ಬೆಂಗಳೂರು(ಜ.05): ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡ ಪರಿಣಾಮ ಬೆಂಗಳೂರಿನಲ್ಲಿ ಚಳಿ ಹಾಗೂ ಮಳೆಯ ವಾತಾವರಣ ಸೃಷ್ಟಿಯಾಗಿದ್ದು, ಜ.7ರವರೆಗೆ ಇದೇ ವಾತಾವರಣ ಮುಂದುವರಿಯುವ ನಿರೀಕ್ಷೆ ಇದೆ.

ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಕಾರಣಕ್ಕೆ ನಗರದಲ್ಲಿ ಕಳೆದ ಎರಡು ದಿನದಿಂದ ಉಷ್ಣಾಂಶದಲ್ಲಿ ತೀವ್ರ ಇಳಿಕೆಯಾಗಿದೆ. ನಗರದ ಎಲ್ಲ ಪ್ರದೇಶಗಳಲ್ಲಿ ಮೋಡ ಕವಿದ ಹಾಗೂ ಚಳಿಯ ವಾತಾವರಣ ಉಂಟಾಗಿದೆ.

ಬೇರೆಯವರ ಸೈಟ್‌ ತೋರಿಸಿ 2 ಕೋಟಿ ವಂಚಿಸಿದ ಉದ್ಯಮಿ

ಆದರೆ ಎಲ್ಲಿಯೂ ಕೂಡ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಂಎಂಸಿ ) ಮಾಹಿತಿ ನೀಡಿದೆ.

ಜ.5 ಹಾಗೂ 6ರಂದು ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಜೊತೆಗೆ ಅಲ್ಲಲ್ಲಿ ತುಂತುರು ಮಳೆ ಬೀಳುವ ಸಂಭವವಿದೆ. ಜ.7ರಂದು ಗುಡುಗು ಸಹಿತ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಬಹುದು. ನಂತರ ಜ.10ರವರೆಗೆ ಮೂರು ದಿನ ನಗರದಲ್ಲಿ ಬೆಳಗ್ಗೆ ಮಂಜು ಬೀಳುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ಕನಿಷ್ಠ ತಾಪ​ಮಾನ 17ರಿಂದ 19 ಡಿಗ್ರಿ ಸೆಲ್ಸಿ​ಯಸ್‌ ಹಾಗೂ ಗರಿಷ್ಠ ತಾಪ​ಮಾನ 26-27 ಡಿಗ್ರಿ ಸೆಲ್ಸಿಯಸ್‌ ದಾಖಲಾಗಲಿದೆ.