ಪೆರಿಫೆರಲ್‌ ರಸ್ತೆಯಿಂದ ಹಲವು ಮನೆಗಳಿಗೆ ಕುತ್ತು; ಸ್ಥಳೀಯ ನಿವಾಸಿಗಳಿಗೆ ಸಂಕಷ್ಟ

ಹೊಸೂರು ರಸ್ತೆಯಿಂದ ಆರಂಭಗೊಂಡು ತುಮಕೂರು ರಸ್ತೆ ಮತ್ತು ನೈಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಪೆರಿಫೆರಲ್‌ ವರ್ತುಲ ರಸ್ತೆಗೆ(ಪಿಆರ್‌ಆರ್‌) ನಿರ್ಮಾಣ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬೆನ್ನಲ್ಲೇ, ರಸ್ತೆ ಹಾದು ಹೋಗಲಿರುವ ಪ್ರದೇಶಗಳಲ್ಲಿ ಮನೆ, ಕಟ್ಟಡಗಳನ್ನು ಕಟ್ಟಿಕೊಂಡಿರುವವರಿಗೆ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.

Close to many houses from the peripheral road Fear local residents at bengaluru rav

ಸಂಪತ್‌ ತರೀಕೆರೆ

ಬೆಂಗಳೂರು (ಆ.10) :  ಹೊಸೂರು ರಸ್ತೆಯಿಂದ ಆರಂಭಗೊಂಡು ತುಮಕೂರು ರಸ್ತೆ ಮತ್ತು ನೈಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಪೆರಿಫೆರಲ್‌ ವರ್ತುಲ ರಸ್ತೆಗೆ(ಪಿಆರ್‌ಆರ್‌) ನಿರ್ಮಾಣ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬೆನ್ನಲ್ಲೇ, ರಸ್ತೆ ಹಾದು ಹೋಗಲಿರುವ ಪ್ರದೇಶಗಳಲ್ಲಿ ಮನೆ, ಕಟ್ಟಡಗಳನ್ನು ಕಟ್ಟಿಕೊಂಡಿರುವವರಿಗೆ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.

ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ದಿನದಿಂದ ಈವರೆಗೂ ಪೆರಿಫೆರಲ್‌ ರಿಂಗ್‌ ರಸ್ತೆ ಹಾದು ಹೋಗಲಿರುವ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುವ ರೈತರು ಮತ್ತು ಭೂಮಾಲಿಕರಿಗೆ ನಯಾಪೈಸೆ ಪರಿಹಾರ ಸಿಗುವುದಿಲ್ಲ. ಪಿಆರ್‌ಆರ್‌ ಯೋಜನೆಗೆಂದು ನಿಗದಿಯಾಗಿರುವ ಜಾಗದಲ್ಲಿ ಮನೆ, ಕಟ್ಟಡ ಕಟ್ಟಿಕೊಳ್ಳುವುದು ಕಾನೂನುಬಾಹಿರ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.

 

'ನನ್ನ ಫೋಟೋಗೆ ಹಾರ ಹಾಕುವುದಕ್ಕೆ ಮುಂಚೆಯೇ ಪೆರಿಫೆರಲ್‌ ಆರಂಭಿಸಿ' ಡಿಸಿಎಂ ಎದುರು ರೈತರು ಕಣ್ಣೀರು!

ಪಿಆರ್‌ಆರ್‌ ಯೋಜನೆ(PRR Project)ಗಾಗಿ 1810.18 ಎಕರೆಯಷ್ಟುಭೂಮಿಯ ಸ್ವಾಧೀನಕ್ಕೆ 2007ರ ಜೂನ್‌ 29ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ 17 ವರ್ಷ ಕಳೆದರೂ ಯೋಜನೆ ಪ್ರಗತಿ ಕಂಡಿಲ್ಲ. ಹೀಗಾಗಿ ಹಲವರು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಜಮೀನಿನಲ್ಲೇ ನಿವೇಶನಗಳನ್ನು ಖರೀದಿಸಿ ಮನೆ, ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಸಾಲ ಮಾಡಿ ನಿವೇಶನಗಳನ್ನು ಖರೀದಿಸಿ, ಕಟ್ಟಡಗಳನ್ನು ಕಟ್ಟಿಕೊಂಡಿರುವವರು ಅನೇಕ. ಒಂದು ವೇಳೆ ಇದೀಗ ಯೋಜನೆ ಕಾಮಗಾರಿ ಆರಂಭಗೊಂಡರೆ ಮನೆ, ಕಟ್ಟಡಗಳ ತೆರವು ಅನಿವಾರ್ಯವಾಗಲಿದೆ. ಜೊತೆಗೆ ಒಂದು ಪೈಸೆ ಪರಿಹಾರ ಕೂಡ ಸಿಗುವುದು ಅನುಮಾನ ಎನ್ನಲಾಗಿದೆ.

ಡಾ ಕಾರಂತ ಬಡಾವಣೆ ಮಾದರಿ ಕಟ್ಟಡ ತೆರವು?

