ಈ ವರ್ಷವೇ ಎತ್ತಿನಹೊಳೆ ನೀರು. ನೀರು ಬರೋದಿಲ್ಲ ಅಂದವರು ಈಗ ನಾವೇ ಯೋಜನೆ ಮಾಡಿದ್ದು ಅಂತಿದ್ದಾರೆ ಎಂದ ಸಿಎಂ ಬೊಮ್ಮಾಯಿ. ಬೆಂಗಳೂರು ಸ್ಯಾಟಲೈಟ್‌ ಟೌನ್‌ ಆಗಿ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಅಭಿವೃದ್ಧಿ ಬಗ್ಗೆ ಘೋಷಣೆ.

ಬೆಂಗಳೂರು (ಸೆ.11): ರಾಜ್ಯ ಬಿಜೆಪಿ ಸರ್ಕಾರವು ನೀರಾವರಿಗೆ ಹೆಚ್ಚಿನ ಒತ್ತು ನೀಡಿದ್ದು, ಈ ಭಾಗಕ್ಕೆ ಇದೇ ವರ್ಷ ಎತ್ತಿನಹೊಳೆ ನೀರನ್ನು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ. ಶನಿವಾರ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಎತ್ತಿನಹೊಳೆ ಎಲ್ಲಿದೆ ಎಂದು ಗೊತ್ತಿಲ್ಲ. ಈ ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಎತ್ತಿನಹೊಳೆ ಯೋಜನೆಯನ್ನು ಪ್ರಾರಂಭಿಸಲಾಯಿತು. ಇಲ್ಲಿಗೆ ನೀರು ಬರುವುದಿಲ್ಲ ಎಂದು ಹೇಳಿದವರು, ಈಗ ನೀರು ಬರುವಂತೆ ಮಾಡಿದ್ದು ನಾವೇ ಎನ್ನುತ್ತಿದ್ದಾರೆ. ಯಾವ ನಾಯಕರು ಆಗುವುದಿಲ್ಲ ಎಂದಿದ್ದರೋ, ಅವರು ಈಗ ನಾವು ಮಾಡಿದ್ದು ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಎತ್ತಿನಹೊಳೆ ಯೋಜನೆಗೆ ನಿಜವಾಗಿಯೂ ಹಣವನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಮೂರು ಸಾವಿರ ಕೋಟಿ ರು. ನೀಡಿ ಕೋಲಾರ, ಚಿಕ್ಕಬಳ್ಳಾಪುರ ಫೀಡರ್‌ ಕಾಮಗಾರಿಯನ್ನು ಪ್ರಾರಂಭಿಸಿ ಇದೇ ವರ್ಷ ಎತ್ತಿನಹೊಳೆ ನೀರನ್ನು ಹರಿಸುತ್ತೇವೆ. ನಾವೇ ಪ್ರಾರಂಭಿಸಬೇಕು ಎಂಬುದು ದೈವೇಚ್ಛೆ. ಅದಕ್ಕೆ ಕಟಿಬದ್ಧರಾಗಿ ಕೆಲಸ ಮಾಡುತ್ತೇವೆ ಎಂದರು.

ಇನ್ನು, ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಹೊಸ ಟೌನ್‌ಶಿಪ್‌ಗಾಗಿ ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿಗಳನ್ನು ಬೆಂಗಳೂರಿನ ಸ್ಯಾಟಲೈಟ್‌ ಟೌನ್‌ ಆಗಿ ಅಭಿವೃದ್ಧಿ ಮಾಡುವ ತೀರ್ಮಾನ ಮಾಡಿದ್ದೇವೆ. ಭವಿಷ್ಯದ ಬೆಂಗಳೂರು ಈ ಮೂರು ನಗರದಲ್ಲಿದೆ. ಇವುಗಳನ್ನು ಮಹಾನಗರಗಳನ್ನಾಗಿ ಪರಿವರ್ತಿಸಿ, ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿ ಸಮಗ್ರ ಅಭಿವೃದ್ಧಿಯನ್ನು ಮಾಸ್ಟರ್‌ ಪ್ಲಾನ್‌ ಮೂಲಕ ಮಾಡಲಿದ್ದೇವೆ. ಈ ಬಗ್ಗೆ ದೂರದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ ಮೇಲೆ ದಾಳಿ, ಜೆಡಿಎಸ್‌ ಬಗ್ಗೆ ಮೌನ: ಪಕ್ಷದ ಪ್ರಾತಿನಿಧ್ಯ ಕಡಿಮೆ ಇರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಯ ಎರಡು ತಾಲೂಕುಗಳನ್ನು ಕೇಂದ್ರೀಕರಿಸಿ ಆಯೋಜಿಸಿದ್ದ ಈ ಜನಸ್ಪಂದನ ಕಾರ್ಯಕ್ರಮದ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಲೇಬೇಕು ಎಂಬ ಸಂಕಲ್ಪವನ್ನು ಬಿಜೆಪಿ ನಾಯಕರು ಮಾಡಿದರು.

ಕಾಂಗ್ರೆಸ್‌ ಪಕ್ಷ ಭಾರತ್‌ ಜೋಡೋ ಕಾರ್ಯಕ್ರಮ ಆರಂಭಿಸಿರುವ ಹಿನ್ನೆಲೆಯಲ್ಲಿ ಆ ಪಕ್ಷದ ವಿರುದ್ಧವೇ ಹರಿಹಾಯ್ದ ಬಿಜೆಪಿ ನಾಯಕರು, ಮತ್ತೊಂದು ಪ್ರತಿಪಕ್ಷವಾದ ಜೆಡಿಎಸ್‌ ಬಗ್ಗೆ ಚಕಾರ ಎತ್ತಲಿಲ್ಲ. ಅದರ ಹೆಸರನ್ನೇ ಪ್ರಸ್ತಾಪಿಸಲಿಲ್ಲ ಎನ್ನುವುದು ಕೂಡ ವಿಶೇಷ.

ಕಾಂಗ್ರೆಸ್‌ ಗೆಲ್ಲಲು ಬಿಡಲ್ಲ, ಮೋದಿ ಪ್ರಧಾನಿಯಾಗಿರುವವರೆಗೆ ರಾಜ್ಯದಲ್ಲಿ 'ಕೈ'ಗಿಲ್ಲ ಅಧಿಕಾರ: ಬಿಎಸ್‌ವೈ

ಈ ಸಂದರ್ಭದಲ್ಲಿ ಜನಸ್ಪಂದನ ಸಮಾವೇಶವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರನ್ನು ಎಲ್ಲ ನಾಯಕರೂ ಮುಕ್ತ ಕಂಠದಿಂದ ಪ್ರಶಂಸಿಸಿದರು.

ಬಿಜೆಪಿ ಸಮಾವೇಶಕ್ಕೆ ಬಿಎಂಟಿಸಿ ಬಸ್‌: ಬೆಂಗಳೂರಿನಲ್ಲಿ ಓಡಾಡಲು ಪರದಾಡಿದ ಜನತೆ

ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಇತರ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆರ್‌.ಅಶೋಕ್‌, ಮುನಿರತ್ನ, ಎಂ.ಟಿ.ಬಿ.ನಾಗರಾಜ್‌ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಬಿಜೆಪಿ ಪದಾಧಿಕಾರಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.