ಸುಗಮ ಸಂಚಾರ ಸಾಧ್ಯವಿಲ್ಲದಿದ್ದರೆ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ವ್ಯವಸ್ಥೆ ಕಲ್ಪಿಸಬೇಕು. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಶೀಘ್ರ ರಸ್ತೆ, ಸೇತುವೆ ದುರಸ್ತಿ ಮಾಡಿಸಬೇಕು ಎಂದು ತಿಳಿಸಿದರು.
ಬೊಮ್ಮಾಯಿ ಅಪ್ಪಣೆ
- ಕೆರೆಗಳು ಒಡೆಯದಂತೆ, ಏರಿ ಬಿರುಕು ಬಿಡದಂತೆ ಎಚ್ಚರಿಕೆ ವಹಿಸಿ
- ರಾಜ್ಯಾದ್ಯಂತ ಕೆರೆ ಸಮೀಕ್ಷೆ ಮಾಡಿ ಅಗತ್ಯವಿರುವೆಡೆ ತಕ್ಷಣ ದುರಸ್ತಿ ನಡೆಸಿ
- ಮಳೆಯಿಂದ ಮನೆಗಳಿಗೆ ಹಾನಿಯಾಗಿದ್ದರೆ ತಕ್ಷಣ ಪರಿಹಾರದ ಹಣ ನೀಡಿ
- ಬೆಳೆ ಹಾನಿ ಬಗ್ಗೆ ನಿಖರ ಮಾಹಿತಿ ಪಡೆದು ತಕ್ಷಣ ಪರಿಹಾರ ವಿತರಿಸಿ
- ಕಾಳಜಿ ಕೇಂದ್ರಗಳಲ್ಲಿ ಇರುವವರಿಗೆ ಗುಣಮಟ್ಟದ ಆಹಾರ ನೀಡಿ
- ಬಂಧುಗಳ ಮನೆಗೆ ಹೋದ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ನೀಡಿ
- ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ ರಿಪೇರಿ ಮಾಡಿಸಿ