ಅಪ್ಪ-ಅಮ್ಮ ಹಾಗೂ ಹಿರಿಯರ ಪೋಷಿಸದ ಮಕ್ಕಳಿಗಿಲ್ಲ ಆಸ್ತಿ: ಸಚಿವ ಕೃಷ್ಣ ಬೈರೇಗೌಡ
ತಂದೆ, ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ತಮ್ಮ ಆಸ್ತಿಯನ್ನು ವಿಲ್ ಅಥವಾ ದಾನಪತ್ರದ ಮೂಲಕ ನೀಡಿರುವುದನ್ನು ರದ್ದು ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನ ಪರಿಷತ್ (ಮಾ.13): ತಂದೆ, ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ತಮ್ಮ ಆಸ್ತಿಯನ್ನು ವಿಲ್ ಅಥವಾ ದಾನಪತ್ರದ ಮೂಲಕ ನೀಡಿರುವುದನ್ನು ರದ್ದು ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಕಾಂಗ್ರೆಸ್ ಸದಸ್ಯೆ ಬಲ್ಕಿಸ್ ಬಾನು ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಮಕ್ಕಳು ತಂದೆ-ತಾಯಿಗಳನ್ನು ಆರೈಕೆ ಮಾಡುತ್ತಿಲ್ಲ, ಅವರ ರಕ್ಷಣೆಗೆ ಕಾನೂನು ತರಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೊಸ ಕಾನೂನಿನ ಅಗತ್ಯವಿಲ್ಲ, ಕೇಂದ್ರ ಸರ್ಕಾರ 2007ರಲ್ಲೇ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಜಾರಿಗೆ ತಂದಿದೆ ಎಂದರು. ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರಿಕರು ಸೆಕ್ಷನ್ 9ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಲೋಕಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಕೇಂದ್ರದ ನಡೆ ಖಂಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ
ಹಿರಿಯ ನಾಗರಿಕರ ದೂರು ಸಾಬೀತಾದರೆ, ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೆ ಆಸ್ತಿ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ. ಈ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಈಗಾಗಲೇ ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಅಪೀಲು ಹೋಗಲೂ ಸಹ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಬಗರ್‌ಹುಕುಂ ಸಮಿತಿ 10 ದಿನದಲ್ಲಿ ರಚನೆ: ಭೂರಹಿತ ರೈತರಿಗೆ ಬಗರ್‌ಹುಕುಂ ಯೋಜನೆಯ ಅಡಿಯಲ್ಲಿ ಭೂ ಮಂಜೂರು ಮಾಡಲು ರಾಜ್ಯಾದ್ಯಂತ ಈವರೆಗೆ 185 ಸಮಿತಿಗಳನ್ನು ರಚಿಸಲಾಗಿದ್ದು, ಉಳಿದ 13 ಕ್ಷೇತ್ರದಲ್ಲಿ ಮುಂದಿನ 10 ದಿನದಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ.ಶೈಲೇಂದ್ರ ಬೆಲ್ದಾಳೆ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅತಿಹೆಚ್ಚು ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ.
ಈಗ ಮಾತ್ರವಲ್ಲ, ಮುಂದಿನ ಅವಧಿಗೂ ನಾನೇ ಮುಖ್ಯಮಂತ್ರಿ ಆಗಿರ್ತೇನೆ: ಸಿದ್ದರಾಮಯ್ಯ
ಅಲ್ಲದೆ, ಅರ್ಜಿ ವಿಲೇವಾರಿಗೊಳಿಸಿ ಅರ್ಹ ರೈತರಿಗೆ ಭೂ ಮಂಜೂರುಗೊಳಿಸುವ ಪ್ರಕ್ರಿಯೆಗೂ ಸಾಕಷ್ಟು ವೇಗ ತುಂಬಲಾಗುತ್ತಿದೆ. ರಾಜ್ಯದಲ್ಲಿ 185 ಸಮಿತಿಗಳನ್ನು ರಚಿಸಲಾಗಿದೆ. 13 ಕ್ಷೇತ್ರದಲ್ಲಿ ಸಮಿತಿಗಳನ್ನು ರಚಿಸುವುದು ಬಾಕಿ ಇದೆ. ಮುಂದಿನ 10 ದಿನದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ರೈತರು ಭೂ ಮಂಜೂರಾತಿಗಾಗಿ ನಮೂನೆ 53, ನಮೂನೆ 57ರಡಿ ಅರ್ಜಿ ಹಾಕಿದ್ದರೆ, ಅರ್ಜಿ ಇತ್ಯರ್ಥ ಆಗುವ ಮೊದಲು ಅವರನ್ನು ಭೂಮಿಯಿಂದ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಅಲ್ಲದೆ, ಅರ್ಜಿ ಹಾಕಿರುವ ಕಡೆ ಬೆಳೆ ತೆಗೆದುಕೊಳ್ಳಲೂ ಅಧಿಕಾರಿಗಳು ಅಡ್ಡಿಪಡಿಸಬಾರದು. ಈ ಸಂಬಂಧ ಸ್ಪಷ್ಟವಾದ ಕಾನೂನನ್ನು ರೂಪಿಸಲಾಗಿದೆ ಎಂದರು.