Asianet Suvarna News Asianet Suvarna News

Local Body Election ಸ್ಥಳೀಯ ಸಂಸ್ಥೆಗಳ ಚುನಾವಣೆ, ಪುನರ್‌ ಪರಿಶೀಲನೆ ಅರ್ಜಿ ಸಲ್ಲಿಕೆ ಕುರಿತು ಸಿಎಂಗೆ ಎಜಿ ವರದಿ!

- ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸಬೇಕೋ, ಬೇಡವೋ ಎಂದು ತೀರ್ಮಾನ
- ಸಿಎಂ ಬೊಮ್ಮಾಯಿಗೆ ವರದಿ ಸಲ್ಲಿಸಲಿದ್ದಾರೆ ಅಡ್ವೋಕೇಟ್‌ ಜನರಲ್‌ 
- ರಾಜ್ಯ ಚುನಾವಣಾ ಆಯೋಗದೊಂದಿಗೂ ಸಮಾಲೋಚನೆ

CM Basavaraj Bommai awaits clarity on local body elections from advocate general after Supreme Court oder ckm
Author
Bengaluru, First Published May 12, 2022, 4:55 AM IST | Last Updated May 12, 2022, 4:55 AM IST

ಬೆಂಗಳೂರು(ಮೇ.12): ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಕುರಿತು ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಆಧರಿಸಿ ಪುನರ್‌ ಪರಿಶೀಲನೆ ಅರ್ಜಿ ಸಲ್ಲಿಸಬೇಕೋ ಬೇಡವೋ ಎಂದು ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಪಿನ ಬಗ್ಗೆ ಅಧ್ಯಯನ ಮಾಡಲು ಅಡ್ವೋಕೇಟ್‌ ಜನರಲ್‌ ಅವರಿಗೆ ಹೇಳಿದ್ದೇನೆ. ಗುರುವಾರ ಅವರು ಸರ್ಕಾರಕ್ಕೆ ವಿವರ ನೀಡಲಿದ್ದಾರೆ. ಸಂಬಂಧಪಟ್ಟಕಾನೂನು ತಜ್ಞರ ಜತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದೊಂದಿಗೂ ಸಮಾಲೋಚನೆ ನಡೆಸಲಾಗುವುದು ಎಂದರು.

ಸ್ಥಳೀಯ ಚುನಾವಣೆ ಮೇಲೆ ಸಂಪುಟ ಪುನಾರಚನೆ ಭವಿಷ್ಯ!

ಹಿಂದೆ ನ್ಯಾಯಾಲಯದ ಆದೇಶ ಬಂದಾಗ ಸರ್ವ ಪಕ್ಷಗಳ ಸಭೆ ಮಾಡಿದ್ದೇವೆ. ಹೊಸದಾಗಿ ಆಯೋಗ ಮಾಡುವ ಬಗ್ಗೆ ತೀರ್ಮಾನವಾಗಿತ್ತು. ಹಿಂದುಳಿದ ವರ್ಗದವರ ಬಗ್ಗೆ ನಮ್ಮ ಸರಕಾರಕ್ಕೆ ಬದ್ಧತೆ ಇದೆ. ಈಗ ಹೊರಬಿದ್ದಿರುವ ತೀರ್ಪಿನ ಕುರಿತು ತಾಂತ್ರಿಕ ಗೊಂದಲವಿದೆ. ಮಧ್ಯಪ್ರದೇಶ ಸರ್ಕಾರ ಸಲ್ಲಿಸಿರುವ ಪುನರ್‌ಪರಿಶೀಲನಾ ಅರ್ಜಿ ಏನಾಗುತ್ತದೆ ಎಂಬುದನ್ನೂ ನೋಡಬೇಕು ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತೀರ್ಪಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬಳಿಯೂ ನಾನು ಮಾತನಾಡಿದ್ದೇನೆ. ಹಿಂದುಳಿದ ವರ್ಗದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ನಮ್ಮ ಪಕ್ಷ ಸಿದ್ಧವಿದೆ. ಸಾಮಾಜಿಕ ಸಮಾನತೆ ತರುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಹೆಚ್ಚಿಸಲು, ಆದರಲ್ಲೂ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಆಡಳಿತ ನೀಡಲು ಹಿಂದುಳಿದ ವರ್ಗಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.

ಸುಪ್ರೀಂ ತಡೆ ತೆರವು ಕೋರಿ ಸರ್ಕಾರಕ್ಕೆ ಆಯೋಗ ಪತ್ರ
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಚ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂಕೋರ್ಚ್‌ ನೀಡಿರುವ ತಡೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಪತ್ರ ಬರೆದಿದೆ. ಸುಪ್ರೀಂಕೋರ್ಚ್‌ ತೀರ್ಪಿನ ಬಗ್ಗೆ ವಕೀಲರ ಜೊತೆ ಬುಧವಾರ ಸಭೆ ನಡೆಸಿದ ನಂತರ ಆಯೋಗ ಈ ಪತ್ರ ಬರೆದಿದೆ.

ರಾಜಕೀಯದಿಂದ ದೂರ ಉಳಿದಿದ್ದ ರಮ್ಯಾ ಮತ್ತೆ ಆ್ಯಕ್ಟೀವ್, ಡಿಕೆಶಿ ವಿರುದ್ಧವೇ ಅಸಮಾಧಾನ!

ಸುಪ್ರೀಂ ಆದೇಶ ಪಾಲಿಸಿದರೆ ಸಾಮಾಜಿಕ ನ್ಯಾಯಾಕ್ಕೆ ಗಂಡಾಂತರ-ಸಿದ್ದು
ಸುಪ್ರೀಂ ಕೋರ್ಚ್‌ ಆದೇಶದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಸಾಮಾಜಿಕ ನ್ಯಾಯಕ್ಕೆ ಗಂಡಾಂತರ ಉಂಟಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು. ಚರ್ಚಿಸಲು ತಕ್ಷಣ ಸರ್ವಪಕ್ಷ ಸಭೆ ಕರೆಯಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯ ವಿವಾದ ಇತ್ಯರ್ಥಕ್ಕೆ ಕಾಯದೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ ಎಂದು ನ್ಯಾಯಾಲಯ ಆದೇಶಿಸಿದೆ. ಈ ತೀರ್ಪು ರಾಜ್ಯಕ್ಕೂ ಅನ್ವಯವಾಗಲಿದ್ದು ಸಾಮಾಜಿಕ ನ್ಯಾಯಕ್ಕೆ ಗಂಡಾಂತರ ಎದುರಾಗಲಿದೆ. ಹಿಂದುಳಿದ ಜಾತಿಗಳು ರಾಜಕೀಯ ಪ್ರಾತಿನಿಧ್ಯದಿಂದ ವಂಂಚಿತವಾಗಲಿವೆ. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗುವುದನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ತಕ್ಷಣ ಸರ್ವಪಕ್ಷ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಭಿನ್ನವಾಗಿದೆ. ಇಲ್ಲಿ ಈಗಾಗಲೇ ರಾಜ್ಯ ಸರ್ಕಾರ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿ ಸಿದ್ಧವಿದೆ. ಇದರ ಆಧಾರದಲ್ಲಿ ಕಡಿಮೆ ಅವಧಿಯಲ್ಲಿ ಹೊಸ ರಾಜಕೀಯ ಮೀಸಲಾತಿಯನ್ನು ರೂಪಿಸಲು ಸಾಧ್ಯವಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios