ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ಕೊಡುತ್ತಾ? ಸಿಎಂ ಹೇಳಿದ್ದೇನು?
ಗಣೇಶೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಿಸುವ ಸಂಬಂಧ ಕರ್ನಾಟಕ ಹೈಕೋರ್ಟ್ ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಈ ಹಿನ್ನಲೆಯಲ್ಲಿ ವಿರೋಧದ ನಡುವೆಯೂ ಸರ್ಕಾರ ಗಣೇಶೋತ್ಸವಕ್ಕೆ ಅವಕಾಶ ನೀಡುತ್ತಾ? ಈ ಬಗ್ಗೆ ಸಿಎಂ ಹೇಳಿದ್ದೇನು?
ಬೆಂಗಳೂರು, (ಆಗಸ್ಟ್.26): ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್, ಸರ್ಕಾರದ ವಿವೇಚನೆಗೆ ಬಿಟ್ಟಿದೆ.
ಈದ್ಗಾ ಮೈದಾನದಲ್ಲಿ ಬಕ್ರೀದ್ ಮತ್ತು ರಂಜಾನ್ ಆಚರಣೆ ಹೊರತುಪಡಿಸಿ ಬೇರೆ ದಿನಗಳಲ್ಲಿ ಪ್ರಾರ್ಥನೆಗೆ ಮುಸಲ್ಮಾನ ಸಮುದಾಯ ಬಳಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಇನ್ನು ಮುಖ್ಯವಾಗಿ ಗಣೇಶೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಿಸುವ ಸಂಬಂಧವೂ ವಿಚಾರಣೆ ನಡೆಸಿದ ನ್ಯಾಯಾಲಯ, ಆಚರಣೆಗೆ ಅನುಮತಿ ನೀಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಗಣೇಶೋತ್ಸವದ ಚೆಂಡು ಇದೀಗ ಸರ್ಕಾರದ ಅಂಗಳದಲ್ಲಿದೆ.
ಬಕ್ರೀದ್, ರಂಜಾನ್ ಬಿಟ್ಟು ಬೇರೆದಿನ ಆಚರಣೆಯಿಲ್ಲ: ಈದ್ಗಾ ಮೈದಾನ ಸಂಬಂಧ ಕೋರ್ಟ್ ಆದೇಶ
ಬೊಮ್ಮಾಯಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ (High Court) ಆದೇಶ ಪಾಲಿಸುವ ಬಗ್ಗೆ ಸಭೆ ನಡೆಸಲಾಗುವುದು. ಚಾಮರಾಜಪೇಟೆಯ ಸರ್ವೆ ನಂಬರ್ 40 ರ ಬಗ್ಗೆ ಸರ್ಕಾರ ಸೂಕ್ತ ನಿರ್ಣಾಯ ಮಾಡಬೇಕು. ದೇಶ ಸರ್ವ ಧರ್ಮಿರ ಇರುವ ನಾಡು, ಎಲ್ಲವೂ ವಿಶ್ಲೇಷಣೆ ಆಗಿದೆ ಎಂದರು.
ಕೋರ್ಟ್ ಆದೇಶದ ಒಂದು ಲೇಟರನ್ ಸ್ಪ್ರೀಟ್ ಎಂದು ಕರೆಯುತ್ತೇವೆ. ಸಂಪೂರ್ಣವಾಗಿ ಆದೇಶ ಪರಿಪಾಲನೆ ಹೇಗೆ ಮಾಡಬೇಕು ಎಂದು ಸಭೆ ಮಾಡುತ್ತೇವೆ. ಅಡ್ವೆಕೇಟ್ ಜನರಲ್, ಕಂದಾಯ ಸಚಿವರು, ಕುಳಿತು ಮುಂದೆ ಯಾವ ರೀತಿ ಮಾಡಬೇಕು ಸಭೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶಾಂತಿ ರೀತಿಯಲ್ಲಿ ಎಲ್ಲರ ಮನದಾಳದ ಇಚ್ಚೆಗಳನ್ನು ಈಡೇರಿಸುವ ಕೆಲಸ ಆಗಬೇಕಿದೆ. ಅದನ್ನು ನಾವು ಮಾಡುತ್ತೇವೆ. ಆದೇಶ ಸಂಪೂರ್ಣ ನೋಡಿ, ಸಭೆ ಮಾಡಿ, ಅದರ ಅನುಗುಣವಾಗಿ ತೀರ್ಮಾನ ಮಾಡುತ್ತೇವೆ. ಹುಬ್ಬಳ್ಳಿ ಈದ್ಗಾ ಮೈದಾನದ ಕುರಿತು ಮಹಾನಗರಪಾಲಿಕೆಯವರು ಸರ್ವ ಪಕ್ಷದ ಕಮಿಟಿ ಮಾಡಿದ್ದಾರೆ. ಆ 29 ರಂದು ನಿರ್ಧಾರ ತಿಳಿಸುತ್ತಾರೆ ಎಂದು ಮಾಹಿತಿ ನೀಡಿದರು.
ಟೈಟಲ್ ದೃಷ್ಟಿಯಿಂದ ಆ ವಿಚಾರ ಬೇರೆ, ಈ ವಿಚಾರ ಬೇರೆ. ಇಲ್ಲಿ ಕೋರ್ಟ್ ಆಜ್ಞೆ ಇದೆ, ಅಲ್ಲಿ ಸುಪ್ರೀಂ ಕೋರ್ಟ್ ಆಜ್ಞೆ ಇದೆ. ಎಲ್ಲವೂ ಗಮನಿಸಿ ಕಾನೂನು, ಕೋರ್ಟ್ ಆದೇಶ ಪರಿಪಾಲನೆ ಮಾಡುತ್ತೇವೆ ಎಂದು ಹೇಳಿದರು.