ಬೆಂಗಳೂರು: ಸರಕು ಸಾಗಣೆ ವಾಹನ ಹರಿದುಪೌರಕಾರ್ಮಿಕ ಸ್ಥಳದಲ್ಲೇ ಸಾವು
ಸರಕು ಸಾಗಣೆ ವಾಹನವೊಂದು ಪೌರಕಾರ್ಮಿಕನಿಗೆ ಡಿಕ್ಕಿ ಹೊಡೆದು ಚಕ್ರ ತಲೆಯ ಮೇಲೆಯೇ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಸೆ.13) : ಸರಕು ಸಾಗಣೆ ವಾಹನವೊಂದು ಪೌರಕಾರ್ಮಿಕನಿಗೆ ಡಿಕ್ಕಿ ಹೊಡೆದು ಚಕ್ರ ತಲೆಯ ಮೇಲೆಯೇ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಟಿ.ದಾಸರಹಳ್ಳಿ ರವೀಂದ್ರನಗರ ನಿವಾಸಿ ಗಂಗಾಧರ್ (49) ಮೃತ ಪೌರಕಾರ್ಮಿಕ. ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಚೊಕ್ಕಸಂದ್ರ ಕೆರೆಯ ಎದುರಿನ ಕೆಐಡಿಬಿ ರಸ್ತೆಯನ್ನು ದಾಟುವಾಗ ಈ ಅಪಘಾತ ಸಂಭವಿಸಿದೆ. ಗಂಗಾಧರ್ ಕಳೆದ 20 ವರ್ಷದಿಂದ ಬಿಬಿಎಂಪಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಚೊಕ್ಕಸಂದ್ರ ವಾರ್ಡಿನ ಮಸ್ಟರಿಂಗ್ ಕೇಂದ್ರದ ಬಳಿ ಕರ್ತವ್ಯಕ್ಕೆ ಹಾಜರಾತಿ ಹಾಕಿದ ಬಳಿಕ ಚೊಕ್ಕಸಂದ್ರ ಕೆರೆಯ ಬಳಿಯ ರಸ್ತೆ ದಾಟುವಾಗ ದಾಸರಹಳ್ಳಿ ಜಂಕ್ಷನ್ ಕಡೆಯಿಂದ ವೇಗವಾಗಿ ಬಂದು ಸರಕು ಸಾಗಣೆ ವಾಹನ ಗಂಗಾಧರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಗಂಗಾಧರ್ ತಲೆ ಮೇಲೆಯೇ ವಾಹನದ ಮುಂಭಾಗದ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
BBMP: ಪಿಂಚಣಿಗಾಗಿ ಹುಲ್ಲು ತಿಂದು ಪ್ರತಿಭಟಿಸಿದ ಪೌರ ನೌಕರರು
ಅಪಘಾತಕ್ಕೆ ಸರಕು ಸಾಗಣೆ ವಾಹನದ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಬಳಿಕ ಸ್ಥಳದಲ್ಲೇ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಗಂಗಾಧರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.