ಸಿಎಂ ಬೊಮ್ಮಾಯಿ ವರ್ಷಾಚರಣೆ ಬಳಿಕ ಸಚಿವ ಸಂಪುಟ ವಿಸ್ತರಣೆ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮೊದಲ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಸಂಪುಟ ವಿಸ್ತರಣೆಯ ಸುದ್ದಿ ಮತ್ತೆ ಜೀವಂತಿಕೆ ಬಂದಿದೆ. ಆರೋಪಗಳಿಂದ ಮುಕ್ತಿ ಪಡೆದಿರುವ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಜು.26): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮೊದಲ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಸಂಪುಟ ವಿಸ್ತರಣೆಯ ಸುದ್ದಿ ಮತ್ತೆ ಜೀವಂತಿಕೆ ಬಂದಿದೆ. ಆರೋಪಗಳಿಂದ ಮುಕ್ತಿ ಪಡೆದಿರುವ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಇದೇ ತಿಂಗಳ 28ಕ್ಕೆ ಒಂದು ವರ್ಷ ಪೂರ್ಣವಾಗುತ್ತಿದ್ದು, ಆ ಬಳಿಕ ಪಕ್ಷದ ವರಿಷ್ಠರ ಸೂಚನೆ ಆಧರಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈಗಿರುವ ಸನ್ನಿವೇಶದಲ್ಲಿ ಸಂಪುಟ ಪುನಾರಚನೆ ಕೈಗೆತ್ತಿಕೊಳ್ಳುವ ಸಾಧ್ಯತೆ ಕ್ಷೀಣಿಸಿರುವುದರಿಂದ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾತ್ರ ಮಾಡಬಹುದು ಎನ್ನಲಾಗುತ್ತಿದೆ.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಒಡೆಯರ್ ಹೆಸರು
5 ಖಾಲಿ ಸ್ಥಾನಕ್ಕೆ ಇವರ ‘ಟವಲ್’: ಸದ್ಯ ಸಂಪುಟದಲ್ಲಿ ಐದು ಸ್ಥಾನಗಳು ತೆರವಾಗಿವೆ. ಈ ಪೈಕಿ ನಾಲ್ಕು ಮಾತ್ರ ಭರ್ತಿ ಮಾಡಿ ಒಂದನ್ನು ಖಾಲಿ ಉಳಿಸಿಕೊಳ್ಳಬಹುದು. ಪ್ರತಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಅಹಿಂದ ಮಂತ್ರ ಜಪಿಸುತ್ತಿರುವುದರಿಂದ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಮೇಲಿದ್ದ ಆರೋಪಗಳಿಂದ ಮುಕ್ತಿ ಪಡೆದಿರುವ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಂಪುಟ ಸೇರ್ಪಡೆ ಆಗಬಹುದು ಎನ್ನಲಾಗುತ್ತಿದೆ.
ಇದೇ ವೇಳೆ ಹಳೆ ಮೈಸೂರು ಭಾಗದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಒಕ್ಕಲಿಗ ಸಮುದಾಯದ ಸಿ.ಪಿ.ಯೋಗೇಶ್ವರ್ ಅವರಿಗೆ ಅವಕಾಶ ಕಲ್ಪಿಸುವ ಚರ್ಚೆ ನಡೆದಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಇನ್ನಷ್ಟುಬಲಗೊಳಿಸಬೇಕು ಎಂಬ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ದತ್ತಾತ್ರೇಯ ಪಾಟೀಲ್ ರೇವೂರು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪವಿದೆ ಎನ್ನಲಾಗಿದೆ.
ಸಚಿವ ಸ್ಥಾನದ ಸಂಭಾವ್ಯರು
1.ಕೆ.ಎಸ್.ಈಶ್ವರಪ್ಪ
2.ರಮೇಶ್ ಜಾರಕಿಹೊಳಿ
3.ಸಿ.ಪಿ.ಯೋಗೇಶ್ವರ್
4.ದತ್ತಾತ್ರೇಯ ಪಾಟೀಲ್ ರೇವೂರು
ಸಂಪುಟ ವಿಸ್ತರಣೆಗಾಗಿ ಸಿಎಂ ದೆಹಲಿಗೆ ಹೋಗಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ತೆರಳಿಲ್ಲ. ರಾಷ್ಟ್ರಪತಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತೆರಳಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ತೆರಳಿದ ಸಮಯದಲ್ಲಿ ಪಕ್ಷದ ನಾಯಕರನ್ನು ಭೇಟಿ ಆಗುವುದು ಸಹಜ. ಆದರೆ ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಾಯಕರು ಹೇಳಿದಾಗ ಸಂಪುಟ ವಿಸ್ತರಣೆ ಆಗುತ್ತದೆ ಎಂದರು. ಕೆಆರ್‌ಎಸ್ ಬಳಿ ಪರೀಕ್ಷಾರ್ಥ ಸ್ಫೋಟ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಂತಿದೆ.
ಸದ್ಯ ಅಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ತಜ್ಞರಿಂದ ಪರಿಶೀಲನೆ ನಡೆಸಲಾಗುವುದು. ಅವರು ಸಮಗ್ರ ವರದಿ ನೀಡಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ಆರ್‌ಎಸ್‌ಎಸ್ ಬಗ್ಗೆ ಚಿಂತಕ ಭಗವಾನ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇನ್ನೊಂದರ ಬೆಳವಣಿಗೆ ಸಹಿಲಾಗದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದು ಅವರ ವ್ಯಕ್ತಿತ್ವ, ಅವರ ವಿಚಾರ ಮಟ್ಟತಿಳಿಸುತ್ತದೆ. ಹೀಗಾಗಿ ಅವರ ಮಾತಿಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಹೇಳಿದರು. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡುತ್ತಿದ್ದಾರೆ.
ದೇವಾಲಯಗಳಿಗೆ ಭರ್ಜರಿ 116 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ
ಇದು ಜನರಿಗೆ ಒಳ್ಳೆಯದನ್ನು ಮಾಡುವ ಕಾರ್ಯವಾಗಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿರುವ ಉತ್ಸವವಾಗಿದೆ ಎಂದು ಟೀಕಿಸಿದರು. ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಆತಂಕದಲ್ಲಿದ್ದು ಭೂಮಿ ನೀಡಲು ನಿರಾಕರಿಸುತ್ತಿದ್ದಾರೆ ಎಂಬ ಸಂಗತಿ ತಮಗೂ ತಿಳಿದಿದ್ದು ಈ ಬಗ್ಗೆ ರೈತರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.