ಬೆಂಗಳೂರು(ಸೆ.05): ಉತ್ತಮ ಆರೋಗ್ಯಕ್ಕೆ ಬೇಕಾಗುವ ಅತಿ ಹೆಚ್ಚು ಪೌಷ್ಟಿಕಾಂಶಗಳುಳ್ಳ ಹಲಸಿನ ಬೀಜಗಳಿಂದ ಚಪಾತಿ ಮಾಡುವ ಹಿಟ್ಟನ್ನು ತಯಾರಿಸುವ ತಂತ್ರಜ್ಞಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಇತ್ತೀಚೆಗೆ ಅಭಿವೃದ್ಧಿ ಪಡಿಸಿದೆ.

ಹಲಸಿನ ಹಣ್ಣಿನಲ್ಲಿ ಅತಿ ಹೆಚ್ಚು ಪೌಷ್ಟಿಕ ಅಂಶಗಳಿವೆ. ಇದರಲ್ಲಿನ ಮೇಲ್ಪದರವನ್ನು ಬಿಟ್ಟು ಉಳಿದಂತೆ ಎಲ್ಲ ಅಂಶವನ್ನು ಮನುಷ್ಯ ಸೇವನೆ ಮಾಡಬಹುದಾಗಿದೆ. ಆದರೆ, ಶೇ.23 ರಷ್ಟು(ಬೀಜಗಳು ಸೇರಿ) ಪ್ರಮಾಣವನ್ನು ಬಳಕೆ ಮಾಡುತ್ತಿಲ್ಲ. ಆದ್ದರಿಂದ ಬೀಜಗಳಿಂದ ಚಪಾತಿ ಹಿಟ್ಟು ಮಾಡುವ ತಂತ್ರಜ್ಞಾನ ಪರಿಚಯಿಸಲಾಗಿದೆ.

ಹಲಸಿನ ಹಣ್ಣಿನಿಂದ ಈಗಾಗಲೇ ಜ್ಯೂಸ್‌, ಐಸ್‌ಕ್ರೀಮ್‌ ಮತ್ತು ಚಾಕೋಲೇಟ್‌ ಸಿದ್ದಪಡಿಸಲಾಗುತ್ತಿದೆ. ಇದೀಗ ಹಲಸಿನ ಹಣ್ಣಿನ ಬೀಜಗಳಲ್ಲಿ ಚಪಾತಿ ಹಿಟ್ಟು ಮಾಡುವ ತಂತ್ರಜ್ಞಾನ ಪರಿಚಯಿಸಿದ್ದು, ಮುಂದಿನ ದಿನಗಳಲ್ಲಿ ಗೋದಿ ಹಿಟ್ಟಿನ ಮಾದರಿಯಲ್ಲಿ ಹಲಸಿನ ಹಿಟ್ಟನ್ನು ಬಳಕೆ ಮಾಡಬಹುದಾಗಿದೆ. ಈ ಹಿಟ್ಟಿನಲ್ಲಿ ಹೆಚ್ಚು ಪ್ರಮಾಣದ ರೋಗ ನಿರೋಧಕ ಶಕ್ತಿ ಇದೆ. ಇದನ್ನು ಸೇವಿಸುವುದರಿಂದ ಆರೋಗ್ಯ ಸುಧಾರಣೆಯಾಗಲಿದೆ ಎಂದು ಐಐಎಚ್‌ಆರ್‌ನ ಹಣ್ಣು ಮತ್ತು ತರಕಾರಿ ಸಂಸ್ಕರಣ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಸಿ.ಕೆ.ನಾರಾಯಣ ಮಾಹಿತಿ ನೀಡಿದ್ದಾರೆ.

ಹೆದ್ದಾರಿ ಬದಿ ಪ್ರಯಾಣಿಕರಿಗೆ ಉಚಿತ ಹಲಸಿನ ಹಣ್ಣು

ಹಲಸಿನಲ್ಲಿರುವ ಪೋಷಕಾಂಶಗಳು:

ಹಲಸಿನ ಮರದ ಪ್ರತಿಯೊಂದು ಭಾಗವೂ ಉಪಯುಕ್ತವಾದುದು. ಅದರಲ್ಲೂ ಹಣ್ಣು, ಅದರಲ್ಲಿರುವ ಬೀಜಗಳು ಮತ್ತಷ್ಟುಉಪಯುಕ್ತ. ಆದರೆ ಹಲಸಿನ ಹಣ್ಣಿನ ಸೀಸನ್‌ನಲ್ಲಿ ಈ ಹಣ್ಣನ್ನು ಮನೆಗೆ ತಂದವರು ಹಣ್ಣು ತಿಂದು ಬೀಜಗಳನ್ನು ಬಿಸಾಡುತ್ತಾರೆ. ಕೆಲವರು ಮಾತ್ರ ಬೀಜಗಳಿಂದ ಸಾಂಬಾರ್‌ ಮಾಡುತ್ತಾರೆ.

ಹಲಸಿನ ಬೀಜಗಳಲ್ಲಿ ನ್ಯೂಟ್ರೀಷಿಯನ್ಸ್‌, ಕ್ಯಾಲ್ಷಿಯಂ, ಮೆಗ್ನೀಷಿಯಂ, ಪ್ರೋಟಿನ್‌ಗಳು ಹೇರಳವಾಗಿವೆ. ಇದರ ಜೊತೆಗೆ ನಾರಿನಂಶವೂ ಇದೆ. ಬರಿ ಹಲಸಿನ ಬೀಜದ ಹಿಟ್ಟಿನಲ್ಲಿ ಜಿಗಟು ಅಂಶ ಇಲ್ಲದ ಕಾರಣ ಚಪಾತಿ ಮಾಡುವುದು ಕಷ್ಟ. ಹೀಗಾಗಿ ಗೋಧಿ ಹಿಟ್ಟಿನ ಜೊತೆಗೆ ಶೇ.30-40 ರಷ್ಟು ಮಿಶ್ರಣವು ಮಾಡಿಕೊಳ್ಳಬೇಕಾಗುತ್ತದೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಧನ್ಯ ಫುಡ್ಸ್‌ (ರೆಡಿ ಟು ಈಟ್‌ ಚಪಾತಿ) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಇದರ ಸಾಧಕ- ಬಾಧಕಗಳನ್ನು ನೋಡಿಕೊಂಡು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡಲಾಗುವುದು ಎಂದು ಅವರು ವಿವರಿಸಿದರು.

ಹಲಸು ಉತ್ಪಾದನೆಯಲ್ಲಿ ಕರ್ನಾಟಕ 4 ನೇ ಸ್ಥಾನ

ಭಾರತದಲ್ಲಿ ವಾರ್ಷಿಕ 1.7 ಮಿಲಿಯನ್‌ ಟನ್‌ (17 ಲಕ್ಷ ಟನ್‌) ಹಲಸು ಉತ್ಪಾದನೆಯಾಗುತ್ತಿದೆ. ಈ ಪೈಕಿ ತ್ರಿಪುರಾ ಅತಿ ಹೆಚ್ಚು ಹಲಸು ಬೆಳೆಯುವ ರಾಜ್ಯವಾಗಿದ್ದು ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ 2 ನೇ ಸ್ಥಾನದಲಿದೆ. ನಂತರದ ಸ್ಥಾನವನ್ನು ಕೇರಳ ಪಡೆದುಕೊಂಡರೆ, ಕರ್ನಾಟಕ ಹಲಸು ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ.