ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಹಲವು ಮಂದಿ ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಬ್ಯಾಚುಲರ್ ಪಾರ್ಟಿಗೆ ಹೊರಟಿದ್ದ ತಾಯಿ, ಮಗು ಕೂಡ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ.
ಚಿತ್ರದುರ್ಗ (ಡಿ.25): ಸೀಬರ್ಡ್ ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಹಿರಿಯೂರು ಸಮೀಪ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾಕಷ್ಟು ಮಂದಿ ಸಜೀವ ದಹನವಾಗಿದ್ದಾರೆ. ಸಮಯ ಕಳೆದಂತೆ ಸಾವು ಕಂಡವರ ಒಂದೊಂದೇ ವಿವರಗಳು ಹೊರಬರುತ್ತಿವೆ. ಸ್ನೇಹಿತೆಯ ಬ್ಯಾಚುಲರ್ ಪಾರ್ಟಿಗಾಗಿ ಸ್ನೇಹಿತರ ಜೊತೆ ಗೋಕರ್ಣಕ್ಕೆ ಹೋಗುತ್ತಿದ್ದ ತಾಯಿ, ಮಗು ಈ ಅಪಘಾತದಲ್ಲ ದಾರುಣ ಸಾವು ಕಂಡಿದೆ.
ಕಂಟೇನರ್ ಹಾಗೂ ನಾನ್ ಎಸಿ ಸ್ಲೀಪರ್ ಬಸ್ ನಡುವೆ ಗುರುವಾರ ಬೆಳಗಿನ ಜಾವ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಇಲ್ಲಿಯವರೆಗೂ 9 ಮಂದಿ ಸಾವು ಕಂಡಿರುವ ಮಾಹಿತಿ ಇದ್ದು, ಹಲವರು ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಸ್‌ನಲ್ಲಿ ಬೆಂಗಳೂರಿನ ಮಾವಳ್ಳಿಯಿಂದ ಗೋಕರ್ಣಕ್ಕೆ ಗೆಳೆಯರ ತಂಡ ಬ್ಯಾಚುಲರ್ ಪಾರ್ಟಿಗಾಗಿ ಪ್ರಯಾಣ ಮಾಡುತ್ತಿತ್ತು. ಮಂಜುನಾಥ್ (4L ಸೀಟ್), ಸಂಧ್ಯಾ ಹೆಚ್ (5L ಸೀಟ್). ಶಶಾಂಕ್ ಹೆಚ್‌ವಿ (6L ಸೀಟ್). ದಿಲೀಪ್ (7L ಸೀಟ್), ಪ್ರೀತಿಸ್ವರನ್ (7U ಸೀಟ್), ಬಿಂದು (8Lಸೀಟ್)ಹಾಗೂ ಕವಿತ ಕೆ (9L ಸೀಟ್) ಎನ್ನುವವರು ಪ್ರಯಾಣ ಮಾಡಿದ್ದರು. ಇವರ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಕವಿತ.ಕೆ ಎನ್ನುವವರ ಬ್ಯಾಚುಲರ್ ಪಾರ್ಟಿಗಾಗಿ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ದಿಲೀಪ್ ಎನ್ನುವವರ ಅಕ್ಕ ಹಾಗೂ ಅವರ ಮಗು ಸಾವು ಕಂಡಿರುವುದು ಖಚಿತವಾಗಿದೆ. ಇನ್ನು ಮಂಜುನಾಥ್ ಎನ್ನುವವರಿಗೆ ತೀವ್ರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ದಿಲೀಪ್ ಹಾಗೂ ಶಶಾಂಕ್ ಎನ್ನುವವರನ್ನೂ ಕೂಡ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಣ್ಣ ಪುಟ್ಟಗಾಯದಿಂದ ದಿಲೀಪ್ ಬದುಕುಳಿದಿದ್ದಾರೆ. ಆಸ್ಪತ್ರೆಯಿಂದ ದಿಲೀಪ್ ಮನೆಗೆ ತೆರಳಿದ್ದರೆ, ಮಂಜುನಾಥ್ ,ಶಶಾಂಕ್ ಗೆ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಗಾಯಾಳು ಮಂಜುನಾಥ್ ಸಹೋದರ ದಿಲೀಪ್ ಅವರು ಮಾತನಾಡಿದ್ದು, ಎಲ್ಲರೂ ಬ್ಯಾಚುಲರ್ ಪಾರ್ಟಿಗೆ ಅಂತಾ ಹೋಗುತ್ತಿದ್ದೆವು. ಮುಂದಿನ ತಿಂಗಳು ಒಬ್ಬರ ಮದುವೆ ಇತ್ತ. ಅವರೆಲ್ಲ ಬ್ಯಾಚುಲರ್ ಪಾರ್ಟಿಗೆ ಹೋಗುವಾಗ ಹೀಗೆ ಆಗಿದೆ. ತಾಯಿ, ಮಗು ಸಾವು ಕಂಡಿದ್ದಾರೆ. ಮಂಜುನಾಥ್ ಭಾಗಶಃ ಸುಟ್ಟು ಹೋಗಿದ್ದಾನೆ ಎಂದು ಹೇಳಿದ್ದಾರೆ.
ವಾಶ್‌ರೂಮ್‌ಗೆ ಬ್ರೇಕ್ ಕೊಟ್ಟ ಬಳಿಕ ಬಸ್ ಸ್ಪೀಡ್ ಆಗಿ ಹೋಗ್ತಿತ್ತು
ಮಾಧ್ಯಮಗಳ ಜೊತೆ ಮಾತನಾಡಿರುವ ದಿಲೀಪ್, 12 ಗಂಟೆಗೆ ವಾಶ್ ರೂಂ ಬ್ರೇಕ್ ಕೊಟ್ಟಿದ್ದರು. ಅಲ್ಲಿವರೆಗೆ ಬಸ್ ಬಹಳ ನಿಧಾನವಾಗಿ ಹೋಗುತ್ತಿತ್ತು. ಆದರೆ ಬ್ರೇಕ್ ಆದ್ಮೇಲೆ ಬಹಳ ಸ್ಪೀಡ್ ಆಗಿ ಡ್ರೈವಿಂಗ್ ಮಾಡುತ್ತಿದ್ದರು.ನೋಡ್ತಾ ನೋಡ್ತಾ ಬಸ್ ಆಕ್ಸಿಡೆಂಟ್ ಆಗೋಯ್ತು. ಆದಾದ ಮೇಲೆ ಏನಾಯ್ತು ಅನ್ನೋದು ಗೊತ್ತಿಲ್ಲ. ಮಂಜುನಾಥ್ ನನ್ನ ಜೊತೆಯಲ್ಲಿ ಸೀಟ್‌ನಲ್ಲೇ ಇದ್ದ. ಬೆಂಕಿ ಹತ್ಕೊಳ್ಳೋದು ನೋಡಿ ಇಳಿದು ಓಡಿದೆವು. ಮೂವರು ಒಳಗೇ ಸಿಕ್ಕಿಹಾಕಿಕೊಂಡರು. ಮಂಜುನಾಥ್ ಹೊರಗಡೆ ಬಂದಾಗ ಅವನ ದೇಹಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಉಳಿದವರು ಏನಾದರು ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.


