ಬೆಂಗಳೂರು(ಜ.05): ಬೇರೆಯವರ ನಿವೇಶನ ತೋರಿಸಿ ತನ್ನ ದೊಡ್ಡಪ್ಪ ನಿವೇಶನದ ಮಾಲೀಕರೆಂದು ಸುಳ್ಳು ಹೇಳಿ ನಿವೃತ್ತ ಅಧಿಕಾರಿಯೊಬ್ಬರಿಂದ .2.3 ಕೋಟಿ ಪಡೆದು ವಂಚಿಸಿದ ಆರೋಪದ ಮೇಲೆ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಡಾಲ​ರ್‍ಸ್ ಕಾಲನಿ ನಿವಾಸಿ ಪುನೀತ್‌ ಸಿದ್ದೇಗೌಡ ಬಂಧಿತ. ಶ್ರೀಗಂಧ ಕಾವಲ್‌ ನಿವಾಸಿ ನಿವೃತ್ತ ಅಧಿಕಾರಿ ಕೊಟ್ಟದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೃಹತ್‌ ನಕಲಿ ಪ್ಯಾನ್‌, ಆಧಾರ್‌ ದಂಧೆ ಬಯಲು!

ನಿವೃತ್ತ ಅಧಿಕಾರಿ ರಾಜರಾಜೇಶ್ವರಿನಗರದಲ್ಲಿ ನಿವೇಶನ ಖರೀದಿಸಲು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ರಾಯಲ್‌ ಗ್ರೂಪ್‌ ಎಂಬ ರಿಯಲ್‌ ಎಸ್ಟೇಟ್‌ ಕಂಪನಿ ಮಾಲೀಕ ಪುನೀತ್‌ ಪರಿಚಯ ಆಗಿದ್ದ. ರಾಜರಾಜೇಶ್ವರಿನಗರದ ಐಡಿಯಲ್‌ ಹೋಮ್ಸ್‌ ಸೊಸೈಟಿಯಲ್ಲಿ ತನ್ನ ದೊಡ್ಡಪ್ಪನ ಸೈಟ್‌ ಇದ್ದು, ಅದನ್ನು ನಾನೇ ನೋಡಿಕೊಳ್ಳುತ್ತಿದ್ದೆನೆ ಎಂದು ಹೇಳಿ ನಿವೃತ್ತ ಅಧಿಕಾರಿಗೆ ನಿವೇಶನ ತೋರಿಸಿದ್ದ.

ನಿವೇಶನದ ಸುತ್ತ ತಗಡಿನ ಸೀಟ್‌ನಿಂದ ಕಾಂಪೌಂಡ್‌ ಕಟ್ಟಿಸಿ ಪಿಎಸ್‌ಜಿ ಎಂದು ಹೆಸರು ಬರೆಸಿದ್ದ. ಇದನ್ನು ನೋಡಿದ ನಿವೃತ್ತ ಅಧಿಕಾರಿ ನಿಜವೆಂದು ನಂಬಿ ಹಂತ-ಹಂತವಾಗಿ .2.3 ಕೋಟಿ ಹಣ ನೀಡಿದ್ದರು. ಕ್ರಯ ಕರಾರು ಮಾಡಿಸಿಕೊಳ್ಳಲು ಕರೆದಾಗ ನಿವೇಶನ ಮಾಲೀಕರು ಬಂದಿಲ್ಲ. ಆಗ ಹಣ ವಾಪಸ್‌ ನೀಡುವಂತೆ ಕೇಳಿದಾಗ ಆರೋಪಿ ಪ್ರಾಣ ಬೆದರಿಕೆ ಹಾಕಿದ್ದ. ನೊಂದ ನಿವೃತ್ತ ಅಧಿಕಾರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.