ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ನಿಪ್ಪಾಣಿಯವರಾದ ಪ್ರಸನ್ನ ಬಾಲಚಂದ್ರ ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ನವದೆಹಲಿ (ಜ.24): ಪ್ರಸ್ತುತ ಪರಿಶಿಷ್ಟ ಜಾತಿಯ ಏಕೈಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಕರ್ನಾಟಕದ ನಿಪ್ಪಾಣಿಯ ಪ್ರಸನ್ನ ಬಾಲಚಂದ್ರ ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿದೆ. ಪಿಬಿ ವರಾಳೆ ಅವರು ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸುಪ್ರೀಂ ಕೋರ್ಟ್ ಕೊಲಿಜಿಯಂ ಜನವರಿ 19 ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿಬಿ ವರಾಳೆ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಿತ್ತು. ಶಿಫಾರಸು ಮಾಡಿದ ಐದು ದಿನಗಳ ಬಳಿಕ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ. 2022ರ ಅಕ್ಟೋಬರ್ 15 ರಿಂದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಪಿಬಿ ವರಾಳೆ, ಪರಿಶಿಷ್ಠ ಜಾತಿ ಸಮುದಾಯದ ಏಕೈಕ ಹೈಕೋರ್ಟ್ ಜಡ್ಜ್ ಎನಿಸಿಕೊಂಡಿದ್ದಾರೆ. ಅದಲ್ಲದೆ, ಪರಿಶಿಷ್ಠ ಜಾತಿಯ ಅತ್ಯಂತ ಹಿರಿಯ ಹೈಕೋರ್ಟ್ ಜಡ್ಜ್ ಎನಿಸಿಕೊಂಡಿದ್ದರು. ಡಿಸೆಂಬರ್ 25 ರಂದು ಸಂಜಯ್ ಕಿಶನ್ ಕೌಲ್ ನಿವೃತ್ತಿಯ ಬಳಿಕ ಖಾಲಿಯಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸ್ಥಾನವನ್ನು ಜಸ್ಟೀಸ್ ಪಿಬಿ ವರಾಳೆ ತುಂಬಲಿದ್ದಾರೆ.
ಜಸ್ಟೀಸ್ ಪಿಬಿ ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ಸ್ಥಾನಕ್ಕೆ ಶಿಫಾರಸು ಮಾಡಿದ್ದರೆ, ಜಸ್ಟೀಸ್ ಪಿಎಸ್ ದಿನೇಶ್ ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಿತ್ತು. ಜಸ್ಟೀಸ್ ಪಿಎಸ್ ದಿನೇಶ್ ಕುಮಾರ್ ಅವರು 2024ರ ಫೆಬ್ರವರಿ 24 ರಂದು ನಿವೃತ್ತಿಯಾಗಲಿದ್ದು, ಮುಖ್ಯ ನ್ಯಾಯಮೂರ್ತಿಯಾಗಿ ಕೇವಲ ಒಂದು ತಿಂಗಳ ಅಧಿಕಾರವಧಿ ಮಾತ್ರವೇ ಇವರಿಗೆ ಇರಲಿದೆ.
ನ್ಯಾಯಮೂರ್ತಿ ವರಾಳೆ ಅವರ ಪೋಷಕ ಹೈಕೋರ್ಟ್ ಬಾಂಬೆ. ಅವರು 2008ರ ಜುಲೈ 18 ರಂದು ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. ಸುಪ್ರೀಂ ಕೋರ್ಟ್‌ನ ಪೀಠದಲ್ಲಿ ಈಗಾಗಲೇ ಬಾಂಬೆ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಇದ್ದಾರೆ.
