ಬೆಂಗಳೂರು: ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡಿ ಗೌರವಿಸಬೇಕು ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ ಕ್ರೈಸ್ತರ ಕನ್ನಡ ಸಂಘ ಒತ್ತಾಯಿಸಿತು.

ಬುಧವಾರ ನಗರದ ಪುರಭವನ ಮುಂಭಾಗ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ, ಕ್ರೈಸ್ತ ಬಾಂಧವರು ಮೇಣದ ಬತ್ತಿ ಬೆಳಗಿಸಿ, ಶ್ರೀಗಳಿಗೆ ಗೀತೆ ನಮನ ಸಲ್ಲಿಸಿದರು. 

ಶಿವಕುಮಾರ ಸ್ವಾಮೀಜಿ ಕೇವಲ ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾದವರಲ್ಲ. ಇಡೀ ಮನುಕುಲದ ಒಳಿತಿಗಾಗಿ ಜೀವಿಸಿದವರು. ಅಂತವರಿಗೆ ‘ಭಾರತ ರತ್ನ’ ನೀಡಿದರೆ, ಪ್ರಶಸ್ತಿಯ ಘನತೆ ಹೆಚ್ಚುತ್ತದೆ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಂಘದ ಅಧ್ಯಕ್ಷ ರಫಾಯಲ್ ರಾಜ್, ಉಪಾಧ್ಯಕ್ಷ ದೇವಕುಮಾರ್, ಫಾ.ಸಂದ್ಯಾಗು ಇನ್ನಿತರರು ಪಾಲ್ಗೊಂಡಿದ್ದರು.