ಶಿವರಾಮ ಕಾರಂತ ಬಡಾವಣೆಯ ವಿಚಾರದಲ್ಲಿ ಸುಪ್ರೀಂ ಕೋರ್ಚ್‌ ಆದೇಶ ಈ ಯೋಜನೆಗೂ ಅನ್ವಯವಾದರೂ ಆಶ್ಚರ್ಯವಿಲ್ಲ. ಕಾರಂತ ಬಡಾವಣೆಗೆಂದು ಅಂತಿಮ ಅಧಿಸೂಚನೆ ನಂತರವೂ ನಿರ್ಮಾಣಗೊಂಡ ಕಟ್ಟಡ, ಮನೆಗಳನ್ನು ಗುರುತಿಸಲು ಸಮಿತಿಯೊಂದನ್ನು ರಚಿಸಿತ್ತು. 2018 ಆಗಸ್ಟ್‌ 3ರ ನಂತರ ಯೋಜನೆಯ ಜಾಗದಲ್ಲಿ ಕಟ್ಟಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಬಡಾವಣೆ ನಿರ್ಮಾಣ ಮಾಡುವಂತೆ ಸೂಚಿಸಿತ್ತು. ಅಂತೆಯೇ ಪಿಆರ್‌ಆರ್‌ ಯೋಜನೆಗೆಂದು ಭೂಸ್ವಾಧೀನದ ಅಂತಿಮ ಅಧಿಸೂಚನೆ ಬಳಿಕವೂ ಕಟ್ಟಡ, ಮನೆ ನಿರ್ಮಾಣ ಮಾಡಿದವರಿಗೆ ಈ ಆದೇಶ ಅನ್ವಯವಾಗುವ ಸಾಧ್ಯತೆ ಇದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಆರಂಭವೇ ಆಗಿಲ್ಲ

ಪಿಆರ್‌ಆರ್‌ ಯೋಜನೆಗಾಗಿ 77 ಗ್ರಾಮಗಳ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. 74 ಕಿ.ಮೀ. ಉದ್ದ ಹಾಗೂ 100 ಮೀಟರ್‌ ಅಗಲದ ಪಿಆರ್‌ಆರ್‌ ರಸ್ತೆ ನಿರ್ಮಾಣಕ್ಕೆ 2005ರ ಸೆಪ್ಟೆಂಬರ್‌ನಲ್ಲಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 2007ರ ಜೂನ್‌ 29ರಂದು 1,810 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಈ ಯೋಜನೆಗೆ ಒಟ್ಟು 2596.29 ಎಕರೆ ಜಮೀನು ಗುರುತಿಸಲಾಗಿದೆ. ಆದರೆ, ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿಲ್ಲ.

ಪಿಆರ್‌ಆರ್‌ ರಸ್ತೆಯು ಬೆಂಗಳೂರು ನಗರ ಜಿಲ್ಲೆಯ ಉತ್ತರ, ದಕ್ಷಿಣ, ಪೂರ್ವ, ಯಲಹಂಕ, ಆನೇಕಲ್‌ ತಾಲೂಕು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸೇರಿ 6 ತಾಲೂಕುಗಳ 77 ಗ್ರಾಮಗಳ ಮೂಲಕ ಹಾದು ಹೋಗಲಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಯೋಜನೆಗಾಗಿ ಸುಮಾರು .25 ಸಾವಿರ ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದು, 8 ಪಥದ ರಸ್ತೆ ಜತೆಗೆ ಸವೀರ್‍ಸ್‌ ರಸ್ತೆಯೂ ಇರಲಿದೆ. 100 ಮೀಟರ್‌ ಅಗಲದ ರಸ್ತೆ ಹಾಗೂ ಕ್ಲೋವರ್‌ ಎಲೆ ಮಾದರಿಯ ಜಂಕ್ಷನ್‌ಗಳು, ಮೇಲ್ಸೇತುವೆಗಳು, ರೈಲ್ವೆ ಮೇಲ್ಸೇತುವೆ, ರೈಲ್ವೆ ಕೆಳಸೇತುವೆಗಳು ಈ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿವೆ.

ಸಮೀಕ್ಷೆ ಬಳಿಕ ಕಟ್ಟಡ ಮಾಹಿತಿ

ಪಿಆರ್‌ಆರ್‌ ಯೋಜನೆ ಸಂಬಂಧ ಆರು ತಾಲೂಕುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಬೇಕಿದೆ. ಪಿಆರ್‌ಆರ್‌ ಹಾದು ಹೋಗಲಿರುವ ಹಾದಿಯಲ್ಲಿ ಎಷ್ಟುನಿವೇಶನಗಳು, ಕಟ್ಟಡಗಳು ಇವೆ. ಅಂತಿಮ ಅಧಿಸೂಚನೆ ನಂತರ ಎಷ್ಟುಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ಕಲೆಹಾಕಲಾಗುತ್ತದೆ. ಆ ನಂತರ ಪರಿಹಾರ ಪಡೆಯಲು ಯಾರು ಅರ್ಹರು, ಯಾರು ಅನರ್ಹರು ಎಂಬ ಪಟ್ಟಿಸಿದ್ಧಗೊಳ್ಳಲಿದೆ.

ಪೆರಿಫೆರಲ್‌ ರಸ್ತೆ ಯೋಜನೆ ರದ್ದುಗೊಳಿಸಲು ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ

ಸದ್ಯ ಪಿಆರ್‌ಆರ್‌ ಯೋಜನೆಗೆ ಮೂರ್ನಾಲ್ಕು ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಯೋಜನೆ ಸದ್ಯದಲ್ಲೇ ಆರಂಭಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios