- ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ನಡೆದರೆ ಸಂಪುಟ ಪುನಾರಚನೆ ಅನುಮಾನ- 4 ಸ್ಥಾನ ಭರ್ತಿ ಮಾಡಲು ಅಥವಾ ಯಥಾಸ್ಥಿತಿಗೆ ಚಿಂತನೆ- ಸಿಎಂ-ಅಮಿತ್‌ ಶಾ ಸಭೆ, ಯಥಾಸ್ಥಿತಿಯನ್ನೇ ಮುಂದುವರೆಸುವ ಚಿಂತನೆ

ಬೆಂಗಳೂರು(ಮೇ.12): ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಚ್‌ ನೀಡಿರುವ ತೀರ್ಪು ರಾಜ್ಯದ ಬಹು ನಿರೀಕ್ಷಿತ ಸಂಪುಟ ಕಸರತ್ತಿನ ಮೇಲೂ ಪರಿಣಾಮ ಬೀರಿದ್ದು, ತಕ್ಷಣವೇ ಚುನಾವಣೆ ನಡೆಯುವುದೇ ಅಥವಾ ಇಲ್ಲವೇ ಎಂಬುದರ ಮೇಲೆ ಸಂಪುಟ ಕಸರತ್ತಿನ ಸ್ವರೂಪವೂ ನಿರ್ಧಾರವಾಗುವ ಸಾಧ್ಯತೆಯಿದೆ.

ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಹಾಗೂ ಬಿಬಿಎಂಪಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನ ಕೈಗೊಂಡಲ್ಲಿ ಸಂಪುಟ ಪುನಾರಚನೆಯ ಗೊಡವೆಯನ್ನು ಕೈಬಿಟ್ಟು ಕೇವಲ ಸಂಪುಟ ವಿಸ್ತರಣೆಯನ್ನಷ್ಟೇ ಮಾಡಬಹುದು ಅಥವಾ ಯಥಾಸ್ಥಿತಿಯನ್ನೇ ಮುಂದುವರೆಸಬಹುದು ಎಂಬ ಮಾತು ಆಡಳಿತಾರೂಢ ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.

ಸಂಪುಟ ಸರ್ಜರಿಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ರೆ ಯಾರಿಗೆ ಜಾಕ್‌ಪಾಟ್?

ಚುನಾವಣೆ ನಡೆಸುವುದೇ ನಿರ್ಧಾರವಾದಲ್ಲಿ ಸಂಪುಟ ಕಸರತ್ತಿನಿಂದಾಗಿ ಗೊಂದಲ ಉಂಟಾದರೆ ಅದರಿಂದ ಪಕ್ಷಕ್ಕೆ ತೊಂದರೆಯಾಗಬಹುದು ಎಂಬ ಆತಂಕ ಪಕ್ಷದಲ್ಲಿದೆ. ಹೀಗಾಗಿ, ಚುನಾವಣೆಯ ಬಗ್ಗೆ ನಿರ್ಧಾರ ಕೈಗೊಂಡ ಬಳಿಕ ಸಂಪುಟದ ಬಗ್ಗೆಯೂ ನಿರ್ಧಾರಕ್ಕೆ ಬರುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ.

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದರು. ಸಂಪುಟ ಕಸರತ್ತಿನ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸುಪ್ರೀಂಕೋರ್ಚ್‌ ನೀಡಿರುವ ತೀರ್ಪಿನ ವಿಷಯವೂ ಪ್ರಸ್ತಾಪವಾಗಿದೆ. ಹೀಗಾಗಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿ ಎರಡು ಅಥವಾ ಮೂರು ದಿನಗಳಲ್ಲಿ ಸಂಪುಟ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಷ್ಟರೊಳಗೆ ರಾಜ್ಯ ಸರ್ಕಾರ ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟನಿಲವಿಗೆ ಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜಕೀಯದಿಂದ ದೂರ ಉಳಿದಿದ್ದ ರಮ್ಯಾ ಮತ್ತೆ ಆ್ಯಕ್ಟೀವ್, ಡಿಕೆಶಿ ವಿರುದ್ಧವೇ ಅಸಮಾಧಾನ!

