ನವದೆಹಲಿ(ಡಿ.16): ಕರ್ನಾಟದಲ್ಲಿ ಶೇ.21.3ರಷ್ಟುಹೆಣ್ಣು ಮಕ್ಕಳು 18 ವರ್ಷ ಪೂರ್ಣಗೊಳ್ಳುವ ಮುಂಚೆಯೇ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ ಎಂಬ ಆಘಾತಕಾರಿ ವರದಿಯನ್ನು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಗೊಳಿಸಿದೆ.

ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 6.1 ಲಕ್ಷ ಕುಟುಂಬಗಳನ್ನು ಸಂದರ್ಶಿಸಿ, ಜನಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಠಿಕಾಂಶ ಸಂಬಂಧಿತ ಮಾಹಿತಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಅತಿ ಹೆಚ್ಚು ಸಂಖ್ಯೆಯ ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಒಳಪಡುತ್ತಿರುವ ರಾಜ್ಯಗಳ ಪೈಕಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ತ್ರಿಪುರ ಮೊದಲ ಸ್ಥಾನದಲ್ಲಿವೆ. ಈ ಪ್ರಮಾಣ ಬಿಹಾರದಲ್ಲಿ ಶೇ.40.8, ತ್ರಿಪುರಾದಲ್ಲಿ ಶೇ.40.1, ಪಶ್ಚಿಮ ಬಂಗಾಳದಲ್ಲಿ ಶೇ.41.6ರಷ್ಟಿದೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಆಂಧ್ರದ ಶೇ.12.6, ಅಸ್ಸಾಂನ ಶೇ.11.7, ಬಿಹಾರದ ಶೇ.11 ಮತ್ತು ತ್ರಿಪುರದ ಶೇ.21.9ರಷ್ಟು15-19 ವಯೋಮಾನದ ಹೆಣ್ಣುಮಕ್ಕಳು ಈಗಾಗಲೇ ವಿವಾಹವಾಗಿ, ಗರ್ಭಿಣಿ ಕೂಡ ಆಗಿದ್ದಾರೆ. ಕೆಲವರು ಮಗುವಿಗೂ ಜನ್ಮ ನೀಡಿದ್ದಾರೆ.

ಉಳಿದಂತೆ ಕರ್ನಾಟಕ (21.3%), ಅಸ್ಸಾಂ (31.8%), ಆಂಧ್ರಪ್ರದೇಶ (29.3%), ಗುಜರಾತ್‌ (21.8%), ಮಹಾರಾಷ್ಟ್ರ (21.9%), ತೆಲಂಗಾಣ (23.5%) ಮತ್ತು ದಾದ್ರ ಮತ್ತು ನಾಗರ್‌ ಹಾವೇಲಿ ಹಾಗೂ ದಿಯು-ದಮನ್‌ನಲ್ಲಿ (26.4)ನಲ್ಲಿಯೂ ಬಾಲ್ಯವಿವಾಹ ಜೀವಂತವಾಗಿದೆ.

ಅಷ್ಟೇ ಅಲ್ಲದೆ ಪುರುಷರೂ ಸಹ 21 ವರ್ಷಕ್ಕೂ ಮೊದಲೇ ವಿವಾಹವಾಗುತ್ತಿದ್ದಾರೆ. ಈ ಪೈಕಿ ಅಸ್ಸಾಂ, ಬಿಹಾರ, ಗುಜರಾತ್‌, ತ್ರಿಪುರ, ಪಶ್ಚಿಮ ಬಂಗಾಳ, ಲಡಾಕ್‌ ಮೊದಲ ಸ್ಥಾನದಲ್ಲಿವೆ.