ಗೋವುಗಳ ಮಾರಣಹೋಮ ಕಡಿಮೆಯಾಗಿದೆ. ಆದರೆ ಅಕ್ರಮವಾಗಿ ನಡೆಯುತ್ತಿರುವ ಕಸಾಯಿ ಖಾನೆಗಳನ್ನು ಬಂದ್‌ ಮಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು: ಸಚಿವ ಪ್ರಭು ಚವ್ಹಾಣ್‌ 

ಬೆಂಗಳೂರು(ನ.24):  ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ಗೋವುಗಳ ಮಾರಣ ಹೋಮಕ್ಕೆ ಕಡಿವಾಣ ಬಿದ್ದಿದೆ. ಆದರೂ ಕೆಲವು ಭಾಗಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳನ್ನು ಶಾಶ್ವತವಾಗಿ ಮುಚ್ಚಿಸಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಹೆಬ್ಬಾಳದ ಪಶುಪಾಲನಾ ಭವನದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಗ್ರಾಮ ಸಭೆಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗೋವುಗಳ ಮಾರಣಹೋಮ ಕಡಿಮೆಯಾಗಿದೆ. ಆದರೆ ಅಕ್ರಮವಾಗಿ ನಡೆಯುತ್ತಿರುವ ಕಸಾಯಿ ಖಾನೆಗಳನ್ನು ಬಂದ್‌ ಮಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು ಎಂದು ಸ್ಪಷ್ಟಪಡಿಸಿದರು.

ಗೋಶಾಲೆ ಆರಂಭಕ್ಕೆ ಡಿಸೆಂಬರ್‌ ಗಡುವು: ಸಚಿವ ಪ್ರಭು ಚವ್ಹಾಣ್‌

ಗೋಹತ್ಯೆ ನಿಷೇಧ ಕಾಯ್ದೆ ಕುರಿತು ನಿಮ್ಮ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ ಎಷ್ಟುಗ್ರಾಮ ಸಭೆ ಆಯೋಜಿಸಿ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದೀರಿ. ನಿಯಮಗಳ ಬಗ್ಗೆ ಪೊಲೀಸರು ಮತ್ತು ಸಿಬ್ಬಂದಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇನ್ನೂ ಏಕೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣ ಅರಿವು ಮೂಡಿಸಲು ಕ್ರಮ ವಹಿಸಬೇಕು ಎಂದು ಆದೇಶಿಸಿದರು.

ಕರ್ನಾಟಕ ಭೂ ಕಂದಾಯ ನಿಯಮಗಳ ಪ್ರಕಾರ 100 ಜಾನುವಾರುಗಳಿಗೆ 12 ಹೆಕ್ಟೇರ್‌ನಂತೆ ಪ್ರತಿ ಗ್ರಾಮದಲ್ಲಿ ಗೋಮಾಳ ಮೀಸಲಿಡಬೇಕು. ಈ ಬಗ್ಗೆ ಆಯಾ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಸರ್ಕಾರಿ ಗೋಶಾಲೆಗಳಿಗೆ ಈ ಗೋಮಾಳ ಬಳಕೆ ಮಾಡಿಕೊಳ್ಳಬೇಕು. ಚರ್ಮಗಂಟು ರೋಗದಿಂದ ಬಳಲುತ್ತಿರುವ ಜಾನುವಾರುಗಳಲ್ಲಿ ಸೋಂಕು ಶ್ವಾಸಕೋಶ ಪ್ರವೇಶಿಸುತ್ತಿದ್ದು ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಇದನ್ನು ತಡೆಗಟ್ಟಲು ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಡಾ.ಸಲ್ಮಾ ಕೆ.ಫಾಹೀಮ್‌, ಆಯುಕ್ತೆ ಎಸ್‌.ಅಶ್ವಥಿ, ಇಲಾಖೆ ನಿರ್ದೇಶಕ ಡಾ.ಮಂಜುನಾಥ್‌ ಪಾಳೇಗಾರ್‌ ಮತ್ತಿತರರು ಉಪಸ್ಥಿತರಿದ್ದರು.