ಸಂಪುಟ ಪುನಾರಚನೆಗೆ ಕೈಹಾಕುವುದು ಎಂದರೆ ಜೇನುಗೂಡಿಗೆ ಕೈಹಾಕಿದಂತೆ. ಅದರಿಂದ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹೆಚ್ಚಿದೆ. ಈಗ ಹೇಗಿದ್ದರೂ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಐದರ ಪೈಕಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿ ಒಂದನ್ನು ಖಾಲಿ ಉಳಿಸಿಕೊಳ್ಳುವುದು ಸೂಕ್ತ ಎಂಬ ದಿಕ್ಕಿನಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ಬಿಜೆಪಿ ಸೇರಲು ಕಾಂಗ್ರೆಸ್‌ ನಾಯಕರಿಂದ ಸಂಪರ್ಕ
ಕಲ್ಯಾಣ ಕರ್ನಾಟಕ ಭಾಗದ ಅನೇಕ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ನವರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಅನೇಕರು ನನ್ನ ಸಂಪರ್ಕದಲ್ಲಿದ್ದಾರೆ. ಮತ್ತೆ ಕೆಲವರು ಮಧ್ಯವರ್ತಿಗಳನ್ನು ನನ್ನ ಬಳಿ ಕಳಿಸಿ ಅಣ್ಣನವರೇ ನಾನು ನಿಮ್ಮ ಪಾರ್ಟಿ ಸೇರಬೇಕು ಎಂದು ದಂಬಾಲು ಬಿದ್ದಿದ್ದಾರೆ.

ಮೈಸೂರು ಭಾಗದಂತೆ ಕಲ್ಯಾಣ ಕರ್ನಾಟಕದ ಕಾಂಗ್ರೆಸ್‌ ನಾಯಕರು ಸಹ ಬಿಜೆಪಿ ಸೇರಲು ಇಚ್ಛಿಸಿದ್ದಾರೆ. ಈ ಕುರಿತು ಪಕ್ಷದ ಹೈಕಮಾಂಡ್‌ ಗಮನಕ್ಕೆ ತಂದಿರುವೆ. ಹೈಕಮಾಂಡ್‌ ಗ್ರೀನ್‌ಸಿಗ್ನಲ್‌ ನೀಡಿದರೆ ಎಲ್ಲರೂ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದರು.

ಸಚಿವ ಸಂಪುಟ ರಚನೆ ಅಥವಾ ವಿಸ್ತರಣೆ ಕುರಿತು ನನಗ್ಯಾವ ಮಾಹಿತಿ ಇಲ್ಲ. ಮುಂದಿನ ಚುನಾವಣೆ ಸಿಎಂ ಬವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ. ಬಿಜೆಪಿಯ ಮಿಷನ್‌ 150ಕ್ಕೆ ಕಲ್ಯಾಣ ಕರ್ನಾಟಕದಿಂದ ಹೆಚ್ಚಿನ ಶಾಸಕರನ್ನು ಕೊಡುತ್ತೇವೆ ಎಂದು ತಿಳಿಸಿದರು.

ಸಂಸದೆ ಸುಮಲತಾ ಅಂಬರೀಷ್‌ ಬಿಜೆಪಿ ಸೇರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಸುಮಲತಾ ಅಂಬರೀಷ್‌ ಅವರು ಕಲಾವಿದೆಯಾಗಿದ್ದಾರೆ. ರಾಜಕೀಯ ಹಿನ್ನಲೆ ಇರುವವರಾಗಿದ್ದಾರೆ. ಅವರು ಬಿಜೆಪಿಗೆ ಬರೋದ್ರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ ಎಂದು ಪ್ರತಿಕ್ರಿಯಿಸಿದರು.