ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ‘ಜನೋತ್ಸವ’ ಹೆಸರಿನ ಬೃಹತ್‌ ಸಮಾವೇಶ 

ಬೆಂಗಳೂರು(ಜು.27): ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 1 ವರ್ಷ ಮತ್ತು ಬಿಜೆಪಿ ಸರ್ಕಾರ 3 ವರ್ಷ ಪೂರೈಸಲಿದ್ದು, ಸಂಭ್ರಮಾಚರಣೆ ಸಂಬಂಧ 2 ಸಮಾರಂಭಗಳನ್ನು ಆಯೋಜಿಸಲಾಗಿದೆ. ಒಂದು ಸರ್ಕಾರದ ವತಿಯಿಂದ. ಮತ್ತೊಂದು ಪಕ್ಷದ ವತಿಯಿಂದ. ಸರ್ಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದರೆ, ಪಕ್ಷದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ‘ಜನೋತ್ಸವ’ ಹೆಸರಿನ ಬೃಹತ್‌ ಸಮಾವೇಶ ನಡೆಯಲಿದೆ.

ಸರ್ಕಾರದಿಂದ ವಿಧಾನಸೌಧದಲ್ಲಿ..

ಅಂದು ಮೊದಲಿಗೆ ಸರ್ಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸಾಧನೆಯ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಿ ಸುಮಾರು 5-6 ಹೊಸ ಯೋಜನೆಗಳನ್ನು ನಾಡಿನ ಜನರಿಗೆ ಕೊಡುಗೆ ರೂಪದಲ್ಲಿ ಘೋಷಿಸುವ ಸಿದ್ಧತೆ ನಡೆದಿದೆ. ಇದು ಚುನಾವಣಾ ವರ್ಷವಾಗಿದ್ದರಿಂದ ಹೊಸ ಯೋಜನೆಗಳನ್ನು ನೀಡುವ ಮೂಲಕ ಜನರ ಒಲವು ಗಳಿಸುವ ಪ್ರಯತ್ನ ನಡೆಯಲಿದೆ. ಇಲ್ಲದಿದ್ದರೆ ಕಳೆದ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಲೋಕಾರ್ಪಣೆ ಮಾಡುವ ಸಂಭವವಿದೆ ಎಂದು ತಿಳಿದು ಬಂದಿದೆ.

ಸಿಎಂ ಬೊಮ್ಮಾಯಿ ವರ್ಷಾಚರಣೆ ಬಳಿಕ ಸಚಿವ ಸಂಪುಟ ವಿಸ್ತರಣೆ?

ಅಲ್ಲದೆ, ಅದೇ ಕಾರ್ಯಕ್ರಮದಲ್ಲಿ ‘ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ; ಇದು ನಮ್ಮ ಸಂಕಲ್ಪ’ ಎಂಬ ಶೀರ್ಷಿಕೆಯಡಿ ಸರ್ಕಾರದ 1 ವರ್ಷದ ಸಾಧನೆಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಕಳೆದ ಒಂದು ವರ್ಷದಿಂದ ವಿವಿಧ ಸಭೆ ಸಮಾರಂಭಗಳಲ್ಲಿ ಮಾಡಿದ ಪ್ರಮುಖ ಭಾಷಣದ ಆಯ್ದ ಭಾಗಗಳನ್ನು ಒಳಗೊಂಡ ಹೊತ್ತಿಗೆಯನ್ನೂ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಸಂಪುಟದ ಎಲ್ಲ ಸಚಿವರೂ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೊಡ್ಡಬಳ್ಳಾಪುರದಲ್ಲಿ ಜನೋತ್ಸವ:

ವಿಧಾನಸೌಧದ ಈ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಸಂಪುಟ ಸಚಿವರು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ‘ಜನೋತ್ಸವ’ ಸಮಾವೇಶಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಆಗಮಿಸುತ್ತಿದ್ದಾರೆ. ಜತೆಗೆ ಕೇಂದ್ರದ ಹಲವು ಸಚಿವರೂ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು ಒಂದು ಲಕ್ಷ ಜನರನ್ನು ಈ ಸಮಾವೇಶಕ್ಕೆ ಸೇರುವ ನಿರೀಕ್ಷೆಯಿದ್ದು, ಈ ಸಂಬಂಧ ಕಳೆದ ಹಲವು ದಿನಗಳಿಂದ ರಾಜ್ಯ ಬಿಜೆಪಿ ನಾಯಕರು ಸತತ ಸಿದ್ಧತೆಯಲ್ಲಿ ತೊಡಗಿದ್ದಾರೆ.