Murugha Mutt Shivacharya Case: ಮುರುಘಾ ಶ್ರೀಗಳ ಜಾಮೀನು ಅರ್ಜಿ ವಜಾ
Court rejects bail plea of Murugha Mutt Seer: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಲೇ ಇವೆ.
ಚಿತ್ರದುರ್ಗ, (ಸೆಪ್ಟೆಂಬರ್.02): ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಕ್ಕೆ ಸಂಬಂಧಿಸಿದಂತೆ ಆರೋಪಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಜಾಗೊಂಡಿದೆ. ಮುರುಘಾ ಶ್ರೀಗಳ ಅರ್ಜಿಯನ್ನು ಚಿತ್ರದುರ್ಗದ ಎರಡನೇ ಅಪಾರ ಜಿಲ್ಲಾ ಸತ್ರ ನ್ಯಾಯಾಲಯ ಇಂದು(ಸೆ.02) ವಜಾಗೊಳಿಸಿದೆ. ಮತ್ತು ಶಿವಮೂರ್ತಿ ಶ್ರೀಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಇನ್ನು ಜಾಮೀನಿಗಾಗಿ ನಾಳೆ (ಸೆ.03) ಹೊಸ ಅರ್ಜಿ ಸಲ್ಲಿಸಲು ಶ್ರೀಗಳ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶ್ರೀಗಳಿಗೆ ತುಂಬಾ ಸುಸ್ತಾಗಿದ್ದು, ಮಾತಾಡುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಇಂದು(ಶುಕ್ರವಾರ) ಇಲ್ಲೇ ಬ್ಯುಸಿ ಇದ್ದಿದ್ದರಿಂದ ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ.ನಾಳೆ(ಸೆಪ್ಟೆಂಬರ್ 03) ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ಮುರುಘಾ ಶ್ರೀಗಳ ಪರ ವಕೀಲ ಉಮೇಶ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ: ವಕೀಲ ಉಮೇಶ್ ಮಾಹಿತಿ
ಶ್ರೀಗಳು ಕಳೆದ ಆಗಸ್ಟ್ 30ರಂದು ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತ್ತು. ಜತೆಗೆ ಎರಡು ಪಕ್ಷಕ್ಕೆ ತಕರಾರು ಅರ್ಜಿ ಸಲ್ಲಿಸುವ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಈ ಮುಂದೂಡಿಕೆ ಎಂದು ತಿಳಿಸಿತ್ತು. ಇದರ ಮಧ್ಯೆ ಪೊಲೀಸರು ಗುರುವಾರ ರಾತ್ರಿಯೇ ಶ್ರೀಗಳನ್ನು ಬಂಧಿಸಿದ್ದರು.
ನ್ಯಾಯಾಂಗ ಬಂಧನಕ್ಕೆ ಒಳಪಟ್ಟು ಜೈಲುಪಾಲಾದ ಶಿವಮೂರ್ತಿ ಮುರುಘಾ ಶರಣರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 2261 ನೀಡಲಾಗಿದೆ. ಜೈಲಿಗೆ ಹೋದ ಕೆಲವೇ ಗಂಟೆಗಳಲ್ಲಿ ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಅಲ್ಲದೇ ಎದೆನೋವಿನಿಂದ ಕುಸಿದುಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಜೈಲಿನಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ ನೀಡಲಾಗುತ್ತಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಸಹಕಾರ: ಮುರುಘಾ ಮಠದ ವಾರ್ಡನ್ ರಶ್ಮಿ ಅರೆಸ್ಟ್
ದಾವಣಗೆರೆ ಎಸ್‌ಎಸ್ ಆಸ್ಪತ್ರೆಯ ಇಬ್ಬರು ಹೃದಯ ರೋಗ ತಜ್ಞರು ಶ್ರೀಗಳು ತಪಾಸಣೆಗೆ ಆಗಮಿಸಿದ್ದು, ಅವರ ನಿರ್ಧಾರದ ಮೇರೆಗೆ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ. ಹೆಲಿಕಾಪ್ಟರ್ ಮೂಲಕ ಶ್ರೀಗಳನ್ನ ಬೆಂಗಳೂರಿಗೆ ಜಯದೇವ ಅಥವಾ ಮಣಿಪಾಲ್ ಆಸ್ಪತ್ರೆಗ ಶಿಫ್ಟ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಬಂಧನದ ಬಳಿಕ ಮುರುಘಾ ಮಠದಲ್ಲಿ ಮೌನ
ಮುರುಘಾ ಮಠದಲ್ಲಿ ಶರಣರ ಬಂಧನದ ಬಳಿಕ ನೀರವ ಮೌನ ಆವರಿಸಿದೆ. ಮಠದ ಆವರಣ ಬಿಕೋ ಎನ್ನುತ್ತಿದೆ. ಮಠದ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಭಕ್ತಾದಿಗಳು ಆಸ್ಪತ್ರೆಯ ಬಳಿ ಜಮಾಯಿಸುತ್ತಿದ್ದಾರೆ. ಜತೆಗೆ ಕೆಲವೇ ಕ್ಷಣಗಳಲ್ಲಿ ಶರಣರಿಗೆ MRI ಸ್ಕ್ಯಾನಿಂಗ್ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಸ್ಪತ್ತೆಯ ಹಿಂಭಾಗದಲ್ಲಿರುವ MRI ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಮತ್ತು ಇಸಿಜಿ ಮಾಡಲಿದ್ದಾರೆ.
ಏನಿದು ಪ್ರಕರಣ?:
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ.