ದೇವಾಲಯಗಳಿಗೆ ಭರ್ಜರಿ 116 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ
ವಿವಿಧ ಶಾಸಕರು, ಸಚಿವರ ಮನವಿಯಂತೆ ರಾಜ್ಯದ ವಿವಿಧ ದೇವಾಲಯಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಧಾರ್ಮಿಕ ದತ್ತಿ ಇಲಾಖೆಗೆ 116 ಕೋಟಿ ರು. ಬಿಡುಗಡೆಗೊಳಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು (ಜು.23): ವಿವಿಧ ಶಾಸಕರು, ಸಚಿವರ ಮನವಿಯಂತೆ ರಾಜ್ಯದ ವಿವಿಧ ದೇವಾಲಯಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಧಾರ್ಮಿಕ ದತ್ತಿ ಇಲಾಖೆಗೆ 116 ಕೋಟಿ ರು. ಬಿಡುಗಡೆಗೊಳಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಕ್ಷಾತೀತವಾಗಿ ವಿವಿಧ ಶಾಸಕರು ಹಾಗೂ ಸಚಿವರು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ದೇವಾಲಯಗಳ ಕಾಮಗಾರಿಗಳಿಗೆ ಹಣಕಾಸು ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದರು. 105 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು, ಇವುಗಳಿಗೆ ಮೊದಲ ಹಂತದಲ್ಲಿ 116 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಆರ್ಥಿಕ ಇಲಾಖೆ ಆದೇಶ ಮಾಡಿದೆ.
ಈ ಪೈಕಿ ಹಾವೇರಿಯ ನೆಹರೂ ಓಲೆಕಾರ್ ಕ್ಷೇತ್ರಕ್ಕೆ 5 ಕೋಟಿ ರು., ಗೋವಿಂದ ಕಾರಜೋಳ ಅವರ ಮುಧೋಳ ಕ್ಷೇತ್ರಕ್ಕೆ 4 ಕೋಟಿ ರು., ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ (ನಿಪ್ಪಾಣಿ) ಕ್ಷೇತ್ರಕ್ಕೆ 3 ಕೋಟಿ ರು., ವೇದವ್ಯಾಸ ಕಾಮತ್ ಅವರ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ 3 ಕೋಟಿ ರು., ರೂಪಾಲಿ ನಾಯಕ್ ಅವರ ಕಾರವಾರ ಕ್ಷೇತ್ರಕ್ಕೆ 2 ಕೋಟಿ ರು., ಲಕ್ಷ್ಮೇ ಹೆಬ್ಬಾಳ್ಕರ್ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ 1.58 ಕೋಟಿ ರು., ಶಹಾಪುರ ಕ್ಷೇತ್ರಕ್ಕೆ 1.5 ಕೋಟಿ ರು., ಬಿ.ಸಿ. ನಾಗೇಶ್ ಕ್ಷೇತ್ರಕ್ಕೆ 1.18 ಕೋಟಿ ರು. ಬಿಡುಗಡೆ ಮಾಡಲಾಗಿದೆ.
ನನ್ನ ಮೇಲೆ ಸಿಟ್ಟಾಗಲು ಸಿಎಂಗೆ ಹಕ್ಕಿದೆ: ಪ್ರತಾಪ ಸಿಂಹ
ಉಳಿದಂತೆ 93 ವಿಧಾನಸಭಾ ಕ್ಷೇತ್ರಗಳಿಗೆ ತಲಾ 1 ಕೋಟಿ ರು. ಅನುದಾನ ನೀಡಿದ್ದು, ಕಾಂಗ್ರೆಸ್ ಶಾಸಕರ ಎರಡು ಕ್ಷೇತ್ರಗಳಿಗೆ ಮಾತ್ರ ಕಡಿಮೆ ಅನುದಾನ ನೀಡಲಾಗಿದೆ. ಈ ಪೈಕಿ ಕಾಂಗ್ರೆಸ್‌ನ ಬಸನಗೌಡ ತುರವಿಹಾಳ್ (ಮಸ್ಕಿ) ಕ್ಷೇತ್ರಕ್ಕೆ 50 ಲಕ್ಷ ರು. ಹಾಗೂ ಮಹಾಂತೇಶ್ ಕೌಜಲಗಿ ಅವರ ಬೈಲಹೊಂಗಲ ಕ್ಷೇತ್ರಕ್ಕೆ 37.50 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಸ್ತೂರಿ ರಂಗನ್ ವರದಿ ವಿರುದ್ಧ ಕೇಂದ್ರಕ್ಕೆ ಮೊರೆ: ವಿವಾದಾತ್ಮಕ ಕಸ್ತೂರಿ ರಂಗನ್ ವರದಿಯನ್ವಯ ಪಶ್ಚಿಮಘಟ್ಟಪ್ರದೇಶವನ್ನು ಪರಿಸರ ಸೂಕ್ಷ್ಮವಲಯವನ್ನಾಗಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ವರದಿಯನ್ನು ತಿರಸ್ಕಾರ ಮಾಡುವ ನಿಲುವಿನ ಬಗ್ಗೆ ಕೇಂದ್ರಕ್ಕೆ ತಿಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದಿಲ್ಲಿ ಭೇಟಿ ಬಳಿಕ ನಿಗಮ, ಮಂಡಳಿ ನೇಮಕ: ಸಿಎಂ ಬೊಮ್ಮಾಯಿ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರ್ಕಾರವು ವಿರೋಧ ಮಾಡಿಕೊಂಡು ಬಂದಿದೆ. ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ವರದಿಯನ್ನು ತಿರಸ್ಕಾರ ಮಾಡಿದ್ದೇವೆ. ಈಗ ಪರಿಸರ ಇಲಾಖೆಯಿಂದ ಅಧಿಸೂಚನೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೂ ಮನವರಿಕೆ ಮಾಡಿಕೊಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು. ವರದಿಯಿಂದ ಪಶ್ಚಿಮಘಟ್ಟದ ಜನತೆಗೆ ಇದರಿಂದ ಅನ್ಯಾಯವಾಗಲಿದೆ. ಈಗಾಗಲೇ ಎರಡು ಬಾರಿ ಸರ್ಕಾರ ಆಕ್ಷೇಪಣೆ ಸಲ್ಲಿಸಲಾಗಿದೆ. ಅರಣ್ಯ ಪ್ರದೇಶದಲ್ಲಿರುವ ಜನರು ಮತ್ತು ಜನವಸತಿ ಪ್ರದೇಶಗಳನ್ನು ಎತ್ತಂಗಡಿ ಮಾಡುವುದು ಸರಿಯಲ್ಲ. ಕೇಂದ್ರಕ್ಕೆ ಸಮಗ್ರವಾಗಿ ಮಾಹಿತಿ ನೀಡಲಾಗುವುದು ಎಂದರು.