ಬೆಂಗಳೂರು[ನ.28]: ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಲೈಂಗಿಕ ಅಪರಾಧ ಪ್ರಕರಣಗಳ ಆರೋಪಿಗಳ ಮೇಲೆ ಕಣ್ಗಾವಲಿಗೆ ಪ್ರತ್ಯೇಕ ಲ್ಯಾಬ್‌ ಸ್ಥಾಪಿಸಲು ನಿರ್ಧರಿಸಿದೆ.

ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳಿಗೆ ಕೇಂದ್ರವು ನಾಲ್ಕು ಕೋಟಿ ರು. ಅನುದಾನ ಮಂಜೂರು ಮಾಡಿದೆ. ಅಲ್ಲದೆ, ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧ ಕೃತ್ಯಗಳ ಕುರಿತು ದೇಶದ ಯಾವುದೇ ಮೂಲೆಯಿಂದಲೂ ಆನ್‌ಲೈನ್‌ ಮೂಲಕ ಪೊಲೀಸರಿಗೆ ದೂರು ಸಲ್ಲಿಕೆಗೂ ಸಹ ಚಾಲನೆ ನೀಡಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಪೊಲೀಸ್‌ ಇಲಾಖೆಯ ಅಪರಾಧ ತನಿಖಾ ದಳದ (ಸಿಐಡಿ) ಸೈಬರ್‌ ಕ್ರೈಂ ವಿಭಾಗದಲ್ಲಿ ಪ್ರತ್ಯೇಕ ಲ್ಯಾಬ್‌ ಸ್ಥಾಪನೆಯಾಗಿದೆ. ಇದರಲ್ಲಿ ಸುಮಾರು 15 ಸಾವಿರ ಆರೋಪಿಗಳ ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದರಿಂದ ದುಷ್ಟರಿಗೆ ಮತ್ತಷ್ಟುಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಸೈಬರ್‌ ಅಪರಾಧಗಳಿಗೆ ಇಸ್ಫೋಸಿಸ್‌ ಕಂಪನಿಯ ಸಹಕಾರದಲ್ಲಿ ಲ್ಯಾಬ್‌ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿರುವ ಸಿಐಡಿಗೆ ಈಗ ಮತ್ತೊಂದು ಲ್ಯಾಬ್‌ ಬಂದಿದೆ.

ಕೇಂದ್ರದ ಹಣ, ರಾಜ್ಯದ ಯೋಜನೆ:

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರವು ಈ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಕಿಡಿಗೇಡಿಗಳನ್ನು ಬಗ್ಗು ಬಡಿಯಲು ಯೋಜಿಸಿತು. ಇದಕ್ಕಾಗಿ ರಾಜ್ಯಗಳ ಪೊಲೀಸರನ್ನು ಒಳಗೊಂಡಂತೆ ಒಂದೇ ಸೂರಿನಡಿ ಕಾರ್ಯನಿರ್ವಹಣೆಗೆ ನಿರ್ಧರಿಸಿದ ಸರ್ಕಾರವು, ಮಹಿಳೆ ಮತ್ತು ಮಕ್ಕಳ ಮೇಲಿನ ಸೈಬರ್‌ ಅಪರಾಧ ನಿಯಂತ್ರಣ (ಸಿಡಬ್ಲ್ಯುಸಿಸಿ) ಎಂಬ ಯೋಜನೆ ಜಾರಿಗೆ ಮುಂದಾಗಿದೆ. ಇದರ ಅನುಷ್ಠಾನಕ್ಕೆ ಅನುದಾನವನ್ನು ಕೇಂದ್ರವು ಒದಗಿಸಲಿದ್ದು, ಅದರ ನಿರ್ವಹಣೆ ರಾಜ್ಯಗಳು ಮಾಡಬೇಕಿದೆ.

ಪ್ರತಿ ರಾಜ್ಯದಲ್ಲಿ ಲ್ಯಾಬ್‌ ಸ್ಥಾಪನೆ ಮಾಡಬೇಕು ಹಾಗೂ ಆನ್‌ಲೈನ್‌ನಲ್ಲಿ ದೂರು ಸ್ವೀಕಾರಕ್ಕೆ ಪ್ರತ್ಯೇಕ ಪೋರ್ಟಲ್‌ ರಚಿಸಿಕೊಳ್ಳಬೇಕು. ಈ ಲ್ಯಾಬ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು (ಚೈಲ್ಡ್‌ ಪೋರ್ನೋಗ್ರಫಿ), ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ ಸೇರಿದಂತೆ ಲೈಂಗಿಕ ಶೋಷಣೆ ಕೃತ್ಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲ್ಯಾಬ್‌ನಲ್ಲಿ ಹದಿನೈದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ಆರೋಪಿಗಳ ವಿವರ ಅಡಕವಾಗಲಿದೆ. ಮುಂದೆ ಈ ರೀತಿ ಕೃತ್ಯಗಳು ವರದಿಯಾದರೆ ತಕ್ಷಣವೇ ವೃತ್ತಿಪರ ಅಥವಾ ಹಳೆ ದುಷ್ಕರ್ಮಿಗಳ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಮಾಹಿತಿ ನೀಡಿದರು.

ಆನ್‌ಲೈನಲ್ಲೇ ದೂರು ನೀಡಬಹುದು

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಸಂಬಂಧ ನಾಗರಿಕರು ಆನ್‌ಲೈನ್‌ ಮೂಲಕವೇ ಪೊಲೀಸರಿಗೆ ದೂರು ನೀಡಬಹುದು. ಇದಕ್ಕಾಗಿ ್ಚyಚಿಛ್ಟ್ಚಿ್ಟಜಿಞಛಿಃಜಟ.ಜ್ಞಿ ಹೆಸರಿನಲ್ಲಿ ಪ್ರತ್ಯೇಕ ಪೋರ್ಟಲ್‌ ರಚಿಸಲಾಗಿದೆ. ಇಲ್ಲಿ ಸಲ್ಲಿಕೆಯಾಗುವ ದೂರುಗಳ ನಿರ್ವಹಣೆಗೆ ಸಿಐಡಿ ಸೈಬರ್‌ ಕ್ರೈಂ ವಿಭಾಗದ ಡಿವೈಎಸ್ಪಿ ದರ್ಜೆಯ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಆನ್‌ಲೈನ್‌ನಲ್ಲಿ ಬರುವ ದೂರುಗಳನ್ನು ಪರಿಶೀಲಿಸಿ ಬಳಿಕ ಮುಂದಿನ ಕ್ರಮಕ್ಕೆ ಸ್ಥಳೀಯ ಠಾಣೆಗಳಿಗೆ ರವಾನಿಸಲಾಗುತ್ತದೆ. ಬಳಿಕ ಠಾಣಾಧಿಕಾರಿಗಳು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಿದ್ದಾರೆ ಎಂದು ಸೈಬರ್‌ ಕ್ರೈಂ ಅಧಿಕಾರಿಗಳು ಹೇಳಿದ್ದಾರೆ.